ಭಾವನಾಳ ಚಾರಿತ್ರ್ಯವಧೆ ಮಾಡುತ್ತಿರುವವರು ಈಗ ಚಿಂತಿಸಬೇಕಾದ್ದು ಭಾವನಾ ಬಗ್ಗೆ ಅಲ್ಲ. ಅವರಿಗೆ ಹುಟ್ಟಲಿರುವ ಮಕ್ಕಳ ಭವಿಷ್ಯದ ಬಗ್ಗೆಯೂ ಅಲ್ಲ. ಚಿಂತಿಸಬೇಕಾದ್ದು ಈಗಿನ ಯುವಕ ಯುವತಿಯರು ಬಹುದೊಡ್ಡ ಸಂಖ್ಯೆಯಲ್ಲಿ ಮದುವೆಯನ್ನು ನಿರಾಕರಿಸುತ್ತಿದ್ದಾರೆ. ಅದ್ಯಾಕೆ ಹೀಗಾಗುತ್ತಿದೆ ಎಂಬುದನ್ನು. ಇದಕ್ಕಾಗಿ ಸಮಾಜಶಾಸ್ತ್ರಿಯ ನೆಲೆಯಲ್ಲಿ ಅಧ್ಯಯನ ನಡೆಯಬೇಕಾಗಿದೆ- ಉಷಾ ಕಟ್ಟೆಮನೆ, ಬಂಡಿಹೊಳೆ.
ಭಾವನಾ ಈಗ ಸುದ್ದಿಯಲ್ಲಿದ್ದಾರೆ. ಆಕೆ ಮದುವೆಯಾಗದೆ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಅದನ್ನವರು ಸ್ವತಃ ಸಮಾಜದ ಎದುರು ಬಹಿರಂಗ ಪಡಿಸಿದ್ದಾರೆ. ಅದೀಗ ಚರ್ಚೆಯ ಅಂಗಳದಲ್ಲಿದೆ. ಸಂಪ್ರದಾಯವಾದಿಗಳು ಈ ವಿಷಯದಲ್ಲಿ ಚೆಂಡಾಟ ಆಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆಗುತ್ತಲಿದೆ.
ಹಾಗೆ ನೋಡಿದರೆ ಮದುವೆಯಾಗದೆ ಮಕ್ಕಳನ್ನು ಹೆತ್ತು ಚೆನ್ನಾಗಿ ಬದುಕುತ್ತಿರುವ ಹಲವಾರು ಒಂಟಿ ಮಹಿಳೆಯರು ನಮ್ಮ ನಡುವೆಯೇ ಇದ್ದಾರೆ. ಅವರು ತಮ್ಮ ಸಂಗಾತಿಯ ಸಾಹಚರ್ಯದಿಂದ ಸಹಜ ರೀತಿಯಲ್ಲಿ ಅಥವಾ ಸಂಗಾತಿಯ ವೀರ್ಯವನ್ನು ಬಳಸಿಕೊಂಡು ಫಲವಂತಿಕೆಯ ತಂತ್ರಜ್ಞಾನದಿಂದ (ಐ.ವಿ.ಎಫ್) ಮಗುವನ್ನು ಪಡೆದವರು. ಈ ವಿಧಾನದಲ್ಲಿ ಮಗುವನ್ನು ಪಡೆದವರಿಗೆ ತಮ್ಮ ಮಗುವಿನ ತಂದೆ ಯಾರೆಂಬುದು ಗೊತ್ತಿರುತ್ತದೆ. ಅಗತ್ಯ ಬಿದ್ದಾಗ ತಂದೆಯ ಕಾಲಂನಲ್ಲಿ ಆ ಹೆಸರನ್ನು ನಮೂದಿಸಲೂ ಬಹುದು. ಮುಂದೆ ಮಕ್ಕಳು ಪ್ರಾಯ ಪ್ರಬುದ್ಧರಾದಾಗ ಅವರು ಬಯಸಿದ್ದಲ್ಲಿ ತಂದೆ ಮಕ್ಕಳು ಸಮಾಜದಲ್ಲಿ ಜೊತೆ ಜೊತೆಯಾಗಿಯೂ ಕಾಣಿಸಿಕೊಳ್ಳಬಹುದು.
ಆದರೆ ಭಾವನಾ ವಿಷಯ ಇದಕ್ಕಿಂತ ಸ್ವಲ್ಪ ಭಿನ್ನ. ಭಾವನಾ ತನ್ನ ಡಾಕ್ಟರ್ ಮುಖಾಂತರ ವೀರ್ಯ ಬ್ಯಾಂಕ್ ನಿಂದ ದಾನಿಯೊಬ್ಬರ ವೀರ್ಯವನ್ನು ಪಡೆದು ಗರ್ಭಿಣಿಯಾದವರು. ಆತ ಯಾರು? ಆತನ ಜಾತಿ, ಧರ್ಮ, ಬಣ್ಣ, ಅಂತಸ್ತು, ಅಭಿರುಚಿ ಯಾವುದೂ ಆಕೆಗೆ ಗೊತ್ತಿಲ್ಲ. ಆಕೆ ಬಯಸಿದರೆ ದಾನಿಯ ಹೆಸರನ್ನು ವೀರ್ಯ ಬ್ಯಾಂಕ್ ತಿಳಿಸುತ್ತದೆ. ಆದರೆ ತನಗೆ ತಿಳಿಯುವ ಕುತೂಹಲ ಇಲ್ಲ ಎಂದು ಭಾವನಾ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಭಾವನಾ ವಿವಿಧ ಸುದ್ದಿ ಚಾನಲ್ ಗಳಿಗೆ, ಪತ್ರಿಕೆಗಳಿಗೆ ಸುದೀರ್ಘವಾದ ಸಂದರ್ಶನಗಳನ್ನು ನೀಡಿದ್ದಾರೆ. ಅದನ್ನೆಲ್ಲಾ ನೋಡಿದಾಗ ನನಗನ್ನಿಸಿದ್ದು ಅವರು ಮಗು ಪಡೆಯುವುದರ ಬಗ್ಗೆ ಭಾವುಕವಾಗಿ ತೀರ್ಮಾನ ತಗೊಂಡಿಲ್ಲ; ಪ್ರಜ್ಞಾಮಟ್ಟದಲ್ಲಿ ಬುದ್ಧಿಪೂರ್ವಕವಾಗಿ ಯೋಚಿಸಿದ್ದಾರೆ.
ಬಹುತೇಕ ಹೆಣ್ಣುಮಕ್ಕಳಂತೆ ಭಾವನಾ ಕೂಡಾ ಪ್ರೀತಿ, ಪ್ರೇಮ ಎಂಬ ನವಿರು ಭಾವಗಳಿಗೆ ಪಕ್ಕಾದವರೇ. ಸಹಜೀವನ ನಡೆಸಿದವರೇ. ಆ ಸಾಹಚರ್ಯದಿಂದಲೇ ಮಗುವನ್ನು ಪಡೆಯುವ ಅವಕಾಶವೂ ಅವರಿಗಿತ್ತು. ಅಥವಾ ಮದುವೆಯೂ ಆಗಬಹುದಿತ್ತು. ಆಕೆಯನ್ನು ಮದುವೆಯಾಗಲು ಉತ್ಸುಕರಾದವರೂ ಇದ್ದರು. ಇಲ್ಲವೇ ನಮ್ಮ ಕೆಲವು ಸೆಲೆಬ್ರಿಟಿಗಳು ಹಾಗೆ ಮದುವೆಯಾಗದೆ ತಾವು ಬಯಸಿದವರಿಂದ ಮಗುವನ್ನು ಪಡೆದು ಕಾಲಾಂತರದಲ್ಲಿ ಮಗುವಿನ ತಂದೆಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಆದರೆ ಭಾವನಾ ಹಾಗೆ ಮಾಡಲಿಲ್ಲ ಯಾಕೆ? ಅದಕ್ಕೆ ಅವರು ಕೊಡುವ ಕಾರಣ ಮದುವೆಯನ್ನು ಬಯಸಿದ ಆ ಪುರುಷರಲ್ಲಿ ಮದುವೆ ಎನ್ನುವ ಸಂಸ್ಥೆ ಬಯಸುವ ಬದ್ಧತೆ ಮತ್ತು ಶಿಸ್ತು ಇರಲಿಲ್ಲ ಎಂಬುದು.
ಭಾವನಾ ಪುರುಷ ವಿರೋಧಿ ಆಗಿರಬಹುದೇ? ಈ ಬಗ್ಗೆಯೂ ಚರ್ಚೆಗಳು ಸಾಗುತ್ತಲಿವೆ. ಅದಕ್ಕೂ ಆಕೆಯೇ ಉತ್ತರಿಸಿದ್ದಾರೆ; ’ನಾನು ಪುರುಷ ವಿರೋಧಿಯಲ್ಲ, ನನ್ನ ತಂದೆ, ತಮ್ಮ, ಭಾವ, ನೆಫ್ಯೂ ಎಲ್ಲರೂ ಪುರುಷರೇ ಅಲ್ವಾ? ಅವರನ್ನು ನಾನು ಆರಾಧಿಸ್ತಾ ಇದ್ದೇನೆ. ನನ್ನ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ನೋಡಿ ಈ ನಿರ್ಧಾರಕ್ಕೆ ಬಂದೆ’ ಎನ್ನುತ್ತಾರೆ.
ಏನು ಆ ಘಟನೆಗಳು?
ಮದುವೆಯ ಚೌಕಟ್ಟಿನೊಳಗೆ ಮಗುವನ್ನು ಪಡೆದು ಆನಂತರದಲ್ಲಿ ತಂದೆತನವನ್ನು ನಿಭಾಯಿಸುವಲ್ಲಿ ಸೋತವರನ್ನು ಅವರು ಕಂಡಿದ್ದಾರೆ. ಹೆಂಡತಿಯಾದವಳು ತನ್ನ ವ್ಯಕ್ತಿತ್ವವನ್ನು ಇಲ್ಲವಾಗಿಸಿಕೊಂಡು ಕುಟುಂಬಕ್ಕಾಗಿ ಗಾಣದೆತ್ತಿನಂತೆ ದುಡಿಯುವುದನ್ನು ನೋಡಿದ್ದಾರೆ. ಡೈವೋರ್ಸ್ ಪಡೆದ ಅಥವಾ ಸದಾ ಕಚ್ಚಾಡುವ ದಂಪತಿಗಳ ಮಕ್ಕಳು ಮಾನಸಿಕವಾಗಿ ಜರ್ಜರಿತವಾಗಿರುವುದನ್ನು ನೋಡಿದ್ದಾರೆ. ಪತ್ನಿ ಇರುವಾಗಲೇ ಇನ್ನೊಬ್ಬಾಕೆಯ ಜೊತೆ ಅಕ್ರಮ ಸಂಬಂಧವನ್ನು ಹೊಂದಿರುವವರನ್ನೂ ನೋಡಿದ್ದಾರೆ. ಇದೆಲ್ಲದಕ್ಕಿಂತಲೂ ಮಿಗಿಲಾಗಿ ಇಂಥವರು ”ನಮ್ಮಪ್ಪ’ ಎಂದು ಹೇಳಿಕೊಳ್ಳಲು ಮುಜುಗರಪಡುವ ಮಕ್ಕಳನ್ನು ನೋಡಿದ್ದಾರೆ. ತನ್ನ ಮಕ್ಕಳು ಭವಿಷ್ಯದಲ್ಲಿ ಇಂತಹದೊಂದು ಸಂದರ್ಭವನ್ನು ಎದುರಿಸುವಂತೆ ಆಗದಿರಲಿ ಎಂಬ ಮುಂದಾಲೋಚನೆಯೇ ಅವರನ್ನು ಕಾಡಿರುವ ಸಾಧ್ಯತೆಯೇ ಹೆಚ್ಚಿರುವಂತಿದೆ. ಸ್ವತಃ ನಾನು ಇಂತಹದೊಂದು ಸ್ಥಿತಿಯಲ್ಲಿ ಇರುವುದರಿಂದ ಭಾವನಾಳ ಮನಸ್ಥಿತಿ ನನಗೆ ಹೆಚ್ಚು ಅರ್ಥವಾಗುತ್ತಿದೆ!
ಮದುವೆ ಎಂಬ ಒಂದು ಸಾಮಾಜಿಕ ವ್ಯವಸ್ಥೆ ಈ ಅಧುನಿಕ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಹೊರಲಾಗದ ಹೊರೆಯಾಗುತ್ತಿದೆ. ಭಾವನಾಳಂತ ಗಟ್ಟಿಗಿತ್ತಿ ಅದನ್ನು ಒದ್ದು ಪಕ್ಕಕ್ಕೆ ಸರಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಯಾಕೆಂದರೆ ಮುಖ್ಯವಾಗಿ ಭಾವನಾ ಒಬ್ಬಾಕೆ ಸೆಲೆಬ್ರಿಟಿ. ಆಕೆ ಸಿನೇಮಾ ನಟಿ, ನೃತ್ಯಗಾತಿ, ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿ ಕೊಂಡವರು. ಆಕೆಗೆ ಅಪಾರ ಅಭಿಮಾನಿ ಬಳಗವಿದೆ. ಪ್ರೀತಿಸುವ ಕುಟುಂಬವಿದೆ. ಆಪ್ತ ಸ್ನೇಹಬಳಗವಿದೆ. ಅರ್ಥಿಕವಾಗಿ ಸ್ವಾವಲಂಬಿ. ಎಲ್ಲಕ್ಕಿಂತಲೂ ಮಿಗಿಲಾಗಿ ಭವಿಷ್ಯದ ಬಗ್ಗೆ ಸ್ಪಷ್ಟವಾದ ಮುನ್ನೋಟವುಳ್ಳ ಬುದ್ಧಿವಂತೆ. ಸಮಾಜದ ಕಟ್ಟುಕಟ್ಟಲೆಗಳನ್ನು ಮೀರಬಲ್ಲಂತ ಛಾತಿಯುಳ್ಳವಳು. ಇಂತವರಿಗಾಗಿಯೇ ’ಸಿಂಗಲ್ ಮದರ್ಸ್ ಬೈ ಚಾಯ್ಸ್’ ಎಂಬ ಅನ್ಲೈನ್ ಸಮುದಾಯವಿದೆ.
ಬಹುಶ; ಮುಂದೊಂದು ದಿನ, ಮಗು ಪ್ರಾಪಂಚಿಕ ತಿಳುವಳಿಕೆಗೆ ತೆರೆದುಕೊಳ್ಳುವ ಹೊತ್ತಿನಲ್ಲಿ ನಿನ್ನ ಹುಟ್ಟು ಹೀಗಾಯ್ತು..ಅದಕ್ಕೆ ಕಾರಣ ಇದು ಎಂದು ತಾಯಿ ತಿಳಿಸಿಕೊಟ್ಟಲ್ಲಿ ಯಾವ ಸಮಸ್ಯೆಯೂ ಉಂಟಾಗಲಾರದು. ಯಾಕೆಂದರೆ ಈಗಿನ ಮಕ್ಕಳ ತಿಳುವಳಿಕೆಯ ಸಾಮರ್ಥ್ಯ ಉನ್ನತ ಮಟ್ಟದಲ್ಲಿದೆ. ಹಲವು ಜ್ಞಾನ ಶಾಖೆಗಳ ನಡುವೆ ಮಕ್ಕಳ ಬಾಲ್ಯ ಅರಳುತ್ತಲಿದೆ. ಮೊಬೈಲ್, ಟಿವಿ, ಕಂಪ್ಯೂಟರ್, ಸಿನೇಮಾ, ಸಂಗೀತಾ, ..ಹೀಗೆ ಎಲ್ಲಾ ಕಡೆಯಿಂದಲೂ ಜ್ಞಾನ ಹರಿದು ಬರುತ್ತಲಿದೆ.
ಇದೊಂದು ಆರಂಭದ ಹೆಜ್ಜೆಯಷ್ಟೇ. ಹೆಣ್ಣೊಬ್ಬಳು ಮದುವೆಯಾಗದೆ ಮಗುವನ್ನು ಪಡೆಯುವ ಕನಸನ್ನು ಕಂಡವರಿದ್ದಾರೆ. ಅಂತ ಕನಸನ್ನು ವೀಣಾ ಎಲಬುರ್ಗಿ ಎಂಬ ಬರಹಗಾರ್ತಿ ತಮ್ಮ ’ಕೊನೆಯ ದಾರಿ’ ಎಂಬ ಕಥೆಯಲ್ಲಿ ಕಥಾನಾಯಕಿ ಲಿಲ್ಲಿಯ ಮಖಾಂತರ ಸಾಧ್ಯವಾಗಿಸಿದ್ದಾರೆ. ಸಾಹಿತ್ಯಿಕ ಭಾಷೆಯಲ್ಲಿ ಇದನ್ನೇ ”ಪೊಯಾಟಿಕ್ ಜಸ್ಟೀಸ್’ ಎನ್ನುತ್ತಾರೆ.. ವಾಸ್ತವದಲ್ಲಿ ಸಾಧ್ಯವಾಗದ್ದನ್ನು ಬರಹದಲ್ಲಾದರೂ ಸಾಧ್ಯವಾಗಿಸುವುದು. ಇದು ಬರಹಗಾರಳ ಕಾಣ್ಕೆ. ಸಾಹಿತ್ಯದ ಸಿದ್ಧ ಮಾದರಿಗಳನ್ನು ತೊರೆದು ತಮ್ಮದೇ ದಾರಿಯನ್ನು ಕಂಡುಕೊಂಡವರು ವೀಣಾ ಎಲಬುರ್ಗಿ. ನವ್ಯಕಾಲದ ಬಹುಮುಖ್ಯ ಕಥೆಗಾರ್ತಿಯಾದ ಇವರು ಆನಂತರದಲ್ಲಿ ವೀಣಾ ಶಾಂತೇಶ್ವರ ಆದರು. ಕೊನೆಯ ದಾರಿಯಲ್ಲಿ ಮದುವೆಯಾಗದೆ ಮಗುವನ್ನು ಹೊಂದುವ ಆಸೆಯಿಂದ ಕಥಾ ನಾಯಕಿ ಲಿಲ್ಲಿ ತನ್ನ ಪ್ರಣಯ ಸಂಪರ್ಕಕ್ಕೆ ಬಂದ ಮೂರು ಮಂದಿ ಗಂಡಸರಲ್ಲೂ ಮಗುವಿನ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ಎಲ್ಲರೂ ಬೆಚ್ಚಿ ಹೌಹಾರುತ್ತಾರೆ . ಕೊನೆಗೆ ತಾನು ಬಾಲ್ಯದಲ್ಲಿ ನೋಡಿದ ತನ್ನಪ್ಪನ ಸ್ನೇಹಿತ ಅವಳ ಆಸೆಯನ್ನು ನೆರವೇರಿಸಲು ಮುಂದಾಗುತ್ತಾನೆ. ಈ ಕಥೆಯನ್ನು ವೀಣಾ ಅವರು ಯಾವಾಗ ಬರ್ದದ್ದು ಗೊತ್ತೇ? 1972ರಲ್ಲಿ. ಆಗ ಸ್ತ್ರೀವಾದ ಎಂಬ ಕಲ್ಪನೆ ಬಹುತೇಕ ಇರಲಿಲ್ಲ. ವೈದ್ಯಕೀಯ ಜಗತ್ತು ಈ ಪರಿ ಮುಂದುವರಿದಿರಲಿಲ್ಲ. ಈಗಾದರೆ ಲಿಲ್ಲಿ ಡಾಕ್ಟರ್ ಮುಖಾಂತರ ವೀರ್ಯ ಬ್ಯಾಂಕ್ ಸಂಪರ್ಕಿಸುತ್ತಿದ್ದಳು.
ನಿಮಗೆ ರೇಣುಕಾ ಚೌಧರಿ ಗೊತ್ತಲ್ಲ. ಪಾರ್ಲಿಮೆಂಟ್ ನಲ್ಲಿ ಜೋರಾಗಿ ನಕ್ಕದ್ದಕ್ಕೆ ಪ್ರಧಾನಮಂತ್ರಿ ಮೋದಿಯವರು ಅವರನ್ನು ಶೂರ್ಪನಖಿ ಎಂದು ಕರ್ದಿದ್ದರು. ಅವರೊಮ್ಮೆ ಬಹುಶಃ ಆಕೆ ಕೇಂದ್ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಕಾಲ ಇರ್ಬೇಕು, ’ ನಮಗೆ ಮಕ್ಕಳಾಗುವುದಕ್ಕೆ ಪುರುಷರ ಅವಶ್ಯಕತೆ ಇಲ್ಲ. ದೇಶದಾದ್ಯಂತ ವೀರ್ಯಬ್ಯಾಂಕ್ ಗಳನ್ನು ಸ್ಥಾಪಿಸುತ್ತೇವೆ’ ಎಂದು ಹೇಳಿದ್ದನ್ನು ನಾನು ಪೇಪರಿನಲ್ಲಿ ಓದಿದ್ದೇನೆ. .
ಈಗ ಸಾಹಿತಿಯೊಬ್ಬರ ಕಲ್ಪನೆ ಮತ್ತು ರಾಜಕಾರಣಿಯೊಬ್ಬರ ಚಿಂತನೆಯನ್ನು ಭಾವನಾ ಮೂರ್ತ ರೂಪಕ್ಕೆ ತರುತ್ತಿದ್ದಾರೆ. ಅದಕ್ಕೆ ನಮ್ಮ ಕಾನೂನು ಅನುವು ಮಾಡಿಕೊಟ್ಟಿದೆ..1921 ರ ಭಾರತೀಯ ಸಂತಾನೋತ್ಪತ್ತಿ ತಂತ್ರಜ್ಞಾನ (ಎ.ಆರ್.ಟಿ) ನಿಯಮಗಳ ಪ್ರಕಾರ ಅವಿವಾಹಿತ ಮಹಿಳೆಯರು ಡೋನರ್ ವೀರ್ಯ\ ಅಂಡಾಣು ಬಳಸಿ ಐ.ವಿ.ಎ.ಫ್ ಮಾಡಿಕೊಳ್ಳಲು ಅನುಮತಿ ನೀಡಿದೆ. ಆದರೆ ಬಾಡಿಗೆ ತಾಯಿಯಾಗಲು ಅವಿವಾಹಿತರಿಗೆ ಅವಕಾಶವಿಲ್ಲ.
ಭಾವನಾಳ ನಿರ್ಧಾರವನ್ನು ಅಶ್ಲೀಲ ಶಬ್ದಗಳಿಂದ ನಿಂದಿಸುವ ಪುರುಷಂಕಾರಿಗಳು,- ಇದರಲ್ಲಿ ಗಂಡು-ಹೆಣ್ಣೆಂಬ ಬೇಧವಿಲ್ಲ- ಕರಣ್ ಜೋಹರ್, ತುಶಾರ ಕಪೂರ್, ಏಕತಾ ಕಪೂರ್ ಮುಂತಾದವರು ಬಾಡಿಗೆ ತಾಯಿಯ ಮೂಲಕ ಮಗು ಪಡೆದಿರುವುದನ್ನು ಹೆಮ್ಮೆಯಿಂದ ಸ್ವೀಕರಿಸಿ ಕುಣಿದಾಡುತ್ತಾರೆ. ಅರ್ಥಿಕವಾಗಿ ಕಷ್ಟದಲ್ಲಿರುವ ಅಸಹಾಯಕ ಹೆಣ್ಣೊಬ್ಬಳ ಗರ್ಭಾಶಯವನ್ನು ಬಾಡಿಗೆಗೆ ಪಡೆಯುವುದಕ್ಕೆ ಇವರ ವಿರೋಧವಿಲ್ಲ. ಉಳ್ಳವರು ನೈತಿಕವಲ್ಲದ್ದನ್ನು ಮಾಡಿದರೂ ಅದಕ್ಕೆ ರಿಯಾಯಿತಿಯಿದೆ. ತನ್ನ ಗರ್ಭಾಶಯವನ್ನು, ತನ್ನದೇ ಅಂಗವೊಂದನ್ನು ತನಗಾಗಿಯೇ ಉಪಯೋಗಿಸಿಕೊಂಡರೆ ಅದು ಅನೈತಿಕ. ಹೇಗಿದೆ ಇವರ ವಾದ?
ಪ್ರನಾಳ ಶಿಶು ಮಾಡಿಕೊಳ್ಳುವುದರ ಹಿಂದೆ ಇರುವ ಒಳ್ಳೆಯ ಅಂಶಗಳತ್ತಲೂ ನಾವು ಗಮನ ಹರಿಸಬಹುದು. ಈ ವಿಧಾನದಿಂದ ಆರೋಗ್ಯವಂತ ಪೀಳಿಗೆಯನ್ನು ಸಮಾಜಕ್ಕೆ ನೀಡಬಹುದು. ಗರ್ಭಾಶಯದ ಹೊರಗಡೆ ಲ್ಯಾಬ್ ನಲ್ಲಿ ಅಂಡಾಣು ಮತ್ತು ವೀರ್ಯಾಣ ಮಿಲನಗೊಂಡು ಭ್ರೂಣ ರೂಪ ತಾಳುತ್ತದೆ. ಈ ಹಂತದಲ್ಲಿ ಭ್ರೂಣದಲ್ಲಿ ಏನಾದರೂ ಜೆನೆಟಿಕ್ ಕಾಯಿಲೆಗಳು ಕಂಡು ಬಂದಲ್ಲಿ ಅದನ್ನು ನಿವಾರಿಸಲು ಅವಕಾಶವಿದೆ. ಗಂಡು ಹೆಣ್ಣು ಮಿಲನದ ಸಹಜ ಗರ್ಭಧಾರಣೆಯಲ್ಲಿ ಒಂದು ವೇಳೆ ಅಂಗವಿಕಲ, ಬುದ್ಧಿಮಾಂದ್ಯ ಮಗು ಜನಿಸಿದರೆ ಅದನ್ನು ಸಾಕುವ ಹೊಣೆಗಾರಿಕೆ ಪೋಷಕರ ಮೇಲೆ ಇರುತ್ತದೆ. ಸಹಜವಾಗಿ ಆ ಭಾರ ಹೆಣ್ಣಿನ ಹೆಗಲಿಗೇರುತ್ತದೆ. ಗಂಡು ಅಲೆಮಾರಿ. ’ಅಲಕ್ ನಿರಂಜನ್’ ಎಂದು ಎದ್ದು ಹೊರಟು ಬಿಡುತ್ತಾನೆ. ಆದ್ರೆ ಹೆಣ್ಣು ತನ್ನ ಸುಪರ್ದಿಯಲ್ಲಿ, ತನ್ನ ಕಣ್ಗಾವಲಿನಲ್ಲೇ ಇರಬೇಕೆಂದು ಬಯಸುತ್ತಾನೆ. ಇದ್ಯಾವ ನ್ಯಾಯ? ಅದಕ್ಕೇ ಓಶೋ ಮದುವೆಯನ್ನು ’ಕಾನೂನು ಬದ್ಧ ಗುಲಾಮಗಿರಿ’ ಎಂದು ಕರೆಯುತ್ತಾರೆ.
ಬಹಳ ಜನ ವಾದ ಮಾಡ್ತಾರೆ; ಇದರಿಂದ ಭಾರತೀಯ ಕುಟುಂಬ ವ್ಯವಸ್ಥೆ ಹಾಳಾಗುತ್ತದೆ. ಈಗ ಹಾಳಾಗುವುದಕ್ಕೇ ಏನು ಉಳಿದಿದೆ?
ಈಗಿರುವ ಸಾಮಾಜಿಕ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮ ಭೌಗೋಳಿಕ ಪರಿಸರದಲ್ಲಿ ನಮ್ಮ ಮಕ್ಕಳನ್ನು ಒಳ್ಳೆಯ ಪರಿಸರ, ಶಿಕ್ಷಣ, ಆರೋಗ್ಯ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವೇ? ಹಾಗೆ ಮಾಡಲು ಹೊರಟ ತಾಯ್ತಂದೆಯರ ವರ್ತಮಾನದ ಬದುಕು ಹೇಗಿರುತ್ತದೆ ಎಂಬುದನ್ನು ಯೋಚಿಸಿದರೆ ಭಯ ಆಗುತ್ತದೆ. ನಿರಾಶೆ ಆವರಿಸುತ್ತದೆ. ಮೊನ್ನೆ ಮೊನ್ನೆ ತನ್ನ ಮಗಳು ಟೆನ್ನಿಸ್ ತಾರೆ ರಾಧಿಕಳನ್ನು ಕೊಂದ ದೀಪಕ್ ಯಾದವ್, ನೀಟ್ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದಳೆಂದು ಮಗಳನ್ನು ಕೊಂದ ಇನ್ನೊಬ್ಬ ತಂದೆ. ಅತ ಕಾಲೇಜೊಂದರಲ್ಲಿ ಪ್ರಿನ್ಸಿಪಾಲ್ ಬೇರೆ. ಧರ್ಮಸ್ಥಳದಂತಹ ಪುಣ್ಯಕ್ಷೇತ್ರದಲ್ಲಿ ಸಾಲು ಸಾಲು ಬಿದ್ದ ಮಹಿಳೆಯರ ಶವಗಳು… ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಮಾಜ. ಇಂತಹ ಸಮಾಜದಲ್ಲಿ ಮಕ್ಕಳನ್ನು ಹೆತ್ತು ಅವರನ್ನೂ ಈ ಬೆಂಕಿಗೆ ತಳ್ಳಬೇಕೇ?
ತಾಯ್ತನ ಎಂಬುದು ಆಯ್ಕೆಯಾಗಿರಬೇಕು. ಅದಕ್ಕೊಂದು ಸಿದ್ಧತೆ ಬೇಕು. ಮದುವೆಯಾದ ಎಲ್ಲರೂ ತಾಯಿಯಾಗಬೇಕಿಲ್ಲ. ತಾಯ್ತನವೇ ಹೆಣ್ಣಿನ ಬದುಕಿನ ಉದ್ದೇಶ ಅಲ್ಲ. ಆಗಲೂ ಬಾರದು. ಅದು ಅವಳ ಆಯ್ಕೆ. ಆ ಆಯ್ಕೆಯನ್ನು ಭಾವನಾ ಮಾಡಿಕೊಂಡಿದ್ದಾರೆ. ಆಕೆಯ ಚಾರಿತ್ರ್ಯವಧೆ ಮಾಡುತ್ತಿರುವವರು ಈಗ ಚಿಂತಿಸಬೇಕಾದ್ದು, ಭಾವನಾ ಬಗ್ಗೆ ಅಲ್ಲ. ಅವರಿಗೆ ಹುಟ್ಟಲಿರುವ ಮಕ್ಕಳ ಭವಿಷ್ಯದ ಬಗ್ಗೆಯೂ ಅಲ್ಲ. ಚಿಂತಿಸಬೇಕಾದ್ದು ಈಗಿನ ಯುವಕ ಯುವತಿಯರು ಬಹುದೊಡ್ಡ ಸಂಖ್ಯೆಯಲ್ಲಿ ಮದುವೆಯನ್ನು ನಿರಾಕರಿಸುತ್ತಿದ್ದಾರೆ. ಅದ್ಯಾಕೆ ಹೀಗಾಗುತ್ತಿದೆ ಎಂಬುದನ್ನು. ಇದಕ್ಕಾಗಿ ಸಮಾಜಶಾಸ್ತ್ರಿಯ ನೆಲೆಯಲ್ಲಿ ಅಧ್ಯಯನ ನಡೆಯಬೇಕಾಗಿದೆ.
ಉಷಾ ಕಟ್ಟೆಮನೆ , ಬಂಡಿಹೊಳೆ.
ಇದನ್ನೂ ಓದಿ- ಭಾವನಾ ಬೋಲ್ಡ್ ಹೆಜ್ಜೆ-ಸಾಧ್ಯವಾದರೆ ಮೆಚ್ಚೋಣ, ಇಲ್ಲವಾದರೆ ಸುಮ್ಮನಿರೋಣ