ಭಾರತ್ ಜೋಡೋ ನ್ಯಾಯ ಯಾತ್ರೆ | ಏಳನೇ ದಿನ

Most read

ರಾಹುಲ್ ಗಾಂಧಿ ನೇತೃತ್ವದ ಏಳನೇ ದಿನದ ಭಾರತ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ಲಖೀಂಪುರಿಯ ಬೋಗಿನದಿಯಿಂದ ಆರಂಭವಾಗಿ ಗೋವಿಂದಪುರದ ಮೂಲಕ ಹಾದು ಅಸ್ಸಾಂ ಅರುಣಾಚಲ ಪ್ರದೇಶ ಗಡಿಯಾದ ಹರ್ಮೋಟಿಯನ್ನು ಮಧ್ಯಾಹ್ನ ತಲಪಿತು. 

ಮಧ್ಯಾಹ್ನಾನಂತರ ಅದು ಇನ್ನೊಂದು ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಪ್ರವೇಶಿಸಿತು. ಅಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಅವರು ಅರುಣಾಚಲ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ನಬಾಮ್ ತುಕೀ ಅವರಿಗೆ ಧ್ವಜ ಹಸ್ತಾಂತರ ಮಾಡಿದರು. 

ಅರುಣಾಚಲದ ರಾಜಧಾನಿ ಇಟಾನಗರದ ಮಿಥುನ್ ಗೇಟ್ ನಲ್ಲಿ ರಾಹುಲ್ ಗಾಂಧಿಯವರು ಜನರನ್ನುದ್ದೇಶಿಸಿ ಮಾತನಾಡಿದರು. “ವಿಪಕ್ಷಗಳ ದನಿಯನ್ನು ಸುದ್ದಿ ಮಾಧ್ಯಮಗಳು ಎತ್ತುವುದು ಸಾಮಾನ್ಯ. ಆದರೆ, ಈಗ ಬಿಜೆಪಿ ಆರ್ ಎಸ್ ಎಸ್ ಮಾಧ್ಯಮಗಳನ್ನು ಸಂಪೂರ್ಣ ವಶಪಡಿಸಿಕೊಂಡಿವೆ. ಈ ಮಾಧ್ಯಮಗಳೆಲ್ಲದರ ಮೇಲೂ ಒತ್ತಡ ಹಾಕಿ ಜನರ ವಿಷಯಗಳನ್ನು ಅವು ಎತ್ತದಂತೆ ನೋಡಿಕೊಂಡಿವೆ. ಜನರ ವಿಷಯಗಳನ್ನು ಎತ್ತಲು ಈಗ ಇದೊಂದೇ ದಾರಿ ನಮಗಿರುವುದು. ಆದ್ದರಿಂದಲೇ ನಾವು ಈ ಯಾತ್ರೆ ಶುರು ಮಾಡಿದ್ದೇವೆ, ನಮ್ಮ ಯಾತ್ರೆಯ ಉದ್ದೇಶ ನಿಮ್ಮ ಮಾತುಗಳನ್ನ ಆಲಿಸುವುದು ಮತ್ತು ನಿಮ್ಮ ವಿಷಯಗಳನ್ನು ಎತ್ತುವುದು” ಎಂದು ಅವರು ಹೇಳಿದರು. ಬಿಜೆಪಿ ಮತ್ತು ಆರ್ ಎಸ್ ಎಸ್ ಇವು ದೇಶದಲ್ಲಿ ದ್ವೇಷ ಹರಡುತ್ತಿವೆ, ಮಣಿಪುರದಲ್ಲಿ ಏನು ಆಗಿದೆಯೋ ಅದು ಬಿಜೆಪಿ ಮತ್ತು ಅರ್ ಎಸ್ ಎಸ್ ವಿಚಾರಧಾರೆಯ ಪರಿಣಾಮವೇ ಆಗಿದೆ ಎಂದೂ ಅವರು ಹೇಳಿದರು.

ಇದಕ್ಕೆ ಮೊದಲು ಮುಂಜಾನೆ ಅಸ್ಸಾಂ ಲಖೀಂ ಪುರದಲ್ಲಿ ಗಲಭೆ ನಡೆಯಿತು. ಯಾತ್ರೆಗೆ ಸಂಬಂಧಿಸಿದ ವಾಹನಗಳಿಗೆ ಜಖಂ ಮಾಡಲಾಯಿತು, ಯಾತ್ರೆಯ ಬ್ಯಾನರ್ ಗಳನ್ನು ಹರಿದು ಹಾಕಲಾಯಿತು ಎನ್ನಲಾಗಿದೆ. ಇದಕ್ಕೆ ಬಿಜೆಪಿ ಗೂಂಡಾಗಳೇ ಕಾರಣ ಎಂದು ಕಾಂಗ್ರೆಸ್ ಹೇಳಿದೆ. ಘಟನೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಖಂಡಿಸಿದ್ದಾರೆ.

ಯಾತ್ರಿಗಳು ರಾತ್ರಿಯನ್ನು ಅರುಣಾಚಲ ಪ್ರದೇಶ, ಇಟಾನಗರದ ಚಿಂಪು ಎಂಬಲ್ಲಿ ಕಳೆಯಲಿದ್ದಾರೆ.‌

ಶ್ರೀನಿವಾಸ ಕಾರ್ಕಳ, ಮಂಗಳೂರು

More articles

Latest article