ಭೋವಿ ಅಭಿವೃದ್ಧಿ ನಿಗಮದ ಹಗರಣ, ಸಿಬಿಐಗೆ ಏಕೆ ಒಪ್ಪಿಸಬಾರದು? ಹೈಕೋರ್ಟ್ ಪ್ರಶ್ನೆ

Most read

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಹಗರಣವನ್ನು ಸಿಬಿಐಗೆ ಏಕೆ ವಹಿಸಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೆ ಈ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪ್ರಮುಖ ಆರೋಪಿಗಳನ್ನು ಬಂಧನ ಮಾಡದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ನ್ಯೂ ಡ್ರೀಮ್ಸ್ ಎಂಟರ್ಪ್ರೈಸಸ್ ಮಾಲೀಕರಾದ ಎಂ.ಯಶಸ್ವಿನಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜೀವನ್, ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಯು ಪೂರ್ವಾಗ್ರಹ ಭಾವನೆಯಿಂದ ಕೂಡಿದೆ. ಎಫ್ಐಆರ್ ದಾಖಲಾಗಿ 20 ತಿಂಗಳು ಕಳೆದರೂ ಈವರೆಗೆ ಪ್ರಕರಣದ 1, 2, 3 ಮತ್ತು 5ನೇ ಆರೋಪಿಗಳನ್ನು ವಿಚಾರಣೆಗೆ ಕರೆದಿಲ್ಲ. ಆರೋಪಿಗಳು ಜಾಮೀನನ್ನೂ ಪಡೆದಿಲ್ಲ. ಆದರೂ ಪೊಲೀಸರು ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವಾದಕ್ಕೆ ಪ್ರತಿವಾದ ಮಂಡಿಸಿದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ತನಿಖಾಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದರು. ಆದರೆ, ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ ಕಾರಣ ಬಿಡುಗಡೆ ಮಾಡಲಾಗಿದೆ ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಉಳಿದ ಆರೋಪಿಗಳನ್ನು ಏಕೆ ಬಿಟ್ಟಿದ್ದೀರಿ? ಜಾಮೀನು ಪಡೆಯದಿದ್ದರೂ ಅವರನ್ನು ಏಕೆ ಬಂಧಿಸಿಲ್ಲ? ಇಷ್ಟು ದೊಡ್ಡ ಹಗರಣ ನಡೆದಿದೆ ಎಂಬ ಆರೋಪ ಇದ್ದಾಗಲೂ ತನಿಖೆ ಯಾಕೆ ಬಸವನ ಹುಳದಂತೆ ತೆವಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

ಭೋವಿ ನಿಗಮದಲ್ಲಿ ರೂ. 100 ಕೋಟಿಗೂ ಹೆಚ್ಚಿನ ಮೊತ್ತದ ಹಗರಣ ನಡೆದಿದೆ. ತಪ್ಪಿತಸ್ಥರು ಒಂದೂವರೆ ವರ್ಷದಿಂದ ಸುರಕ್ಷಿತವಾಗಿದ್ದಾರೆ. ಸರ್ಕಾರ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಎದ್ದು ಕಾಣಿಸುತ್ತಿದೆ. ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಯನ್ನು ಇದುವರೆಗೂ ಬಂಧಿಸಿಲ್ಲ. ರಾಜ್ಯ ಸರ್ಕಾರ ನಡೆಸುವ ತನಿಖೆ ಈ ರೀತಿ ಇರುತ್ತದೆಯೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ನ್ಯಾಯಮೂರ್ತಿಗಳು ಸಿಬಿಐಗೆ ವಹಿಸಲು ಇದಕ್ಕಿಂತ ಅರ್ಹ ಪ್ರಕರಣ ಮತ್ತೊಂದಿಲ್ಲ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಮುಂದೂಡಿದರು.

More articles

Latest article