ಜುಲೈ ಒಂದನೇ ತಾರೀಕಿನಿಂದ ಜಾರಿಗೆ ಬರಲಿರುವ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023 (BNSS) ಭ್ರಷ್ಟ ಹಾಗು ದುರುಳ ಅಧಿಕಾರಿಗಳಿಗೆ ಮತ್ತಷ್ಟು ಶ್ರೀ ರಕ್ಷೆ ಒದಗಿಸಲಿದೆ – ಶಫೀರ್ ಎ .ಎ – ಮಾಜಿ ನ್ಯಾಯಾಧೀಶರು.
ಈ ಸನ್ನಿವೇಶವನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ನೀವು ಯಾವುದೋ ಮೋಸ ಅಥವಾ ವಂಚನೆಗೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದು ಕೊಂಡು ದೂರು ನೀಡುವ ಸಲುವಾಗಿ ಪೊಲೀಸ್ ಠಾಣೆಗೆ ಹೋಗಿರುತ್ತೀರಿ. ಅಲ್ಲಿನ ಠಾಣಾಧಿಕಾರಿ ಒಬ್ಬ ಭ್ರಷ್ಟಾತಿ ಭ್ರಷ್ಟನೋ, ಅಧಿಕಾರದ ದರ್ಪ ತಲೆಗೆ ಏರಿಸಿ ಕೊಂಡವನೋ ಆಗಿರುತ್ತಾನೆ ಎಂದಿಟ್ಟು ಕೊಳ್ಳಿ. ನಿಮ್ಮ ನರಕಯಾತನೆ ನಿಜವಾಗಿ ಆರಂಭವಾಗುವುದು ಅಲ್ಲಿಂದಲೇ.
ನಿಮ್ಮ ದೂರನ್ನು ಯಥಾವತ್ತಾಗಿ ದಾಖಲಿಸಿ ಕೊಳ್ಳಲು ಖಂಡಿತ ಅಂತಹ ಅಧಿಕಾರಿ ಸಿದ್ಧನಿರುವುದಿಲ್ಲ. ಆರೋಪಿ ಮತ್ತು ಹಣ ಸಿಕ್ಕರೆ ಅದರಲ್ಲಿ ಎಷ್ಟು ಹಣ ತಾನು ಬಾಚಿ ಕೊಳ್ಳ ಬಹುದು ಎಂಬ ಲೆಕ್ಕಾಚಾರ ಆಗಲೇ ಆತನ ತಲೆಯಲ್ಲಿ ಓಡುತ್ತಿರುತ್ತದೆ. ಅದಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ದೂರು ಬರೆದು ಕೊಡಲು ನೀವು ಸಿದ್ಧರಿದ್ದರೆ ಮಾತ್ರ ನಿಮ್ಮ ದೂರಿನ ಮೇಲೆ FIR ಮಾಡಲು ಆತ ಸಿದ್ಧನಿರುತ್ತಾನೆ. ನೀವು ಐವತ್ತು ಲಕ್ಷ ಕಳೆದು ಕೊಂಡಿದ್ದರೆ ನಿಮ್ಮ ದೂರಿನಲ್ಲಿ ಇಪ್ಪತ್ತೈದು ಲಕ್ಷ ಎಂದು ಬರೆಸಿ ಕೊಳ್ಳುತ್ತಾನೆ. ಒಂದು ವೇಳೆ ನಿಮ್ಮ ಐವತ್ತು ಲಕ್ಷ ಹಣವನ್ನು ಪೂರ್ತಿ ಆರೋಪಿ ಕಡೆಯಿಂದ ವಶಪಡಿಸಿ ಕೊಂಡರೂ ಕೇವಲ ಹತ್ತು ಅಥವಾ ಹದಿನೈದು ಲಕ್ಷ ರಿಕವರಿ ತೋರಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಉಳಿದ ಹಣ ಸ್ವಾಹಾ!! ಇದರ ವಿರುದ್ಧ ನೀವೇನಾದರೂ ಚಕಾರ ಎತ್ತಲು ಪ್ರಯತ್ನಿಸಿದರೆ ನಿಮ್ಮ ಮೇಲೆ ನಾಲ್ಕು ಸುಳ್ಳು ಪ್ರಕರಣಗಳನ್ನು ಜಡಿಯಲಾಗುತ್ತದೆ.
ಇದೊಂದು ಉತ್ಪ್ರೇಕ್ಷಿತ ಊಹೆ ಎಂದು ಕೊಳ್ಳಬೇಡಿ. ಇಂತಹ ಹಲವು ಘಟನೆಗಳು ಇದುವರೆಗೆ ನನ್ನ ಅನುಭವಕ್ಕೆ ಬಂದಿದೆ. ಆರೋಪಿತರನ್ನು ಪತ್ತೆ ಹಚ್ಚಿ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಕೆಲವೊಮ್ಮೆ ದೂರುದಾರರನ್ನು ದೋಚಿರುತ್ತಾರೆ. ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ನೊಂದವರನ್ನೇ ಸುಲಿಗೆ ಮಾಡಿರುತ್ತಾರೆ.
ಈಗ ನೀವು ಕೇಳ ಬಹುದು, ಇಂತಹ ಭ್ರಷ್ಟ ಹಾಗು ದುರುಳ ಅಧಿಕಾರಿಗಳಿಗೆ ಕಾನೂನಿನ ಭಯ ಇರುವುದಿಲ್ಲವೇ? ಇದಕ್ಕೆ ಸ್ಪಷ್ಟ ಉತ್ತರ ನಮ್ಮ ಕಾನೂನು ಪ್ರಕ್ರಿಯೆಯ ಲೋಪ ದೋಷಗಳಲ್ಲಿ ಅಡಗಿದೆ. ಈಗ ಚಾಲ್ತಿಯಲ್ಲಿರುವ ದಂಡ ಪ್ರಕ್ರಿಯಾ ಸಂಹಿತೆಯ(Code of Criminal Procedure 1973) ಸೆಕ್ಷನ್ 200 ರ ಅಡಿಯಲ್ಲಿ ಖಾಸಗಿ ದೂರಿಗೆ ಅವಕಾಶವಿದ್ದು ನೀವು ಸಂಬಂಧಪಟ್ಟ ಜೆ ಎಂ ಎಫ್ ಸಿ ನ್ಯಾಯಲಯದಲ್ಲಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ದೂರು ದಾಖಲಿಸ ಬಹುದು. ಹಾಗೆ ನೀವು ಸಲ್ಲಿಸಿದ ದೂರು ಮೇಲ್ನೋಟಕ್ಕೆ ನೈಜತೆಯಿಂದ ಕೂಡಿದೆ ಎಂದು ಕಂಡು ಬಂದಲ್ಲಿ ಅದನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿ ಕೊಂಡು ನಿಮ್ಮ ಸಾಕ್ಷ್ಯವನ್ನು ದಾಖಲಿಸಿ ಕೊಳ್ಳುತ್ತದೆ.
ಇಲ್ಲಿ ಗಮನಿಸ ಬೇಕಾದ ಅಂಶವೊಂದಿದೆ. ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 197 ಹೇಳುವುದೇನೆಂದರೆ ಯಾವುದೇ ಸಾರ್ವಜನಿಕ ಸೇವಕ (public servant) ಅಂದರೆ ಅಧಿಕಾರಿ ತನ್ನ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಆ ಕರ್ತವ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಅಪರಾಧ ಮಾಡಿದ್ದಾನೆ ಎಂದು ದೂರು ಸಲ್ಲಿಕೆ ಆದಾಗ ಸರಕಾರದ ಅನುಮತಿ ಸಿಗದ ಹೊರತು ನ್ಯಾಯಾಲಯ ಆರೋಪಿತ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ನೋಂದಾಯಿಸಿ ಕೊಳ್ಳುವಂತಿಲ್ಲ. ಅನಗತ್ಯ ಹಾಗು ಸುಳ್ಳು ಪ್ರಕರಣಗಳಿಂದ ಅಧಿಕಾರಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಸೇರಿಸಲಾದ ಈ ಸೆಕ್ಷನ್ ಭ್ರಷ್ಟ ಹಾಗು ದುರುಳ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಲ್ಲಿ ಎದುರಾಗುವ ಬಲು ದೊಡ್ಡ ತೊಡಕು ಎಂದರೆ ತಪ್ಪಿಲ್ಲ.
ಇದು ಈಗಿನ ಪರಿಸ್ಥಿತಿಯಾದರೆ ಜುಲೈ ಒಂದನೇ ತಾರೀಕಿನಿಂದ ಜಾರಿಗೆ ಬರಲಿರುವ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023 (BNSS 2023), ಭ್ರಷ್ಟ ಹಾಗು ದುರುಳ ಅಧಿಕಾರಿಗಳಿಗೆ ಮತ್ತಷ್ಟು ಶ್ರೀ ರಕ್ಷೆ ಒದಗಿಸಲಿದೆ. ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023, ಇದು ಈಗ ಚಾಲ್ತಿಯಲ್ಲಿರುವ ದಂಡ ಪ್ರಕ್ರಿಯಾ ಸಂಹಿತೆಯನ್ನು (CrPC) ರದ್ದು ಪಡಿಸಲಿದೆ. ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023, ಇದರ ಸೆಕ್ಷನ್ 223 ಈಗಿನ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 200 ರ ಬದಲಿಗೆ ಪರಿಚಯಿಸಲಾಗಿದೆ. ಹಾಗೆಯೆ ಈಗಿನ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 197 ನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023 ಇದರ ಸೆಕ್ಷನ್ 218 ರ ಅಡಿಯಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಪರಿಚಯಿಸಲಾಗಿದೆ.
ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023 ಇದರ ಸೆಕ್ಷನ್ 223 ರ ಅನ್ವಯ ನ್ಯಾಯಾಲಯಕ್ಕೆ ಕಕ್ಷೀದಾರರು ನೇರವಾಗಿ ಖಾಸಗಿ ದೂರನ್ನು( ಫಿರ್ಯಾದು) ಯಾವ ರೀತಿ ಸಲ್ಲಿಸ ಬಹುದು ಮತ್ತು ಹಾಗೆ ಸಲ್ಲಿಕೆಯಾಗುವ ದೂರಿನ ವಿಚಾರದಲ್ಲಿ ನ್ಯಾಯಾಲಯ ಯಾವ ರೀತಿಯ ಪ್ರಕ್ರಿಯೆಗಳನ್ನು ಅನುಸರಿಸ ಬೇಕು ಎಂದು ತಿಳಿಸುತ್ತದೆ. ಈ ಸೆಕ್ಷನ್ ಪ್ರಕಾರ ಓರ್ವ ಸಾರ್ವಜನಿಕ ಸೇವಕ ಅಥವಾ ಸರಕಾರಿ ಅಧಿಕಾರಿ ತನ್ನ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಎಸಗಿರುವ ಅಪರಾಧಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೂರು ದಾಖಲಾದರೆ ಈ ಕೆಳಗಿನ ಷರತ್ತುಗಳು ಪಾಲನೆ ಆಗುವವರೆಗೂ ಆತನ ವಿರುದ್ಧ ಸಂಜ್ಞೆಯನ್ನು (Cognizance) ತೆಗೆದು ಕೊಳ್ಳುವಂತಿಲ್ಲ.
ಮೊದಲನೆಯ ಷರತ್ತು ಏನೆಂದರೆ ಸಂಜ್ಞೆಯನ್ನು (Cognizance) ತೆಗೆದುಕೊಳ್ಳುವ ಮೊದಲು ಅಂದರೆ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ ಮುನ್ನ ಆರೋಪಿಗೆ ನೋಟಿಸ್ ಕೊಟ್ಟು ಆತನ ವಾದವನ್ನು ಆಲಿಸ ಬೇಕು.
ಎರಡನೆಯದಾಗಿ ಆರೋಪಗಳಿಗೆ ಸಂಬಂಧಪಟ್ಟಂತೆ ಆತನ ಮೇಲಾಧಿಕಾರಿಗಳ ವರದಿಯನ್ನು ಪಡೆಯ ಬೇಕು.
ಇವೆರಡೂ ಷರತ್ತುಗಳ ಜೊತೆಗೆ ಸೆಕ್ಷನ್ 218 ರ ಅಡಿಯಲ್ಲಿ ಸರಕಾರದ ಅನುಮತಿಯನ್ನೂ ಪಡೆದಿರಬೇಕು. ಈ ಮೂರು ಷರತ್ತುಗಳು ಒಬ್ಬ ಭ್ರಷ್ಟ ಮತ್ತು ದುಷ್ಟ ಅಧಿಕಾರಿಗೆ ಎಂತಹ ರಕ್ಷಾ ಕವಚ ಒದಗಿಸ ಬಲ್ಲದು ಎಂದು ಕೊಂಚ ಯೋಚಿಸಿ ನೋಡಿ.
ಅಪರಾಧದ ಸಂಜ್ಞೆಯನ್ನು (Cognizance) ತೆಗೆದುಕೊಳ್ಳುವ ಮುನ್ನ ಆರೋಪಿಗೆ ನೋಟಿಸ್ ಕೊಡಲಾಗುವುದರಿಂದ ಸಾಕ್ಷ್ಯವನ್ನು ನಾಶಪಡಿಸಲು, ಸಾಕ್ಷಿಗಳನ್ನು ಬೆದರಿಸಲು ಮತ್ತು ಡೀಲ್ ಕುದುರಿಸಲು ಆರೋಪಿಗೆ ಯಥೇಚ್ಛ ಅವಕಾಶ ಕೊಟ್ಟಂತಾಗುತ್ತದೆ. ಇದರ ಜೊತೆಗೆ ನ್ಯಾಯಾಲಯ ಮೇಲಾಧಿಕಾರಿಗಳ ವರದಿಯನ್ನು ಪಡೆಯ ಬೇಕೆಂಬ ನಿಯಮ ನೊಂದವರಿಗೆ ನ್ಯಾಯವನ್ನು ಮರೀಚಿಕೆ ಮಾಡುತ್ತದೆ. ಇವತ್ತಿನ ನಮ್ಮ ವ್ಯವಸ್ಥೆಯಲ್ಲಿ ಅಂತಹ ವರದಿ ಪಡೆಯಲು ತೆಗೆದು ಕೊಳ್ಳುವ ಸಮಯ ಮತ್ತು ಶ್ರಮದ ಬಗ್ಗೆ ನೀವೇ ಊಹೆ ಮಾಡಿ ಕೊಳ್ಳಬಹುದು.
ಈಗ ಚಾಲ್ತಿಯಲ್ಲಿರುವ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 197 ರ ಅಡಿಯಲ್ಲಿ ಸಾರ್ವಜನಿಕ ಸೇವಕರ ವಿರುದ್ಧ ಪ್ರಕರಣ ದಾಖಲಿಸಲು ಸರಕಾರದ ಅನುಮತಿಗಾಗಿ ವರ್ಷಗಳು ಕಾಯಬೇಕು. ಹೊಸ ಕಾನೂನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಸೆಕ್ಷನ್ 218 ರಲ್ಲಿ ಈ ನಿಟ್ಟಿನಲ್ಲಿ ಸ್ವಲ್ಪ ಸುಧಾರಣೆ ತರಲಾಗಿದೆ. ಇದರನ್ವಯ ಸಾರ್ವಜನಿಕ ಸೇವಕರ ವಿರುದ್ಧ ಪ್ರಕರಣ ಸಲ್ಲಿಸಲು ಅನುಮತಿ ಕೋರಿ ಸಲ್ಲಿಕೆಯಾಗುವ ಮನವಿಗಳನ್ನು ಸರಕಾರ 120 ದಿನಗಳ ಒಳಗಾಗಿ ಇತ್ಯರ್ಥ ಮಾಡ ಬೇಕು. ಸದರಿ ಅವಧಿ ಮುಗಿದ ನಂತರವೂ ಸರಕಾರದಿಂದ ಯಾವುದೇ ಸ್ಪಂದನೆ ಸಿಗದಿದ್ದಲ್ಲಿ ಭಾವಿತ ಅನುಮತಿ (deemed sanction)ಎಂದು ಪರಿಗಣಿಸಲು ಹೊಸ ಅಧಿನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಸ್ವಲ್ಪ ಸಮಾಧಾನಕರ ಸಂಗತಿ ಎಂದು ಕೊಂಡರೂ ಸೆಕ್ಷನ್ 223 ರ ಅಡಿಯಲ್ಲಿ ವಿಧಿಸಲಾಗಿರುವ ಮತ್ತು ಮೇಲೆ ಹೇಳಲಾದ ಹೊಸ ಎರಡು ಷರತ್ತುಗಳು ಪಬ್ಲಿಕ್ ಸರ್ವೆಂಟ್ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲವಾಗಿಸಿದೆ.
ಶಫೀರ್ ಎ .ಎ
ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ತಾವೇ ನಿವೃತ್ತಿಯನ್ನು ಪಡೆದು ಮತ್ತೆ ವಕೀಲರಾಗಿ ಸಕ್ರಿಯರಾಗಿದ್ದಾರೆ. ಸದಾ ಸಮಾಜಮುಖಿ ಚಿಂತನೆ,ಬರೆಹಗಳಲ್ಲಿ ತೊಡಗಿರುವ ಇವರು ಪ್ರತಿ ಶುಕ್ರವಾರ ಕನ್ನಡ ಪ್ಲಾನೆಟ್.ಕಾಂ ಗೆ ʼನ್ಯಾಯ ನೋಟʼ ಅಂಕಣ ಬರೆಯಲಿದ್ದಾರೆ.
ಇದನ್ನೂ ಓದಿ-ಬ್ಲಾಕ್ ಮೇಲ್ ಮಾಡಿದ ರೌಡಿಯನ್ನು ಭೀಕರವಾಗಿ ಮುಗಿಸಿದ ಪಿಯುಸಿ ಬಾಲಕರು