ಬಿಹಾರದಲ್ಲಿ ಉದ್ಯಮಗಳು ಇದ್ದವು. ಈಗ ಅವು ಬಾಗಿಲು ಮುಚ್ಚಿವೆ. ಈಗ ಬಿಹಾರದ ಜನರು ಗುತ್ತಿಗೆ ಕಾರ್ಮಿಕರಾಗಿ ದುಡಿಯಲು ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇದು ಆರ್ಥಿಕ ಅನ್ಯಾಯ– ರಾಹುಲ್ ಗಾಂಧಿ
ನ್ಯಾಯ ಯಾತ್ರೆಯು ಛತ್ತೀಸ್ ಗಢ ರಾಜ್ಯದ ಬಳಿಕ ಬಿಹಾರದಲ್ಲಿ ಮುಂದುವರಿದಿದೆ. ಯಾತ್ರೆಯ ಅಂಗವಾಗಿ ಇಂದು (15.02.2024) ಮಧ‍್ಯಾಹ್ನ 2.00 ಗಂಟೆಗೆ ಬಿಹಾರದ ಔರಂಗಾಬಾದ್ ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿಯವರ ಜತೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು, “ಕಾಂಗ್ರೆಸ್ ಪಕ್ಷದ ಭಾರತ ಜೋಡೋ ನ್ಯಾಯ ಯಾತ್ರೆಗೆ ನೀವೆಲ್ಲರೂ ಭರ್ಜರಿ ಬೆಂಬಲ ನೀಡಿದ್ದೀರಿ, ಈ ಜನಸಮರ್ಥನೆ ನೋಡಿದಾಗ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಗೆಲ್ಲುತ್ತದೆ ಅನಿಸಲಾರಂಭಿಸಿದೆ. ಬಿಹಾರ ಭಗವಾನ್ ಬುದ್ಧ, ಮಹಾವೀರ, ಗುರುಗೋವಿಂದ ಸಿಂಗ್, ರಾಜೇಂದ್ರಪ್ರಸಾದ್ ಮತ್ತು ಅನುಗ್ರಹ ನಾರಾಯಣ ಸಿನ್ಹಾ ಅವರ ನೆಲ. ಆದರೆ, ಯಾವ ಬಿಹಾರ ಜಗತ್ತಿಗೆ ದಾರಿ ತೋರಿತ್ತೋ ಅದನ್ನು ಬಿಜೆಪಿ ಮತ್ತೊಮ್ಮೆ ಸಂಕಟಕ್ಕೆ ದೂಡಿದೆ.
ನಿತೀಶ್ ಕುಮಾರ್ ಹೇಳಿದ್ದರು- ಸಾಯುತ್ತೇನೆ ಆದರೆ ಎಂದೂ ಬಿಜೆಪಿಗೆ ಮರಳುವುದಿಲ್ಲ ಎಂದು. ಈಗ ಬಿಜೆಪಿಗೆ ಹೋಗಿಬಿಟ್ಟಿದ್ದಾರೆ. ಅವರು ಬಡವರಿಗೆ ಮಾತು ಕೊಟ್ಟು ಮತ ಪಡೆದಿದ್ದರು, ಆನಂತರ ಬಡವರನ್ನು ದೋಚುವ ಪಕ್ಷಕ್ಕೇ ನುಸುಳಿದ್ದಾರೆ. ಭಗವಾನ್ ಬುದ್ಧ, ಸತ್ಯ ಮಾರ್ಗದಲ್ಲಿ ನಡೆಯುವ ವ್ಯಕ್ತಿ ಕೇವಲ ಎರಡು ತಪ್ಪುಗಳನ್ನು ಮಾಡಬಹುದು. 1. ದಾರಿ ನಿರ್ಧರಿಸುವುದು 2. ಆರಂಭವನ್ನೇ ಮಾಡದಿರುವುದು ಎಂದಿದ್ದಾರೆ. ಸಂಪೂರ್ಣ ದಾರಿಯನ್ನು ನಿರ್ಧರಿಸುವ ನಾಯಕನೆಂದರೆ ರಾಹುಲ್ ಗಾಂಧಿ” ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, “ಸಾವಿರಾರು ರೈತರು ದಿಲ್ಲಿಯತ್ತ ಮುಂದುವರಿಯುತ್ತಿದ್ದಾರೆ. ಅವರನ್ನು ತಡೆಯಲು ಮೋದಿ ಸರಕಾರ ಅಶ್ರುವಾಯು ಮತ್ತು ಚರೆ ಗುಂಡುಗಳಿಂದ ದಾಳಿ ಮಾಡುತ್ತಿದೆ. ನಾನು ಒಬ್ಬ ರೈತನಲ್ಲಿ ಮಾತನಾಡಿದೆ. ಆತ ಈ ಹಿಂದೆ ಸೇನೆಯಲ್ಲಿ ಜವಾನನಾಗಿದ್ದ. ಆತನ ಮುಖಕ್ಕೆ ಚರೆ ಗುಂಡು ಬಿದ್ದಿದೆ. ನೀವು ಮೊದಲೂ ದೇಶಕ್ಕಾಗಿ ಹೋರಾಡಿದವರು, ಈಗಲೂ ದೇಶಕ್ಕಾಗಿ ಹೋರಾಡುತ್ತಿದ್ದೀರಿ ಎಂದು ನಾನು ಆತನಿಗೆ ಹೇಳಿದೆ. ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ನಿಮಗೆ ಸಾವಿರಾರು ಮಂದಿಯ ಜನಸಂದೋಹ ಕಾಣುತ್ತದೆ. ಆದರೆ ಟಿವಿ ಆನ್ ಮಾಡಿದ್ರೆ ಅಲ್ಲಿ ಮೋದಿಯ ಮುಖ ಮಾತ್ರ ಕಾಣಿಸುತ್ತದೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೊಗದಲ್ಲಿ ಸದಾ ಮಂದಹಾಸ ಕಾಣಿಸಬಹುದು. ಆದರೆ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಮುಖ ಗಂಟಿಕ್ಕಿಕೊಂಡ ಎಲ್ಲರಿಗೂ ಗುರಾಯಿಸಿದಂತೆ ಕಾಣಿಸುತ್ತಾರೆ. ಈ ಮಂದಿ ದೇಶದಲ್ಲಿ ದ್ವೇಷ ಹರಡುತ್ತಿದ್ದಾರೆ.
ಬಿಜೆಪಿಯ ದ್ವೇಷ ಸಿದ್ಧಾಂತವು ಮಣಿಪುರವನ್ನು ಸುಟ್ಟುಹಾಕಿತು. ನಾವು ಈ ದ್ವೇಷದ ವಿರುದ್ಧ ‘ಭಾರತ ಜೊಡೋ ಯಾತ್ರಾ’ ಮತ್ತು ‘ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿ’ಯ ಘೋಷಣೆ ನೀಡಿದೆವು. ಬಿಹಾರದಲ್ಲಿ ಉದ್ಯಮಗಳು ಇದ್ದವು. ಈಗ ಅವು ಬಾಗಿಲು ಮುಚ್ಚಿವೆ. ಈಗ ಬಿಹಾರದ ಜನರು ಗುತ್ತಿಗೆ ಕಾರ್ಮಿಕರಾಗಿ ದುಡಿಯಲು ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇದು ಆರ್ಥಿಕ ಅನ್ಯಾಯ. ದೇಶದಲ್ಲಿ ಬಿಲಿಯಾಧಿಪತಿಗಳ 14 ಲಕ್ಷ ಕೋಟಿ ರುಪಾಯಿ ಮನ್ನಾ ಆಯಿತು. ಆದರೆ ಬಡವರ ಮನರೇಗಾಕ್ಕೆ ವಾರ್ಷಿಕ ಕೇವಲ 70 ಸಾವಿರ ಕೋಟಿ ಬೇಕಾಗುವುದು. ಆದರೆ ಇದು ಹಣದ ಪೋಲು ಎನ್ನುತ್ತಾರೆ ಬಿಲಿಯಾಧಿಪತಿಗಳು. ಇದು ಆರ್ಥಿಕ ಅನ್ಯಾಯ.
ಕಾಂಗ್ರೆಸ್ ದೇಶದ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡುತ್ತದೆ. ಕಾಂಗ್ರೆಸ್ ಪಕ್ಷವು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಕಂಪ್ಯೂಟರ್ ಕ್ರಾಂತಿಯಂತಹ ಕ್ರಾಂತಿಕಾರಿ ಕೆಲಸ ಮಾಡಿದೆ. ಅದೇ ರೀತಿಯಲ್ಲಿ ನಾವು ಜಾತಿ ಗಣತಿ ಮಾಡುತ್ತೇವೆ. ಸಾಮಾಜಿಕ ನ್ಯಾಯದ ಮುಂದಿನ ಹೆಜ್ಜೆ ಜಾತಿಗಣತಿ. ಇದನ್ನು ಕಾಂಗ್ರೆಸ್ ಮಾಡಿಯೇ ಮಾಡುತ್ತದೆ” ಎಂದರು.
ಶ್ರೀನಿವಾಸ ಕಾರ್ಕಳ, ಮಂಗಳೂರು
ಯಾತ್ರೆ-31- ಓದಿ ಭಾರತ್ ಜೋಡೋ ನ್ಯಾಯ ಯಾತ್ರೆ- 31ನೆಯ ದಿನ