ಭಾರತ್ ಜೋಡೋ ನ್ಯಾಯ ಯಾತ್ರೆ‌ | 54ನೆಯ ದಿನ

Most read

“ ಕಾಂಗ್ರೆಸ್ ಪಕ್ಷವು ಆದಿವಾಸಿಗಳ ಜಲ, ಜಂಗಲ್ ಜಮೀನ್ ಹೋರಾಟದ ಜತೆಗಿದೆ. ಆದಿವಾಸಿಗಳಿಗಾಗಿ ಕಾಂಗ್ರೆಸ್ ಜಮೀನು ಅಧಿಗ್ರಹಣ ಕಾನೂನು ಮತ್ತು ಪೇಸಾ ಕಾನೂನು ತಂದಿತ್ತು. ನಾವು ಮುಂದೆಯೂ ಆದಿವಾಸಿಗಳಿಗಾಗಿ ಅನೇಕ ಕಾನೂನುಗಳನ್ನು ತರಲಿದ್ದೇವೆ” – ರಾಹುಲ್‌ ಗಾಂಧಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಇಂದು ಮಧ‍್ಯಪ್ರದೇಶದಿಂದ ರಾಜಸ್ತಾನವನ್ನು ಪ್ರವೇಶಿಸಿ ಅಂತಿಮವಾಗಿ ಗುಜರಾತ್ ರಾಜ್ಯವನ್ನು ಪ್ರವೇಶಿಸಿದೆ. ರಾಜಸ್ತಾನದ ಬನಸ್ವಾಡದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನೂ ನಡೆಸಲಾಯಿತು.

ಯಾತ್ರೆಯ ಇಂದಿನ (07.03.2024) ಯೋಜಿತ ಕಾರ್ಯಕ್ರಮಗಳು ಹೀಗಿದ್ದವು: ಮಧ್ಯಾಹ್ನ 12.00 ಗಂಟೆಗೆ ರಾಜಸ್ತಾನದ ಬನಸ್ವಾಡದ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ. 4.00 ಗಂಟೆಗೆ ಗುಜರಾತ್ ಪ್ರವೇಶ. ರಾತ್ರಿ ವಿಶ್ರಾಂತಿ ಗುಜರಾತ್ ನ ಕಂಬೋಲಿಯಾ ಧಾಮ್ ನಲ್ಲಿ.

ನ್ಯಾಯ ಯಾತ್ರೆಯು ಮಧ‍್ಯಪ್ರದೇಶದಿಂದ ರಾಜಸ್ತಾನ ಪ್ರವೇಶಿಸುವಾಗ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿಯವರು ಗೋವಿಂದ ಸಿಂಗ್ ಅವರಿಗೆ ಧ್ವಜ ಹಸ್ತಾಂತರ ಮಾಡಿದರು. ರಾಜಸ್ಥಾನದಿಂದ ಗುಜರಾತ್ ಪ್ರವೇಶಿಸುವಾಗ ಗುಜರಾತ್ ದಹೋಡ್, ಝಲೋದ್ ತೃತಿ ಕನಕಸಿಯಾ ಸರ್ಕಲ್ ನಲ್ಲಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೊವಿಂದ ಸಿಂಗ್ ಅವರು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿ ಸಿಂಗ್ ಗೋಹಿಲ್ ಅವರಿಗೆ ಧ್ವಜ ಹಸ್ತಾಂತರ ಮಾಡಿದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ಕಾಂಗ್ರೆಸ್ ಸದಾ ಬಡವರ ಬಗ್ಗೆ ಕಾಳಜಿ ವಹಿಸಿದೆ ಮತ್ತು ಕೆಲಸ ಮಾಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ದೇಶಕ್ಕೆ ಸಂವಿಧಾನವನ್ನು ನೀಡಿದರು. ಇಂದು ಇದೇ ಸಂವಿಧಾನದ ಶಕ್ತಿಯಿಂದ ಜನತೆಗೆ ಪರಿಹಾರ ಸಿಕ್ಕಿದೆ. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಏನೇನು ಕೆಲಸ ಮಾಡಿದರು ಎಂಬುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಮೋದಿಯವರ ಸರಕಾರ ದೇಶಕ್ಕಾಗಿ ಏನು ಮಾಡಿದೆ? ಬಿಜೆಪಿಯ ಮಂದಿ ಇದರ ಬಗ್ಗೆ ಏನೂ ಹೇಳುವುದಿಲ್ಲ. ಬಿಜೆಪಿಯ ಜನರು ಆದಿವಾಸಿಗಳು ಮತ್ತು ದಲಿತರ ಮೇಲೆ ಅತ್ಯಾಚಾರ ಮಾಡುತ್ತಾರೆ. ಇಂತಹ ಸ್ಥಿತಿಗೋಸ್ಕರ ಮೋದಿಯವರು ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದಾರೆಯೇ?” ಎಂದು ಕೇಳಿದರು.

ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, “ ಕಾಂಗ್ರೆಸ್ ಪಕ್ಷವು ಆದಿವಾಸಿಗಳ ಜಲ, ಜಂಗಲ್ ಜಮೀನ್ ಹೋರಾಟದ ಜತೆಗಿದೆ. ಆದಿವಾಸಿಗಳಿಗಾಗಿ ಕಾಂಗ್ರೆಸ್ ಜಮೀನು ಅಧಿಗ್ರಹಣ ಕಾನೂನು ಮತ್ತು ಪೇಸಾ ಕಾನೂನು ತಂದಿತ್ತು. ನಾವು ಮುಂದೆಯೂ ಆದಿವಾಸಿಗಳಿಗಾಗಿ ಅನೇಕ ಕಾನೂನುಗಳನ್ನು ತರಲಿದ್ದೇವೆ” ಎಂದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ನಿರುದ್ಯೋಗಿ ಯುವಜನರಿಗಾಗಿ ಏನೇನು ಮಾಡಲಿದೆ ಎಂಬುದನ್ನು ಈ ಸಂದರ್ಭದಲ್ಲಿ ಅವರು ಘೋಷಿಸಿದರು. ಅವು ಹೀಗಿದ್ದವು.

ಭರ್ತಿ ಭರವಸೆ: 30 ಲಕ್ಷ ಸರಕಾರಿ ನೌಕರಿಯನ್ನು ಭರ್ತಿಮಾಡಲಾಗುವುದು.

ಮೊದಲ ನೌಕರಿ ಖಾತ್ರಿ: ಒಂದು ವರ್ಷಕ್ಕೆ ಒಂದು ಲಕ್ಷ ರುಪಾಯಿಯ 25 ವರ್ಷ ಕಡಿಮೆ ಹರೆಯದ ಡಿಪ್ಲೊಮಾಧಾರರು ಅಥವಾ ಕಾಲೇಜು ಪದವೀಧರರ ಪ್ಲೇಸ್ ಮೆಂಟ್

ಪೇಪರ್ ಲೀಕ್ ನಿಂದ ಮುಕ್ತಿ: ಪೇಪರ್ ಲೀಕ್ ನಿಂದ ಕೋಟಿಗಟ್ಟಲೆ ಯುವಕರ ಭವಿಷ್ಯ ಹಾಳು ಮಾಡುವುದನ್ನು ಕಾಂಗ್ರೆಸ್ ತಡೆಯಲಿದೆ. ಅದಕ್ಕಾಗಿ ಕಠಿಣ ಕಾನೂನು ತರಲಿದೆ.

ಗಿಗ್ ಅರ್ಥವ್ಯವಸ್ಥೆಗೆ ಸಾಮಾಜಿಕ ಭದ್ರತೆ: ಗಿಗ್ ಕೆಲಸಗಾರರಿಗೆ ಸಾಮಾಜಿಕ ಸುರಕ್ಷೆಯ ಕಾನೂನು ಖಾತರಿ

ಯುವ ರೋಶನಿ: ದೇಶದ ಎಲ್ಲ ಜಿಲ್ಲೆಗಳಿಗೆ 5000 ಕೋಟಿ ರುಪಾಯಿಯ ಸ್ಟಾರ್ಟ್ ಅಪ್ ಫಂಡ್. 40 ವರ್ಷಕ್ಕಿಂತ ಕಡಿಮೆ ವಯಸಿನ ಯುವಕರು ಇದರ ಲಾಭ ಪಡೆಯಬಹುದು.

ಗುಜರಾತ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಭಾರತದ ವಿಮಾನನಿಲ್ದಾಣ, ಬಂದರು, ವಿದ್ಯುತ್ ಉತ್ಪಾದನಾ ಸಮೇತ ಎಲ್ಲವನ್ನೂ ಅದಾನಿಗೆ ಒಪ್ಪಿಸಲಾಗಿದೆ. ಪ್ರಧಾನಿ ಮೋದಿಯವರು ಭಾರತವನ್ನು ಎರಡು ಮೂರು ಮಂದಿ ಬಿಲಿಯಾಧಿಪತಿಗಳಿಗೆ ಒಪ್ಪಿಸಿದ್ದಾರೆ. ನರೇಂದ್ರ ಮೋದಿ ಬಿಲಿಯಾಧಿಪತಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದ್ದರಿಂದ ಅವರು 24 ಗಂಟೆ ಟಿವಿಯಲ್ಲಿ ಕಾಣಿಸುತ್ತಾರೆ. ಅದೇ ಕಾಂಗ್ರೆಸ್ ಬಡವರು ಮತ್ತು ರೈತರಿಗೆ ಸಹಾಯ ಮಾಡುತ್ತದೆ. ಆದ್ದರಿಂದ ನಾವು ಟಿವಿಯಲ್ಲಿ ಕಾಣಿಸುವುದಿಲ್ಲ” ಎಂದರು.ನಾಳೆ ಯಾತ್ರೆಯು ಗುಜರಾತ್ ನಲ್ಲಿ ಮುಂದುವರಿಯಲಿದೆ.


ಶ್ರೀನಿವಾಸ ಕಾರ್ಕಳ, ಮಂಗಳೂರು

ಯಾತ್ರೆ – 53- ಭಾರತ್ ಜೋಡೋ ನ್ಯಾಯ ಯಾತ್ರೆ- 53ನೆಯ ದಿನ‌

More articles

Latest article