ಭಾರತ್ ಜೋಡೋ ನ್ಯಾಯ ಯಾತ್ರೆ‌ – 50ನೆಯ ದಿನ

Most read

“ಬಿಜೆಪಿ ಸರಕಾರವು ದೊಡ್ಡ ದೊಡ್ಡ ಉದ್ಯಮಿಗಳ ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡುತ್ತದೆ. ಇದು ತೆರಿಗೆ ಹಣ, ದೇಶದ ಜನರ ಹಣ. ಬಿಲಿಯಾಧಿಪತಿಗಳ ಸಾಲ ಮನ್ನಾ ಮಾಡುವುದು ಮೋದಿಯವರಿಗೆ ಸಾಧ್ಯವಾಗುವುದಾದರೆ ರೈತರ ಸಾಲ ಯಾಕೆ ಮನ್ನಾ ಮಾಡಲು ಆಗುವುದಿಲ್ಲ?” – ರಾಹುಲ್‌ ಗಾಂಧಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಇಂದು (03.03.2024) 50 ನೇ ದಿನ. ಯಾತ್ರೆ ಇಂದು ಮಧ್ಯಪ್ರದೇಶದಲ್ಲಿ ಮುಂದುವರಿಯಿತು. ಇಂದು ಜನನಾಯಕ ರಾಹುಲ್ ಗಾಂಧಿಯವರು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮಾಜಿ ಸೈನಿಕರು ಮತ್ತು ಸೇನೆಗೆ ಸೇರುವ ಕನಸು ಕಾಣುತ್ತಿರುವ ಯುವಜನರನ್ನು ಭೇಟಿ ಮಾಡಿದರು. ಅವರ ಮಾತುಗಳನ್ನು ಆಲಿಸಿದರು. ಸೈನಿಕರಿಗೆ ಆಗಿರುವ ಅನ್ಯಾಯ, ಬಾಕಿಯಿರುವ ಭರ್ತಿಗಳು, ಒ ಆರ್ ಒ ಪಿ, ಅಗ್ನಿವೀರರಿಗೆ ಮಾಡುತ್ತಿರುವ ತಾರತಮ್ಯ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಿತು. ಇಂಡಿಯಾ ಮೈತ್ರಿಕೂಟ ಸರಕಾರ ರಚನೆಯಾದ ಮೇಲೆ ಅಗ್ನಿವೀರ ಯೋಜನೆಯಲ್ಲಿ ಸೂಕ್ತ ತಿದ್ದುಪಡಿ ಮಾಡಲಾಗುವುದು ಎಂದು ರಾಹುಲ್ ಹೇಳಿದರು.

ಬಿಹಾರ ಪಾಟ್ನಾದಲ್ಲಿ ಇಂಡಿಯಾ ಮೈತ್ರಿಕೂಟದ ಬೃಹತ್ ರ್ಯಾಲಿ ನಡೆಯಲಿದ್ದುದರಿಂದ ಇಂದು ಯಾತ್ರೆ ಕೆಲ ಗಂಟೆಗಳ ಕಾಲ ಮಾತ್ರ ನಡೆಯಿತು. ಕಾರ್ಯಕ್ರಮಗಳು ಹೀಗಿದ್ದವು- ಬೆಳಿಗ್ಗೆ 7.45 ಕ್ಕೆ ರಿವಾಝ್ ಗಾರ್ಡನ್ ನಿಂದ ನಿರ್ಗಮನ. 8.00 ರಿಂದ 8.40 ರ ವರೆಗೆ ಅಗ್ನಿವೀರರೊಂದಿಗೆ ಸಂವಾದ. 8.40 ರಿಂದ 9.30 ರ ವರೆಗೆ ಶಿವಪುರಿಯ ರಿವಾಜ್ ಗಾರ್ಡನ್ ನಿಂದ ಮೊಹನಾ ವರೆಗೆ ಯಾತ್ರೆ. 9.30 ರಿಂದ 10.00 ರವರೆಗೆ ಶಿವಪುರಿಯ ಮೊಹನಾದಲ್ಲಿ ಸ್ವಾಗತ ಕಾರ್ಯಕ್ರಮ.

ಯಾತ್ರೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, “ದೇಶದಲ್ಲಿ 40 ವರ್ಷಗಳಲ್ಲಿಯೇ ಗರಿಷ್ಠ ನಿರುದ್ಯೋಗವಿದೆ. ಪ್ರಧಾನಿ ಮೋದಿಯವರು ಜಿ ಎಸ್ ಟಿ ಮತ್ತು ನೋಟು ನಿಷೇಧದ ಮೂಲಕ ಸಣ್ಣ ಉದ್ಯಮಗಳನ್ನು ಮುಗಿಸಿಬಿಟ್ಟುದೇ ಇದಕ್ಕೆ ಕಾರಣ. ನಾವು ಜಾತಿಗಣತಿಯ ಬಗ್ಗೆ ಮಾತನಾಡಿದ ತಕ್ಷಣ ಮೋದಿಯವರು ದೇಶದಲ್ಲಿರುವುದು ಎರಡೇ ಜಾತಿ- ಬಡವರು ಮತ್ತು ಧನಿಕರು ಎನ್ನುತ್ತಾರೆ. ಮೋದಿಯವರ ಬಯಕೆಯೇನೆಂದರೆ ದೇಶದ 73% ಜನತೆಗೆ ಯಾರ ಪಾಲು ಎಷ್ಟು ಎಂಬುದು ತಿಳಿಯದಿರಲಿ ಎಂಬುದು. ದೇಶದಲ್ಲಿ 50% ಒಬಿಸಿ, 5% ದಲಿತರು, 8% ಆದಿವಾಸಿಗಳಿದ್ದಾರೆ. ಅವರಿಗೆ ಅವರ ಜನಸಂಖ್ಯೆಗೆ ಅನುಗುಣವಾದ ಪಾಲು ಸಿಕ್ಕಿಯೇ ಇಲ್ಲ. ಈ ಮೊದಲು ಸರಕಾರಿ ನೌಕರಿಗಳು ಇದ್ದವು ಮತ್ತು 73% ಜನಸಂಖ್ಯೆಗೆ ಅವರ ಪಾಲು ಸಿಗುತ್ತಿತ್ತು. ಈಗ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ.

ದೇಶದ ಯುವಜನರು ಈ ಹಿಂದೆ ಕಠಿಣ ಪರಿಶ್ರಮ ಪಟ್ಟು ಸೇನೆ ಸೇರುತ್ತಿದ್ದರು. ಅಲ್ಲಿ ಅವರಿಗೆ ಗೌರವ ಸಿಗುತ್ತಿತ್ತು. ಹುತಾತ್ಮನಾದರೆ ಹುತಾತ್ಮ ಪದವಿ ದೊರೆಯುತ್ತಿತ್ತು. ಅಗ್ನಿವೀರ ಬಂದ ಮೇಲೆ ಸೈನಿಕರಲ್ಲಿ ಭೇದ ಭಾವ ಮಾಡಲಾಗುತ್ತಿದೆ. ನಾವು ಭಾರತ ಮಾತಾ ಕೀ ಜಯ‍್ ಎನ್ನುತ್ತೇವೆ. ಭಾರತ ಮಾತಾ ಈ ದೇಶವಾಗಿದೆ. ದೇಶದ ಜನತೆಯಾಗಿದೆ. ಒಂದುವೇಳೆ ನಾವು ಭಾರತ ಮಾತಾ ಕೀ ಜೈ ಹೇಳುವುದಾದರೆ ದೇಶದ 73% ಜನರ ಜಯವೂ ಆಗಬೇಕಲ್ಲವೇ?

ಬಿಜೆಪಿ ಸರಕಾರವು ದೊಡ್ಡ ದೊಡ್ಡ ಉದ್ಯಮಿಗಳ ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡುತ್ತದೆ. ಇದು ತೆರಿಗೆ ಹಣ, ದೇಶದ ಜನರ ಹಣ. ಬಿಲಿಯಾಧಿಪತಿಗಳ ಸಾಲ ಮನ್ನಾ ಮಾಡುವುದು ಮೋದಿಯವರಿಗೆ ಸಾಧ್ಯವಾಗುವುದಾದರೆ ರೈತರ ಸಾಲ ಯಾಕೆ ಮನ್ನಾ ಮಾಡಲು ಆಗುವುದಿಲ್ಲ?” ಎಂದು ಅವರು ಹೇಳಿದರು.

ನಾಳೆ ಮಧ್ಯಪ್ರದೇಶದಲ್ಲಿ ಯಾತ್ರೆ ಮುಂದುವರಿಯಲಿದೆ.

ಶ್ರೀನಿವಾಸ ಕಾರ್ಕಳ, ಮಂಗಳೂರು

ಯಾತ್ರೆ- 49http://ಭಾರತ್‌ ಜೋಡೋ ನ್ಯಾಯ ಯಾತ್ರೆ – 49ನೆಯ ದಿನ https://kannadaplanet.com/bharat-jodo-nyaya-yatra-49th-day/

More articles

Latest article