ಕಾಂಗ್ರೆಸ್ ನ ಗ್ಯಾರಂಟಿಯೆಂದರೆ ನಾವು ದೇಶದಲ್ಲಿ ಜಾತಿಗಣತಿ ಮಾಡಿಸುತ್ತೇವೆ. ರೈತರಿಗೆ ಎಂ ಎಸ್ ಪಿ ಯ ಕಾನೂನು ಗ್ಯಾರಂಟಿ ನೀಡುತ್ತೇವೆ. ದೇಶದಲ್ಲಿ ಹರಡುತ್ತಿರುವ ಅನ್ಯಾಯದ ವಿರುದ್ಧ ನ್ಯಾಯ ಯೋಧರ ಯುದ್ಧ ನಡೆಯುತ್ತಲೇ ಇರುತ್ತದೆ. ನಾವು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಮಟ್ಟದಲ್ಲಿ ನ್ಯಾಯ ಕೊಟ್ಟೇ ಕೊಡುತ್ತೇವೆ– ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮಧ‍್ಯಪ್ರದೇಶದಲ್ಲಿ ಮುಂದುವರಿದಿದೆ.

ಯಾತ್ರೆಯ ಇಂದಿನ (06.03.2024) ಯೋಜಿತ ಕಾರ್ಯಕ್ರಮಗಳು ಹೀಗಿದ್ದವು- ಮಧ್ಯಾಹ್ನ 1.00 ಗಂಟೆಗೆ ಮಧ‍್ಯಪ್ರದೇಶದ ರತ್ಲಾಮ್ ನ ಬದನಾವರದಲ್ಲಿ ಸಾರ್ವಜನಿಕ ಸಭೆ. 2.30 ಕ್ಕೆ ಬಡನಾವರದಿಂದ ಯಾತ್ರೆ ಮತ್ತೆ ಆರಂಭ. ರತ್ಲಾಮ್ ನ ಫವಾರಾ ಚೌಕದಲ್ಲಿ ಸ್ವಾಗತ ಕಾರ್ಯಕ್ರಮ. ರತ್ಲಾಮ್ ನ ದೊ ಬತ್ತಿಚೌರಾಹದಲ್ಲಿ ಸ್ವಾಗತ ಕಾರ್ಯಕ್ರಮ. ರಾತ್ರಿ ವಾಸ್ತವ್ಯ ಮಧ್ಯಪ್ರದೇಶ, ರತ್ಲಾಮ್ ನ ಸರವನದಲ್ಲಿ.
ಸಾರ್ವಜನಿಕ ಸಭೆ ಶುರುವಾಗುವಾಗ ಬಹಳ ತಡವಾದುದರಿಂದ ಯಾತ್ರೆಯ ಆರಂಭವೂ ವಿಳಂಬಗೊಂಡಿತು.
ಬದನಾವರದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು “ಬಿಜೆಪಿಯ ನೇತಾರರು ಭಾಷಣ ಮಾಡತೊಡಗಿದಾಗ ಕಾಂಗ್ರೆಸ್ ಬಗ್ಗೆ ಉಲ್ಟಾ ಮಾತಾಡುತ್ತಾರೆ. ಕೆಲವು ದಿನಗಳ ಹಿಂದೆ ಶಿವರಾಜ ಸಿಂಗ್ ಚೌಹಾಣರು ರಾಹುಲ್ ಗಾಂಧಿ ಮತ್ತು ಖರ್ಗೆಯವರು ಜತೆಗೂಡಿ ಕಾಂಗ್ರೆಸ್ ಮುಗಿಸಲು ಕೆಲಸ ಮಾಡುತ್ತಿದ್ದಾರೆ ಎಂದರು. ಆದರೆ ಇಲ್ಲಿನ ಪ್ರಶ್ನೆಯೆಂದರೆ, ಬಿಜೆಪಿಯು ಶಿವರಾಜ ಸಿಂಗರನ್ನು ಅಧಿಕಾರದಿಂದ ಹೊರಹಾಕಿದ್ದು ಯಾಕೆ?

ದೇಶದಲ್ಲಿ 45 ವರ್ಷಗಳಲ್ಲಿಯೇ ಗರಿಷ್ಠ ನಿರುದ್ಯೋಗವಿದೆ. ಅಗತ್ಯವಸ್ತುಗಳ ಬೆಲೆ ಏರುತ್ತಿದೆ. ಇವೆಲ್ಲ ಮೋದಿಯವರ ಕಾಲದಲ್ಲಿ ಆದುದು. ಧನಿಕರು ಮತ್ತು ಬಡವರ ನಡುವಿನ ಅಂತರ ತಗ್ಗುವುದು ಮೋದಿಯವರಿಗೆ ಬೇಕಾಗಿಲ್ಲ. ಧನಿಕರು ಇನ್ನಷ್ಟು ಧನಿಕರಾಗಬೇಕು, ಬಡವರು ಇನ್ನಷ್ಟು ಬಡವರಾಗಬೇಕು ಎನ್ನುವುದು ಅವರ ಬಯಕೆ. ಮೋದಿಯವರ ಗ್ಯಾರಂಟಿಯೇನಾಗಿತ್ತು? ಪ್ರತೀ ವರ್ಷ ಎರಡು ಕೋಟಿ ಉದ್ಯೋಗ, ಎಲ್ಲರ ಖಾತೆಗೆ 15 ಲಕ್ಷ ರುಪಾಯಿ, ರೈತರ ಆದಾಯ ದ್ವಿಗುಣ, ರೈತರಿಗೆ ಎಂ ಎಸ್ ಪಿ. ಆದರೆ ಆದುದು ಏನು? ಎಲ್ಲವೂ ಸುಳ್ಳು ಎನಿಸಿಕೊಂಡಿತು.
ಮಧ‍್ಯಪ್ರದೇಶದಲ್ಲಿ 3 ಲಕ್ಷಕ್ಕೂ ಅಧಿಕ ವನಾಧಿಕಾರ ಪಟ್ಟಾಗಳನ್ನು ರದ್ದು ಮಾಡಲಾಯಿತು. ಪಟ್ಟಾ ರದ್ದು ಮಾಡುವ ಮಂದಿ ಎಂದೂ ಬಡವರಿಗೆ ಸಹಾಯ ಮಾಡಲಾರರು. ಚುನಾವಣಾ ಬಾಂಡ್ ನಲ್ಲಿರುವ ಎಲ್ಲರ ಹೆಸರು ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಮ್ಮ ಬಳಿ ಎಲ್ಲ ಅಂಕಿ ಅಂಶ ಇಲ್ಲ, ನಮಗೆ ಇನ್ನೂ ಸಮಯ ಬೇಕು ಎನ್ನುತ್ತಿದೆ. ಇದು ಬಿಜೆಪಿಯ ಸೂಚನೆಯ ಮೇರೆಗೇ ನಡೆಯುತ್ತಿರುವುದು. ಅಂದ ಹಾಗೆ ಹೆಸರು ಹೇಳಲು ಮೋದಿ ಸರಕಾರ ಹೆದರುವುದೇಕೆ?” ಎಂದರು.

ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು “ಕೆಲ ಸಮಯದ ಹಿಂದೆ ನಾನೊಂದು ವೀಡಿಯೋ ನೋಡಿದೆ. ಅದರಲ್ಲಿ ಬಿಜೆಪಿ ನಾಯಕ ಆದಿವಾಸಿ ಯುವಕನ ಮೇಲೆ ಮೂತ್ರ ಮಾಡುತ್ತಿದ್ದ. ಇದು ಎಂತಹ ಮನಸು? ಇದು ಬಿಜೆಪಿಯ ಸಿದ್ಧಾಂತ. ಇದು ಕೇವಲ ಆದಿವಾಸಿಗಳೊಂದಿಗೆ ಮಾತ್ರವಲ್ಲ, ಎಸ್ ಸಿ, ಎಸ್ ಟಿ, ಮತ್ತು ಬಡವರ ಜತೆಗೂ ಹೀಗೆಯೇ ಆಗುತ್ತಿದೆ. ನೀವು ವನವಾಸಿಯಲ್ಲ, ನೀವು ಭಾರತದ ನಿಜವಾದ ಮಾಲೀಕರು. ಇದೇ ಕಾರಣಕ್ಕೆ ಕಾಂಗ್ರೆಸ್ ಆದಿವಾಸಿ ಮಸೂದೆ, PESA ಕಾನೂನು, ಭೂಮಿ ಅಧಿಗ್ರಹಣ ಮಸೂದೆ ಕೊಟ್ಟಿತು. ನಿಮ್ಮ ಭೂಮಿ ನಿಮಗೆ ವಾಪಸ್ ಕೊಟ್ಟೆವು. ನಾವು ನಿಮ್ಮನ್ನು ಆದಿವಾಸಿ ಎಂದು ಪರಿಗಣಿಸುತ್ತೇವೆ. ಮಧ್ಯಪ್ರದೇಶದಲ್ಲಿ ಅಂದಾಜು 24% ಮತ್ತು ಇಡೀ ದೇಶದಲ್ಲಿ 8% ಆದಿವಾಸಿಗಳಿದ್ದಾರೆ. ಆದರೆ ನೀವು ದೇಶದ ದೊಡ್ಡ ದೊಡ್ಡ ಕಂಪನಿಗಳ ಆಡಳಿತ ಮಂಡಳಿಯನ್ನು ನೋಡಿದರೆ ಅಲ್ಲಿ ಒಬ್ಬನೇ ಒಬ್ಬ ಆದಿವಾಸಿಯು ಮಾಲೀಕನಾಗಿ ಕಾಣಲಾರ. ಕೇವಲ 2% ಮಂದಿ ಭಾರತವನ್ನು ಕೈವಶ ಮಾಡಿಕೊಂಡಿದ್ದಾರೆ. ಅದಾನಿಯು ಸೇಬು, ವಿಮಾನ ನಿಲ್ದಾಣ, ಬಂದರು, ಆಹಾರ ದಾಸ್ತಾನು ವ್ಯವಹಾರ ಮಾಡುತ್ತಾನೆ. ನೀವು ನೋಡುತ್ತ ಕೂರುತ್ತೀರಿ.

ನೀವು ಲಕ್ಷಗಟ್ಟಲೆ ಖರ್ಚು ಮಾಡಿ ಓದು ನಡೆಸುತ್ತೀರಿ. ಆದರೆ ನಿಮಗೆ ಉದ್ಯೋಗ ಸಿಗುವುದಿಲ್ಲ. ಯಾಕೆಂದರೆ ಜಿ ಎಸ್ ಟಿ, ನೋಟು ನಿಷೇಧ ಮಾಡಿ ಸಣ್ಣ ಉದ್ಯಮಿಗಳನ್ನು ವ್ಯಾಪಾರಿಗಳನ್ನು ಮುಗಿಸಿಬಿಟ್ಟರು. ಕಾಂಗ್ರೆಸ್ ನ ಗ್ಯಾರಂಟಿಯೆಂದರೆ ನಾವು ದೇಶದಲ್ಲಿ ಜಾತಿಗಣತಿ ಮಾಡಿಸುತ್ತೇವೆ. ರೈತರಿಗೆ ಎಂ ಎಸ್ ಪಿ ಯ ಕಾನೂನು ಗ್ಯಾರಂಟಿ ನೀಡುತ್ತೇವೆ. ದೇಶದಲ್ಲಿ ಹರಡುತ್ತಿರುವ ಅನ್ಯಾಯದ ವಿರುದ್ಧ ನ್ಯಾಯ ಯೋಧರ ಯುದ್ಧ ನಡೆಯುತ್ತಲೇ ಇರುತ್ತದೆ. ನಾವು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಮಟ್ಟದಲ್ಲಿ ನ್ಯಾಯ ಕೊಟ್ಟೇ ಕೊಡುತ್ತೇವೆ. ಮೋದಿ ಸರಕಾರ ಬಿಲಿಯಾಧಿಪತಿಗಳ 16 ಲಕ್ಷ ಕೋಟಿ ರುಪಾಯಿ ಮನ್ನಾ ಮಾಡಿದೆ. ಆದರೆ ರೈತರ ಒಂದು ಪೈಸೆ ಮನ್ನಾ ಮಾಡಿಲ್ಲ” ಎಂದರು.
ಶ್ರೀನಿವಾಸ ಕಾರ್ಕಳ, ಮಂಗಳೂರು
ಯಾತ್ರೆ -52 ಭಾರತ್ ಜೋಡೋ ನ್ಯಾಯ ಯಾತ್ರೆ- 52ನೆಯ ದಿನ


                                    