ಸಮಾಜದ ಕಣ್ತೆರೆಸುವ ಮಹತ್ತರ ಗ್ರಂಥ “ ಭೂ ಸ್ವಾಧೀನ ಒಳಸುಳಿಗಳು”

Most read

ನಗರೀಕರಣಕ್ಕೊಳಗಾದ ಭಾರತದ ಸುಶಿಕ್ಷಿತ, ಹಿತವಲಯದ ಮಧ್ಯಮ ವರ್ಗಗಳು, ʼಭೂಮಿ ಪ್ರಶ್ನೆಗೂ ನಮಗೂ ಸಂಬಂಧವೇ ಇಲ್ಲ’ ಎಂಬ ಧೋರಣೆಯಲ್ಲಿ ನವ ಉದಾರವಾದದ ಫಲಾನುಭವಿಗಳಾಗುತ್ತಿದ್ದಾರೆ. ದಲಿತ-ತಳಸಮುದಾಯಗಳ ಹೋರಾಟಗಳೂ ಸಹ ಭೂ ಹೋರಾಟಗಳಿಂದ ವಿಮುಖವಾಗಿರುವುದು ಈ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿ ವಿದ್ಯಮಾನದ ಸುತ್ತಲಿನ ಚರಿತ್ರೆ ಮತ್ತು ವರ್ತಮಾನದ ಸ್ಥಿತಿಗತಿಗಳನ್ನು ವಿಶಾಲ ಸಮಾಜದ ಮುಂದಿಡುವ ಬಹುದೊಡ್ಡ ಜವಾಬ್ದಾರಿಯನ್ನು “ ಭೂ ಸ್ವಾಧೀನ ಒಳಸುಳಿಗಳು ” ಎಂಬ ಅಮೂಲ್ಯ ಹೊತ್ತಿಗೆ ನೆರವೇರಿಸುತ್ತಿದೆ -ನಾ ದಿವಾಕರ, ಚಿಂತಕರು.

ಭಾರತದಂತಹ ಕೃಷಿ ಪ್ರಧಾನ ಹಾಗೂ ಸಾಮಾಜಿಕವಾಗಿ ಹಿಂದುಳಿದ, ಆರ್ಥಿಕವಾಗಿ ಬೆಳವಣಿಗೆಯ ಹಾದಿಯಲ್ಲಿರುವ ದೇಶದಲ್ಲಿ, ಬಹುಸಂಖ್ಯಾತ ಮನುಷ್ಯ ಸಮಾಜದ ಬದುಕು ಮತ್ತು ಜೀವನೋಪಾಯಕ್ಕೆ ಅಡಿಪಾಯವಾಗಿ ಪರಿಣಮಿಸುವ ʼಭೂಮಿʼ ಸದಾ ಚರ್ಚೆಯಲ್ಲಿರುವ ಪ್ರಶ್ನೆಯಾಗಿರುತ್ತದೆ. ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಡಿಜಿಟಲ್‌ ಯುಗದಲ್ಲೂ ಭಾರತದ ಶೇಕಡಾ 65ಕ್ಕೂ ಹೆಚ್ಚು ಜನರು ಭೂಮಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಚಟುವಟಿಕೆಯ ಸುತ್ತಲಿನ ಬದುಕಿನಲ್ಲಿ ಭೂಮಿಯ ಸಂಪನ್ಮೂಲಗಳನ್ನೇ ಅವಲಂಬಿಸಿ ತಮ್ಮ ಕಸುಬು, ವೃತ್ತಿ ಮತ್ತು ಕಾಯಕವನ್ನು ನಡೆಸುವ ಅಸಂಖ್ಯಾತ ಜನರು ಭಾರತದಲ್ಲಿ ಬಹುಸಂಖ್ಯೆಯಲ್ಲೇ ಇದ್ದಾರೆ. ಹಾಗಾಗಿಯೇ ಭೂಮಿ ಮತ್ತು ಕೃಷಿ ತಳಸಮಾಜದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಅಭ್ಯುದಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಭೂ ಹೋರಾಟಗಳ ಚರಿತ್ರೆಯನ್ನು ಗಮನಿಸಿದಾಗ, ಸಾವಿರಾರು ಜನರು ತುಂಡು ಭೂಮಿಗಾಗಿ ಜೀವ ತೆತ್ತ ಕರಾಳ ಚಿತ್ರಣ ನಮ್ಮೆದುರು ಅನಾವರಣಗೊಳ್ಳುತ್ತದೆ. 1940ರ ತೆಲಂಗಾಣದಿಂದ 2020ರ ದೆಹಲಿಯವರೆಗೆ ಹರಡುವ ಈ ತ್ಯಾಗ, ಬಲಿದಾನ, ಸಂಘರ್ಷ ಮತ್ತು ಅಳಿವು ಉಳಿವಿನ ಹೋರಾಟಗಳು ನಿದರ್ಶನಪ್ರಾಯವಾಗಿವೆ.

ನವ ಉದಾರವಾದದ ಜಗತ್ತಿನಲ್ಲಿ

ಈ ನಡುವೆಯೇ ಡಿಜಿಟಲ್‌ ಯುಗದ ಬಂಡವಾಳಶಾಹಿ-ನವ ಉದಾರವಾದಿ ಆರ್ಥಿಕತೆಯ ಪರಿಣಾಮವಾಗಿ ಭಾರತದ ಕೃಷಿ ವಲಯ ಹಲವು ಆಯಾಮಗಳ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಶೇಕಡಾ 86ರಷ್ಟು ಸಣ್ಣ-ಅತಿಸಣ್ಣ ರೈತರನ್ನೊಳಗೊಂಡ ಭಾರತದ ಕೃಷಿ ವಲಯ ಉತ್ಪಾದನೆಯಲ್ಲಿ ಏರುಗತಿಯಲ್ಲಿದ್ದರೂ, ಉತ್ಪಾದಕ ಶಕ್ತಿಗಳು, ಅಂದರೆ ರೈತಾಪಿ ವರ್ಗದ ಜೀವನ ದಿನದಿಂದ ದಿನಕ್ಕೆ ಅಧೋಗತಿಯತ್ತ ಸಾಗುತ್ತಿದೆ. ಇದಕ್ಕೆ ಸರ್ಕಾರಗಳ ಕೃಷಿ ನೀತಿಗಳು ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ದಬ್ಬಾಳಿಕೆ ಒಂದು ಕಾರಣವಾದರೆ ಮತ್ತೊಂದು ಕಾರಣ ರೈತ ಬೆಳೆದ ಫಸಲಿಗೆ ಸೂಕ್ತ ಬೆಲೆ ದೊರೆಯದೆ ಇರುವುದು. ಕಳೆದ ಮೂರು ದಶಕಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಲಕ್ಷಾಂತರ ರೈತರಲ್ಲಿ ಇದನ್ನು ಗುರುತಿಸಬಹುದು. ಭೂಮಿಯನ್ನೇ ನಂಬಿ ಬದುಕುವ ಮತ್ತೊಂದು ವರ್ಗ, ಆದಿವಾಸಿ ಬುಡಕಟ್ಟು ಸಮುದಾಯಗಳು, ಇದೇ ಆರ್ಥಿಕ ನೀತಿಗಳ ಪರಿಣಾಮವಾಗಿ ತಮ್ಮ ಬದುಕಿನ ಅಡಿಪಾಯವನ್ನೇ ಕಳೆದುಕೊಳ್ಳುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಶತಮಾನಗಳಿಂದ ತಾವು ನಂಬಿ ಬದುಕಿದ ಭೂಮಿ ಇಂದು ಆದಿವಾಸಿಗಳ ಪಾಲಿಗೆ ಮರೀಚಿಕೆಯಾಗುತ್ತಿದೆ. ಹೀಗೆ ಮೂಲೋತ್ಪಾಟನೆಯಾಗುತ್ತಿರುವ ಬುಡಕಟ್ಟು ಸಮುದಾಯಗಳು, ನಗರ ಜೀವನದಲ್ಲಿ ಕೂಲಿಯಾಳುಗಳಾಗಿ, ವಲಸೆ ಕಾರ್ಮಿಕರಾಗಿ ದುರ್ಭರ ಬದುಕು ಸಾಗಿಸುವುದು ಸಾಮಾನ್ಯವಾಗಿದೆ..

ಭೂ ಸ್ವಾಧೀನ ಪ್ರಕ್ರಿಯೆಯ ಒಳಹೊರಗು

ಫೋಟೋ :ರಮೇಶ್ ಚೀಮಾಚನಹಳ್ಳಿ

“ ನಮ್ಮ ಭೂಮಿ ನಮಗಿರಲಿ ಅನ್ಯರಿಗಲ್ಲ ” ಎಂಬ ಘೋಷ ವಾಕ್ಯದಲ್ಲಿ ನಮ್ಮ ಎಂದರೆ ಕೇವಲ ರೈತರು ಅಥವಾ ಕೃಷಿಯನ್ನು ನಂಬಿದವರು ಮಾತ್ರವೇ ಅಲ್ಲ, ಈ ಉತ್ಪಾದಕೀಯ ಶಕ್ತಿಗಳ ಬೆವರಿನ ದುಡಿಮೆಯ ಫಲಾನುಭವಿ ನಗರೀಕೃತ ಸಮಾಜವೂ ಸೇರುತ್ತದೆ ಎಂಬ ಪರಿವೆ ನಮ್ಮೊಳಗಿರಬೇಕು. ಇದೇ ಘೋಷ ವಾಕ್ಯದಡಿಯಲ್ಲೇ ಹೊರತಂದಿರುವ “ ಭೂ ಸ್ವಾಧೀನ ಒಳಸುಳಿಗಳು ” ಈ ದೃಷ್ಟಿಯಿಂದ ಸಮಾಜದ ಕಣ್ತೆರೆಸುವ ಮಹತ್ತರ ಗ್ರಂಥವಾಗಿ ಕಾಣುತ್ತದೆ. “ ಭರವಸೆಯ ಬೆಳಕಿನ ಜಾಡು ಹಿಡಿದು ” ಎಂಬ ಉಪಶೀರ್ಷಿಕೆಯೊಡನೆ ಸಮಾಜದ ಮುಂದಿರುವ ಈ ಗ್ರಂಥವನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ, ರಾಜಕೀಯ ಚೌಕಟ್ಟುಗಳೊಳಗೆ, ಆರ್ಥಿಕ ಆವರಣದಲ್ಲಿಟ್ಟು ಓದಿದಾಗ, ನಮಗೆ ಭೂಮಿ ಮತ್ತು ಮನುಷ್ಯ ಸಮಾಜದ ನಡುವಿನ ಸೂಕ್ಷ್ಮ ಸಂಬಂಧಗಳು ಅರ್ಥವಾಗಲು ಸಾಧ್ಯ.

ಒಂದು ಸಂಶೋಧಕ-ಸಾಹಿತ್ಯಕ ಬೌದ್ಧಿಕ ಪರಿಶ್ರಮವನ್ನು ಸಾಮೂಹಿಕವಾಗಿ ಸಮಾಜದ ಮುಂದಿಡುವ ವಿಧಾನವೇ ಬಹುಶಃ ಹೊಸತು ಎನಿಸುತ್ತದೆ. “ ಭೂ ಸ್ವಾಧೀನದ,,,,, ” ಪುಸ್ತಕವು ಇದನ್ನು ಆಗುಮಾಡಿದೆ. ವಿವಿಧ ಕಾರ್ಯಕರ್ತರ, ಕೃಷಿ ತಜ್ಞರ, ಅರ್ಥಶಾಸ್ತ್ರಜ್ಞರ, ಸಮಾಜ ಶಾಸ್ತ್ರಜ್ಞರ ಅಧ್ಯಯನ, ಅರಿವು ಮತ್ತು ಅಭಿವ್ಯಕ್ತಿಗಳನ್ನು ಒಂದುಗೂಡಿಸಿ ಹೊರತಂದಿರುವ ಈ ಕೃತಿಯ ಎಂಟು ಅಧ್ಯಾಯಗಳು ಮತ್ತು ಎಂಟು ಅನುಬಂಧಗಳು ಕೇವಲ ಸರ್ಕಾರಗಳು ಜಾರಿಗೊಳಿಸಿರುವ ರೈತ-ಜನವಿರೋಧಿ ಕಾಯ್ದೆಗಳನ್ನು ಪರಿಚಯಿಸುವುದಷ್ಟೇ ಅಲ್ಲದೆ, ಅದರ ಹಿಂದಿನ ಉದ್ದೇಶಗಳನ್ನೂ ಓದುಗರ ಮುಂದಿಡುತ್ತದೆ.

ಕೃತಿಯ ಮಹತ್ವ ಮತ್ತು ಉಪಯುಕ್ತತೆ

“ ಭೂ ಸ್ವಾಧೀನ,,,,, ” ಕೃತಿಯು ಬಹುಮುಖ್ಯವಾಗಿ ಸಮಾಜದ ಕೃಷಿಯೇತರ ವರ್ಗವನ್ನು ತಲುಪಬೇಕಿದೆ. ಸ್ವತಂತ್ರ ಭಾರತದ ಸರ್ಕಾರಗಳ ಭೂ ಸ್ವಾಧೀನ ಕಾಯ್ದೆಗಳು ರೈತಾಪಿಯ ಬದುಕನ್ನು ಹೇಗೆ ದುಸ್ತರಗೊಳಿಸಿವೆ ಎನ್ನುವುದನ್ನು ಕಾನೂನಾತ್ಮಕ ನೆಲೆಯಲ್ಲಿ ವಿವರಿಸುವುದರೊಂದಿಗೇ (ಅಧ್ಯಾಯ 1) ರೈತರ ಭೂಮಿಯನ್ನು ಕಸಿದುಕೊಳ್ಳಲು ರೂಪಿಸಲಾಗಿರುವ ಸಾಂಸ್ಥಿಕ ಚೌಕಟ್ಟುಗಳ ಪರಿಚಯವನ್ನೂ ನೀಡಲಾಗಿದೆ (ಅಧ್ಯಾಯ 2). ಈ ಭೂ ಸ್ವಾಧೀನವನ್ನು ತಡೆಗಟ್ಟಲು ಸಾಧ್ಯವೇ ಇಲ್ಲವೇ ? ಎಂಬ ಪ್ರಶ್ನೆಗೆ ಸಾಧ್ಯವಿದೆ ಎಂಬ ಭರವಸೆ ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಅಧ್ಯಾಯ 3 ಮತ್ತು 4ರಲ್ಲಿ ಒದಗಿಸಲಾಗಿದೆ. ಹೆದ್ದಾರಿ, ಮೇಲ್ಸೇತುವೆ, ಅಣೆಕಟ್ಟು, ವಿದ್ಯುತ್‌ ಉತ್ಪಾದನೆ, ಪರಮಾಣು ಘಟಕಗಳು, ಗಣಿಗಾರಿಕೆ ಹೀಗೆ ಔದ್ಯೋಗಿಕ-ಔದ್ಯಮಿಕ ಜಗತ್ತಿನ ವಿಸ್ತರಣೆಗಾಗಿ ತಮ್ಮ ಭೂಮಿಯನ್ನು ನಿರಂತರವಾಗಿ ಕಳೆದುಕೊಳ್ಳುತ್ತಲೇ ಇರುವ ಲಕ್ಷಾಂತರ ಸಂತ್ರಸ್ತರು ಇಂದು ಭಾರತದ ಅತ್ಯಂತ ನಿರ್ಲಕ್ಷಿತ ಸಮಾಜವಾಗಿ ಕಾಣುತ್ತಾರೆ. ಈ ಹಾದಿಯಲ್ಲಿ ಬದಿಗೆಸೆಯಲ್ಪಟ್ಟ ಅಪಾರ ಜನಸ್ತೋಮದ ಹಕ್ಕುಗಳನ್ನು ಪರಿಚಯಿಸುವುದೇ ಅಲ್ಲದೆ ಈ ಸಮಾಜಗಳ ದುಸ್ತರ ಬದುಕು ಬವಣೆಯನ್ನು ಪುಸ್ತಕದ ಅಧ್ಯಾಯ 5 ಮತ್ತು 6ರಲ್ಲಿ ಸವಿಸ್ತಾರವಾಗಿ ನೀಡಲಾಗಿದೆ. (ಏನು ಹೇಳಲಾಗಿದೆ ಎಂಬುದನ್ನು ಪುಸ್ತಕ ಕೊಂಡು ಓದಿಯೇ ತಿಳಿಯಲಿ ಎಂಬ ಸದುದ್ದೇಶದಿಂದ ನಾನು ವಿವರಗಳನ್ನು ನೀಡುತ್ತಿಲ್ಲ )

ಆದರೆ ಈ ಬದುಕು ಬವಣೆಯನ್ನು ಹತ್ತಿರದಿಂದ ನೋಡಿದವರಾಗಲೀ, ಓದಿ ತಿಳಿದುಕೊಂಡವರಾಗಲೀ ಯೋಚಿಸಬೇಕಿರುವುದು ಕೇವಲ ಈ ಸಮಾಜದ ಬಗ್ಗೆ ಮಾತ್ರವಲ್ಲ. ಬದಲಿಗೆ ಸತತವಾಗಿ ಕ್ಷೀಣಿಸುತ್ತಿರುವ ಕೃಷಿ ಯೋಗ್ಯ ಭೂಮಿ ಮತ್ತು ಅದನ್ನು ಕಬಳಿಸುತ್ತಿರುವ ಆಧುನಿಕ ಮೂಲ ಸೌಕರ್ಯಗಳು, ಈಗಾಗಲೇ ಹೆಚ್ಚಾಗುತ್ತಿರುವ ಸಾಮಾಜಿಕಾರ್ಥಿಕ ಅಸಮಾನತೆಗಳನ್ನು ಹೇಗೆ ಹಿಗ್ಗಿಸುತ್ತವೆ ಎಂಬುದರ ಬಗ್ಗೆ ಅರಿವು ಮೂಡಿಸಿ ಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಧ್ಯಾಯ 7ರಲ್ಲಿ ಪರಾಮರ್ಶಿಸಿರುವ ಸಮಸ್ಯೆಗಳು, ಮಿತಿಗಳು ಮತ್ತು ಅವಕಾಶಗಳನ್ನು ಕುರಿತ ಬರಹ ಉಪಯುಕ್ತವಾಗಿ ಕಾಣುತ್ತದೆ. “ಕಳೆದುಕೊಂಡವರು ಮರಳಿ ಪಡೆಯಲು ಹೋರಾಡಲೇಬೇಕು” ಎನ್ನುವುದು ಸ್ವಾಭಾವಿಕ ನಿಯಮ. ಇದು ಭೂಮಿಯ ವಿಷಯದಲ್ಲೂ ಅಷ್ಟೇ ಪ್ರಸ್ತುತ. ಆದರೆ ಈ ಹೋರಾಟದ ರೂಪು ರೇಷೆಗಳು, ತಾತ್ವಿಕ ನೆಲೆಗಳು, ಸೈದ್ಧಾಂತಿಕ ಸ್ಪರ್ಶ ಹಾಗೂ ಸಾಮಾಜಿಕ ಆಯಾಮಗಳು ಹೆಚ್ಚು ಪ್ರಾದೇಶಿಕ ಅಥವಾ ಪ್ರಾಂತೀಯವಾದಷ್ಟೂ, ಭೂಸ್ವಾಧೀನ ವಿರೋಧಿ ಹೋರಾಟಗಳೂ ಸಹ ವಿಘಟಿತವಾಗಿಯೇ ಇರಲು ಸಾಧ್ಯ

ಫೋಟೋ : ರಮೇಶ್ ಚೀಮಾಚನಹಳ್ಳಿ

ಪುಸ್ತಕದ ಎರಡನೆ ಭಾಗದಲ್ಲಿ ಒದಗಿಸಲಾಗಿರುವ ಅನುಬಂಧಗಳು ನಿರಂತರ ಹೋರಾಟದಲ್ಲಿ ತೊಡಗಿರುವ ಸಂಘಟನೆಗಳಿಗೆ ಒಂದು ಕೈಪಿಡಿಯಂತೆ ರೂಪುಗೊಂಡಿದೆ. ಅಧ್ಯಾಯ 8ರಲ್ಲಿ ಹೇಳಿರುವಂತೆ ʼಹೋರಾಟವೊಂದೇ ದಾರಿʼ. ಭೂಮಿ ಎನ್ನುವ ನಿಸರ್ಗದ ಅಮೂಲ್ಯ ಕೊಡುಗೆಯನ್ನು ನಮ್ಮದಾಗಿಸಿಕೊಳ್ಳುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಅಂದರೆ ಈ ಸಂಪತ್ತು ಮಾರುಕಟ್ಟೆಯ ಲಾಭದ ಕಚ್ಚಾವಸ್ತುವಾಗದೆ, ಭವಿಷ್ಯದ ತಲೆಮಾರಿನ ಸುಸ್ಥಿರ ಬದುಕಿಗೆ ಮೂಲ ನೆಲೆಯಾಗಿ ಉಳಿಯಬೇಕಾದ ಅವಶ್ಯಕತೆ ಇದೆ. ಇದನ್ನು ಆಗುಮಾಡುವ ನಿಟ್ಟಿನಲ್ಲಿ ಅಧ್ಯಾಯ 8ರಲ್ಲಿ ಒದಗಿಸುವ ಮಾರ್ಗದರ್ಶಿ ಸೂತ್ರಗಳು ಸರ್ವವೇದ್ಯವಷ್ಟೇ ಅಲ್ಲ, ಅಗತ್ಯವಾಗಿ ಪಾಲಿಸಲೇಬೇಕಾದ ಸಾಮಾಜಿಕ ಅನುಶಾಸನವಾಗಿ ಕಾಣಬೇಕಿದೆ. ಸಾಮೂಹಿಕ ಪ್ರಯತ್ನದ ಒಂದು ಫಲಶ್ರುತಿಯಾಗಿ ಅಕ್ಷರ ರೂಪ ತಳೆದಿರುವ “ಭೂ ಸ್ವಾಧೀನ ಒಳಸುಳಿಗಳು” ಕೃತಿಯ ಸಾರ್ಥಕತೆಯೂ ಇದರಲ್ಲೇ ಅಡಗಿದೆ.

ಈ ಪುಸ್ತಕವನ್ನು ಹೊರತಂದಿರುವ “ ನಮ್ಮ ಭೂಮಿ ನಮಗಿರಲಿ ಅನ್ಯರಿಗಲ್ಲ ” ಅಭಿಯಾನ ಮತ್ತು ಅದನ್ನು ಮುನ್ನಡೆಸುತ್ತಿರುವ ಕ್ರಿಯಾಶೀಲ ಮನಸ್ಸುಗಳೊಂದಿಗೆ ಇಡೀ ಸಮಾಜವೇ ಕೈಜೋಡಿಸಿ, ಹೆಗಲು ನೀಡಬೇಕಿದೆ. ಇದು ನಮ್ಮ ಸಾಮಾಜಿಕ ಬಾಧ್ಯತೆಯೂ, ಆದ್ಯತೆಯೂ, ಕರ್ತವ್ಯವೂ ಆಗಬೇಕಿದೆ.

ನಾ. ದಿವಾಕರ

ಚಿಂತಕರು.


ಇದನ್ನೂ ಓದಿ- ಕೃಷಿ ಸಾಲಕ್ಕೂ ಆಪತ್ತು; ಕಡಿತವಾಯ್ತು ನಬಾರ್ಡ್ ಸವಲತ್ತು

More articles

Latest article