ಬೀದರ್: ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮುಖ್ಯ ಕಚೇರಿ ಎದುರು ನಡೆದ ದರೋಡೆ ಪ್ರಕರಣದ ಇಬ್ಬರು ದರೋಡೆಕೋರರ ಗುರುತು ಪತ್ತೆ ಹಚ್ಚುವಲ್ಲಿ ಬೀದರ್ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಫತೇಪುರ ಫುಲ್ವರಿಯಾ ನಿವಾಸಿ ಅಮನ್ ಕುಮಾರ್ ರಾಜಕಿಶೋರ್ ಸಿಂಗ್ ಹಾಗೂ ಅದೇ ಜಿಲ್ಲೆಯ ಮಹಿಸೋರ್ ನಿವಾಸಿ ಅಲೋಕ್ ಕುಮಾರ್ ಅಲಿಯಾಸ್ ಅಶುತೋಷ್ ಶತ್ರುಘ್ನ ಪ್ರಸಾದ್ ಸಿಂಗ್ ಕೃತ್ಯ ಎಸಗಿದವರು ಎಂದು ಗುರುತಿಸಲಾಗಿದೆ.
ಇಬ್ಬರೂ ಉತ್ತರ ಪ್ರದೇಶದ ಮಿರ್ಜಾಪುರ ಸೇರಿದಂತೆ ಹಲವು ಕಡೆ ಬ್ಯಾಂಕ್ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆರೋಪಿಗಳಿಬ್ಬರ ಕುಟುಂಬದವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವರ ಗುರುತು ಪತ್ತೆಯಾದ ನಂತರ ಬೀದರ್ ಜಿಲ್ಲಾ ಪೊಲೀಸರು ಬಿಹಾರದ ಹಲವೆಡೆ ‘ಬೇಕಾಗಿದ್ದಾರೆ’ ಎಂದು ಪೋಸ್ಟರ್ ಅಂಟಿಸಿದ್ದಾರೆ. ಇಬ್ಬರ ಬಗ್ಗೆ ಮಾಹಿತಿ ಕೊಟ್ಟವರಿಗೆ ರೂ. 5 ಲಕ್ಷ ನಗದು ಬಹುಮಾನ ಕೂಡ ಘೋಷಿಸಿದ್ದಾರೆ.
ಜನವರಿ 16ರಂದು ಬ್ಯಾಂಕಿನಿಂದ ಎಟಿಎಂಗಳಿಗೆ ಜಮೆ ಮಾಡಲು ಹಣ ಕೊಂಡೊಯ್ಯುತ್ತಿದ್ದ ಎಸ್ಬಿಐನ ಸಿಎಂಎಸ್ ಕಂಪನಿಯ ಇಬ್ಬರು ನೌಕರರ ಮೇಲೆ ಗುಂಡಿನ ದಾಳಿ ನಡೆಸಿ, ರೂ. 83 ಲಕ್ಷ ನಗದು ಹಣವಿದ್ದ ಟ್ರಂಕ್ ಅನ್ನು ಬೈಕ್ ಮೇಲೆ ಇಟ್ಟುಕೊಂಡೇ ಪರಾರಿಯಾಗಿದ್ದರು. ಘಟನೆಯಲ್ಲಿ ಸಿಎಂಎಸ್ ಕಂಪನಿಯ ಕ್ಯಾಶ್ ಕಸ್ಟೋಡಿಯನ್ ಗಿರಿ ವೆಂಕಟೇಶ ಸ್ಥಳದಲ್ಲೇ ಮೃತಪಟ್ಟಿದ್ದರು. ಶಿವಕುಮಾರ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು.