Saturday, July 27, 2024

ರಾಮರಥ ಯಾತ್ರೆಯ ರೂವಾರಿಗೆ ಭಾರತ ರತ್ನ; ಮತ್ತೆ ಹಿಂದೂ ಮತ ಕ್ರೋಢೀಕರಣಕ್ಕೆ ಬಿಜೆಪಿ ಯತ್ನ

Most read

ತನ್ನೆಲ್ಲಾ ಅಧಿಕಾರ ಕಳೆದುಕೊಂಡು ಮಹಾಭಾರತದ ಭೀಷ್ಮನಂತೆ ಶರಶಯ್ಯೆಯಲ್ಲಿ ಮಲಗಿ ದೇಶಾದ್ಯಂತ ನಡೆಯುತ್ತಿರುವ ಕೋಮು ಸಂಘರ್ಷ ಹಾಗೂ ಧರ್ಮದ್ವೇಷದ ಸಮರಕ್ಕೆ ಸಾಕ್ಷಿಯಾಗಿರುವ ಅಡ್ವಾಣಿಯವರು ತಮ್ಮ 96ನೇ ವಯಸ್ಸಿನಲ್ಲಿ ಬಂದ ಪ್ರಶಸ್ತಿಯಿಂದ ಸ್ವಲ್ಪವಾದರೂ ನೆಮ್ಮದಿ ಪಡಲಿ. ಅವರು ಹಚ್ಚಿದ ಮತಾಂಧತೆಯ ಕಿಡಿ ದೇಶಾದ್ಯಂತ ಹೇಗೆಲ್ಲಾ ವಿಸ್ತರಿಸಿದೆ ಎಂಬುದನ್ನು ನೋಡುತ್ತಲೇ ಪ್ರಶಸ್ತಿಯನ್ನು ಸ್ವೀಕರಿಸಲಿ. ದ್ವೇಷ ರಾಜಕಾರಣ ಹಾಗೂ ಧರ್ಮಾಂಧತೆಯ ಪ್ರಚೋದನೆಗೆ ನಾಯಕತ್ವ ವಹಿಸಿದವರಿಗೂ ಭಾರತರತ್ನ ದಂತಹ ಅತ್ಯುನ್ನತ ಗೌರವ ಸಿಗಬಹುದು ಎನ್ನುವುದಕ್ಕೆ ಈ ಪ್ರಶಸ್ತಿ ಘೋಷಣೆ ಸಾಕ್ಷಿಯಾಗಲಿ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ರಾಮರಥ ಯಾತ್ರೆಯ ರೂವಾರಿ, ಬಿಜೆಪಿ ಪಕ್ಷದ ಬುನಾದಿ ಗಟ್ಟಿಗೊಳಿಸಿದ ಲೋಹ ಪುರುಷ, ಭಾವಪ್ರಚೋದನೆಯ ಮೂಲಕ ಹಿಂದೂ ಮತಗಳ ಕೇಂದ್ರೀಕರಿಸಿದ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಇವತ್ತು ಈ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನವನ್ನು ಮೋದಿ ಸರಕಾರ ಘೋಷಿಸಿದೆ. ಇದರಿಂದಾಗಿ ಸಂಘ ಪರಿವಾರದವರು ಸಂಭ್ರಮಿಸುತ್ತಿದ್ದಾರೆ. ಯಾರಾದರೂ ವಿರೋಧಿಸಿದರೆ ಅಂತವರನ್ನು ದೇಶದ್ರೋಹಿ ಎಂದು ಆರೋಪಿಸಲು ಕಾಯುತ್ತಿದ್ದಾರೆ.

ಬಿಜೆಪಿಗೆ ಬಲ ತುಂಬಿದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿಯವರನ್ನು ಮೋದಿಯವರು ಸೈಡ್ಲೈನ್ ಮಾಡಿ ಮೂಲೆಗೆ ಕೂಡಿಸಿದ್ದಾರೆ ಎನ್ನುವ ಕಳಂಕ ಮೋದಿಯವರ ಮೇಲಿತ್ತು. ಈ ವಿಷಯದಲ್ಲಿ ಸಂಘ ಪರಿವಾರದ ಹಿಂದುತ್ವವಾದಿಗಳಿಗೆ ಅಸಮಾಧಾನವಿತ್ತು. ಈ ಒಳಬೇಗುದಿಯನ್ನು ಕಡಿಮೆ ಗೊಳಿಸಲು, ರಾಜಕೀಯ ಗುರುವನ್ನೇ ಅಧಿಕಾರದ ಪಟ್ಟದಿಂದ ದೂರವಿಟ್ಟ ಆರೋಪದಿಂದ ಹೇಗಾದರೂ ಮುಕ್ತರಾಗಲು ಈ ಪ್ರಶಸ್ತಿ ಕೊಡಲಾಗಿದೆ ಎಂಬುದು ಅಘೋಷಿತ ಸತ್ಯ.

ಎಲ್‌ ಕ ಅಡ್ವಾಣಿ

ಬಾಬರಿ ಮಸೀದಿ ಧ್ವಂಸದ ನಂತರ ಹಿಂದೂಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಅಡ್ವಾಣಿಯವರು ವಾಜಪೇಯಿಯವರ ನಂತರ ಭಾರತದ ಪ್ರಧಾನಿ ಆಗಬೇಕಾಗಿತ್ತು. ಆದರೆ ಪಾಕಿಸ್ತಾನಕ್ಕೆ ಭೇಟಿಕೊಟ್ಟಿದ್ದ ಅಡ್ವಾಣಿಯವರು ಅದ್ಯಾವುದೋ ಕಾರಣಕ್ಕೆ ಆ ದೇಶದ ಪಿತಾಮಹ ಜಿನ್ನಾರವರನ್ನು ಹೊಗಳಿದರು. ಸಂಘ ಪರಿವಾರಕ್ಕೆ ಅದೊಂದೇ ನೆಪ ಸಾಕಿತ್ತು. ಅಡ್ವಾಣಿ ಜಾಗದಲ್ಲಿ ನರೇಂದ್ರ ಮೋದಿಯವರನ್ನು ತರಬೇಕಿತ್ತು. ಅವತ್ತಿನಿಂದಲೇ ಅಡ್ವಾಣಿಯವರನ್ನು ಅಧಿಕಾರ ಕೇಂದ್ರದಿಂದ ಬೇರ್ಪಡಿಸಲಾಯ್ತು. ಉದ್ದೇಶಪೂರ್ವಕವಾಗಿ ನಿರ್ಲಕ್ಷಕ್ಕೊಳಗಾದ ಲೋಹಪುರುಷನಿಗೆ ತುಕ್ಕು ಹಿಡಿಯಿತು. ನಂತರ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ರಥಯಾತ್ರೆಯ ಸಾರಥಿಗಳಾದ ಅಡ್ವಾಣಿ ಹಾಗೂ ಜೋಶಿಯವರನ್ನು ಸಂಪೂರ್ಣವಾಗಿ ಕಡೆಗಣಿಸಲಾಯ್ತು. ಇದರಲ್ಲಿ ಮೋದಿಯವರ ಕೈವಾಡ ಹಾಗೂ ಸಂಘದ ಬೆಂಬಲ ಎರಡೂ ಕಾರಣವಾಗಿದ್ದವು.

ರಾಜಕೀಯ ಅಂದ್ರೆ ಹೀಗೇನೆ. ರಾಮಮಂದಿರಕ್ಕಾದ ಹೋರಾಟದಲ್ಲಿ ಸಾವಿರಾರು ಜನ ಕರಸೇವಕರು ನೋವು ಸಾವಿಗೆ ತುತ್ತಾದರು. ಮಸೀದಿ ದ್ವಂಸದಿಂದಾಗಿ ಕೊಟ್ಯಂತರ ಮುಸ್ಲಿಮರು ನೊಂದು ಕೊಂಡರು. ಮಂದಿರದ ಹೆಸರಲ್ಲಿ ಹಿಂದೂ ಮುಸ್ಲಿಂ ನಡುವೆ ಕಂದರ ಸೃಷ್ಟಿಸಿ ಧಾರ್ಮಿಕ ಸೌಹಾರ್ದತೆಯನ್ನು ಹಾಳು ಮಾಡಿದ ಅಪಕೀರ್ತಿ ಅಡ್ವಾಣಿಯವರದ್ದಾಗಿದೆ.

ಧ್ವಂಸ ಮಾಡಿದ ಬಾಬ್ರಿ ಮಸೀದಿ

ಗೋದ್ರಾ ರೈಲು ದುರಂತ ನಡೆಯದೇ ಇದ್ದಿದ್ದರೆ, ಕರಸೇವಕರು ಸುಟ್ಟು ಸಾಯದೇ ಇದ್ದಿದ್ದರೆ ಗುಜರಾತ್ ನಲ್ಲಿ ಮುಸ್ಲಿಂ ನರಮೇಧ ನಡೆಯುತ್ತಲೇ ಇರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಕುಮ್ಮಕ್ಕು ಹಾಗೂ ಪ್ರಚೋದನೆಯಿಂದ ಸಹಸ್ರಾರು ಮುಸ್ಲಿಂ ಅಮಾಯಕರ ಹತ್ಯೆ ಆಯಿತು ಎಂಬುದು ಆಗಿನ ಸುದ್ದಿ. ನಿರ್ದಯವಾಗಿ ಇಂತಹ ಹತ್ಯಾಕಾಂಡ ಸಂಘಟಿಸಿದ್ದಕ್ಕಾಗಿ ಹಾಗೂ ಕರಸೇವಕರ ಸಾವಿಗೆ ಸೇಡು ತೀರಿಸಿ ಕೊಂಡಿದ್ದಕ್ಕಾಗಿ ಮೋದಿಯವರು ಸಮಸ್ತ ಸಂಘ ಪರಿವಾರದವರ ಕಣ್ಣಲ್ಲಿ ಮಹಾನಾಯಕರಾಗಿ ಹೊರಹೊಮ್ಮಿದರು ಎಂದು ಸಂಘಿಗಳೇ ಹೆಮ್ಮೆಯಿಂದ ಹೇಳುತ್ತಾರೆ. ದೇಶವನ್ನು ಆಳಲು ಮೋದಿಯಂತವರೇ ಸೂಕ್ತ ಎನ್ನುವುದನ್ನು ಮನಗಂಡ ಆರೆಸ್ಸೆಸ್ ಅವರ ದೆಹಲಿ ಆರೋಹಣಕ್ಕೆ ಅಡ್ಡವಾಗಬಹುದಾಗಿದ್ದ ಅಡ್ವಾಣಿಯವರನ್ನು ಅವರೋಹಣಕ್ಕೀಡು ಮಾಡುವ ನಿರ್ಧಾರ ತೆಗೆದು ಕೊಂಡಿತು. ಅಡ್ವಾಣಿಯವರ ಬುಟ್ಟೋ ಪರ ಹೇಳಿಕೆ ಹಾಗೂ ವಯಸ್ಸು ನೆಪವಾಯಿತು. ಅಂದುಕೊಂಡಂತೆ ಅಡ್ವಾಣಿ ಮನೆಗೆ ಹೋದರೆ ಮೋದೀಜಿ ದೆಹಲಿಗೆ ಪದೋನ್ನತಿ ಪಡೆದರು.

ರಥಯಾತ್ರೆ ನಡೆದ ದಾರಿಯಲ್ಲಿ ನಡೆದ ಕೋಮುಗಲಭೆಯ ಚಿತ್ರಣ

ಆದರೆ ರಾಮಭಕ್ತರ ಮನಸ್ಸಲ್ಲಿ ಇನ್ನೂ ಅಡ್ವಾಣಿ ಜೀವಂತವಾಗಿಯೇ ಇದ್ದಾರೆ. ಅಡ್ವಾಣಿಯವರ ನೇತೃತ್ವದ ರಾಮ ರಥಯಾತ್ರೆಯ ಪರಿಣಾಮದಿಂದಲೇ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ನಂಬಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರ ಮನದಿಂದ ಅಡ್ವಾಣಿಯವರನ್ನು ಸಂಪೂರ್ಣವಾಗಿ ಮರೆಮಾಚುವುದು ಮೋದಿಯವರಿಂದಲೂ ಸಾಧ್ಯವಿಲ್ಲ ಎನ್ನುವ ಅರಿವು ಸಂಘದವರಿಗೂ ಹಾಗೂ ಮೋದಿಯವರಿಗೂ ಇದೆ. ಆದ್ದರಿಂದ ಅಡ್ವಾಣಿಯವರಿಗೆ ಆದ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ಅದಕ್ಕೆ  ಮೋದಿಯವರೇ ಕಾರಣರು ಎನ್ನುವ ಕಳಂಕವನ್ನು ದೂರಮಾಡಲು ಈಗ ಭಾರತ ರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸುವ ತಂತ್ರಗಾರಿಕೆ ಮೋದಿಯವರದ್ದಾಗಿದೆ. ಅಡ್ವಾಣಿಯವರನ್ನು ಮೂಲೆಗುಂಪು ಮಾಡಿದ ಪಾಪಪ್ರಜ್ಞೆಯಿಂದ ಬಳಲುತ್ತಿರುವ ಆರೆಸ್ಸೆಸ್ ಬೆಂಬಲವೂ ಇದಕ್ಕಿದೆ. ಅಡ್ವಾಣಿಯವರ ಮೇಲೆ ಅನುಕಂಪ ಹೊಂದಿದವರಿಗೆಲ್ಲಾ ಈ ಪ್ರಶಸ್ತಿ ಘೋಷಣೆಯಿಂದ ಸಂತಸವಾಗಿದೆ.

ರಥ ಯಾತ್ರೆಯಲ್ಲಿ ಅಡ್ವಾಣಿ, ಮೋದಿ

ಈ ಭಾರತರತ್ನ ಘೋಷಣೆಯ ಹಿಂದೆ ಬಿಜೆಪಿ ಪಕ್ಷದ ರಾಜಕೀಯ ಮಹತ್ವಾಕಾಂಕ್ಷೆಯೂ ಅಡಗಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಹಿಂದೂ ಮತಗಳನ್ನು ಕ್ರೋಢೀಕರಿಸಲು ರಾಮಮಂದಿರ ಎಷ್ಟು ಮುಖ್ಯವೋ ರಾಮರಥಯಾತ್ರೆಯ ರೂವಾರಿ ಸಹ ಅಷ್ಟೇ ಮುಖ್ಯವಾಗಿದ್ದಾರೆ. ಅದಕ್ಕಾಗಿ ಅಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಸಂಘ ಪರಿವಾರದಲ್ಲಿರುವ ಅಡ್ವಾಣಿ ಅಭಿಮಾನಿಗಳಲ್ಲಿ, ರಾಮಭಕ್ತರಲ್ಲಿ ಭಾವತೀವ್ರತೆಯನ್ನು ಹೆಚ್ಚಿಸುವ ಯೋಜನೆ ಈ ಪ್ರಶಸ್ತಿ ಘೋಷಣೆಯ ಹಿಂದಿದೆ. ಅಡ್ವಾಣಿಯವರಿಗೆ ಈ ಪ್ರಶಸ್ತಿ ಕೊಡಬೇಕೆಂದಿದ್ದರೆ ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರವೇ ಇತ್ತಲ್ಲಾ.. ಆಗ ಕೊಡಬಹುದಾಗಿತ್ತಲ್ಲಾ? ಆದರೆ ಈಗ ಕೊಡುವ ಉದ್ದೇಶ ಇಷ್ಟೇ -ಮೋದಿಯವರ ಪ್ರಭಾವ ಕಡಿಮೆಯಾಗಿದೆ. ಅದನ್ನು ಹೆಚ್ಚು ಮಾಡಿ ಚುನಾವಣೆಯಲ್ಲಿ ಬಹುಮತ ಪಡೆಯಲು ರಾಮದೇವರ ಭಕ್ತಿ ಹಾಗೂ ಅಡ್ವಾಣಿಯವರ ಹೆಸರಿನ ಶಕ್ತಿ ಎರಡೂ ಬೇಕಾಗಿದೆ, ಅದಕ್ಕಾಗಿಯೇ ಈಗ ಚುನಾವಣೆಯ ಹೊಸ್ತಿಲಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ. ಇದೂ ಕೂಡಾ ಕೇಸರಿ ಪಕ್ಷದ ಚುನಾವಣಾ ಪ್ರಚಾರ ಗಿಮಿಕ್ಕಿನ ಭಾಗವೇ ಆಗಿದೆ.

ಮೋದಿ ಮತ್ತು ಅಡ್ವಾಣಿ

ಶಶಿಕಾಂತ ಯಡಹಳ್ಳಿ

ಪತ್ರಕರ್ತರು, ರಂಗಕರ್ಮಿ

More articles

Latest article