ಬೆಂಗಳೂರು: ಬಿಜೆಪಿ ದೇಶವನ್ನು ಒಡೆದು ಬೂಟಾಟಿಕೆಯ ರಾಜಕಾರಣ ಮಾಡುತ್ತಿದೆ. ಈ ಚುನಾವಣೆ ಕಾಂಗ್ರೆಸ್, ಬಿಜೆಪಿ ಚುನಾವಣೆ ಅಲ್ಲ. ಇದು ಪ್ರಜಾಪ್ರಭುತ್ವದ ಉಳಿವಿನ ಚುನಾವಣೆ. ಮಹಿಳೆಯರು, ರೈತರ ರಕ್ಷಣೆಯ ಚುನಾವಣೆ. ಮರೆತು ನೀವು ಬಿಜೆಪಿಗೆ ಮತ ಹಾಕಬೇಡಿ. ಹಾಕಿದರೆ ದೇಶವೇ ಹಾಳಾಗಿ ಹೋಗುತ್ತದೆ ಎಂದು ಸಚಿವ ಭೈರತಿ ಸುರೇಶ ಎಚ್ಚರಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ. ನಾವು ಮನೆ ಮನೆ ಪ್ರಚಾರ ಮಾಡದಿದ್ದರೂ ಅವರ ಸುಳ್ಳುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ನಮ್ಮ ಸರ್ಕಾರ ಕೊಟ್ಟ ಕಾರ್ಯಕ್ರಮಗಳ ಕುರಿತು ಪ್ರಚಾರ ಮಾಡಬೇಕು. ಕಳೆದ ಬಾರಿ ಕುದುರೆ ವ್ಯಾಪಾರ ಮಾಡಿದಂತೆ ಶಾಸಕರನ್ನು ಖರೀದಿಸಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈ ಬಾರಿ ರಾಜ್ಯದ ಜನ ಇದಕ್ಕೆ ಅವಕಾಶ ಕೊಟ್ಟಿಲ್ಲ. 135 ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಈಗ ಜೆಡಿಎಸ್, ಬಿಜೆಪಿ ಸೇರಿ ದೇಶ ಹಾಳುಮಾಡಲು ಹೊರಟಿವೆ.
ರಾಜೀವ್ ಗೌಡ ಸುಶಿಕ್ಷಿತ ಅಭ್ಯರ್ಥಿ. ಅವರು ಹಣ ಮಾಡೋಕೆ ಇಲ್ಲಿಗೆ ಬಂದಿಲ್ಲ. ಜನರನ್ನು ಕೊಳ್ಳೆ ಹೊಡೆಯೋಕೆ ಅವರು ಬಂದಿಲ್ಲ. ಇದೆಲ್ಲ ಮಾಡುವುದು ಬಿಜೆಪಿ ಅಭ್ಯರ್ಥಿ ಎಂದು ವಾಗ್ದಾಳಿ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ, ಸಚಿವ ಕೃಷ್ಣಬೈರೇಗೌಡ, ಭೈರತಿ ಸುರೇಶ್, ಸಲೀಂ ಅಹ್ಮದ್, ನಾಗರಾಜ್ ಯಾದವ್ ಉಪಸ್ಥಿತರಿದ್ದರು.