ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ, ಪಿ ಎಸ್ ಯು ಗಳು ಬಂದ್ ಆಗುತ್ತಿವೆ, ಬೆಲೆ ಏರಿಕೆ ಹೆಚ್ಚುತ್ತಿದೆ, ಜಾತಿಜನಗಣತಿ ನಡೆಯುತ್ತಿಲ್ಲ, ಮೀಸಲಾತಿ 50% ಮಿತಿಯನ್ನು ಹೊಂದಿದೆ, ರೈತರು ಮತ್ತು ಕಾರ್ಮಿಕರಿಗೆ ಅನ್ಯಾಯ ಆಗುತ್ತಿದೆ, ಈ ಅನ್ಯಾಯಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ- ರಾಹುಲ್ ಗಾಂಧಿ
ನ್ಯಾಯ ಯಾತ್ರೆಯ ಇಂದು ಜಾರ್ಖಂಡ್ ನಿಂದ ಒಡಿಶಾ ಪ್ರವೇಶಿಸಿದೆ. ಇಂದಿನ (06.02.2024) ಕಾರ್ಯಕ್ರಮಗಳು ಹೀಗಿದ್ದವು.
ಬೆಳಿಗ್ಗೆ 8.00 ಕ್ಕೆ ಜಾರ್ಖಂಡ್ ನ ಕುಂಠಿ, ಶಹೀದ್ ಭಗತ್ ಸಿಂಗ್ ಚೌಕದಿಂದ ಯಾತ್ರೆ ಆರಂಭ. 12.00 ಕ್ಕೆ ಮಧ್ಯಾಹ್ನದ ವಿರಾಮ, ಗುಮ್ಲಾದ ಬಸ್ ಸ್ಟಾಂಡ್ ಕಾಮದರಾ ದಲ್ಲಿ. ಆನಂತರ ಸಾರ್ವಜನಿಕ ಭಾಷಣ. ಮಧ‍್ಯಾಹ್ನದ ಆನಂತರ 2.30 ಕ್ಕೆ ಸಿಮದೇಗಾದ ಝುಲಾನ್ ಸಿಂಗ್ ಚೌಕದ ಬಸ್ ನಿಲ್ದಾಣದಿಂದ ಯಾತ್ರೆ ಪುನರಾರಂಭ. ಜಾರ್ಖಂಡ್ ಒಡಿಶಾ ಗಡಿಯ ಬಿರ್ಮಾತ್ರಾಪುರದಲ್ಲಿ ಧ್ವಜ ಹಸ್ತಾಂತರ, ಜಾರ್ಖಂಡ್ ಮತ್ತು ಒಡಿಶಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನಡುವೆ. ರಾತ್ರಿ ವಾಸ್ತವ್ಯ ಒಡಿಶಾದ ಪಾಂಪೋಶ್ ರಾಮಪಾಲ್ ಚೌಕದಲ್ಲಿ.
ಇಂದು ರಾಹುಲ್ ಗಾಂಧಿಯವರು ಭಗವಾನ್ ಬಿರ್ಸಾ ಮುಂಡ ರಿಗೆ ಶ್ರದ್ಧಾಂಜಲಿ ಅರ್ಪಿಸಿದರು. “ನಾವು ಬಿರ್ಸಾ ಮುಂಡಾ ಅವರ ಆದರ್ಶಗಳ ದಾರಿಯಲ್ಲಿ ನಡೆದು ಆದಿವಾಸಿಗಳ ಜಲ ಜಂಗಲ್ ಜಮೀನಿನ ರಕ್ಷಣೆಯನ್ನು ಸದಾ ಮಾಡುತ್ತೇವೆ” ಎಂದರು.
“ಹಿಂದುಸ್ತಾನದಲ್ಲಿ ಉದ್ಯಮಿಗಳ ಲಕ್ಷ ಕೋಟಿ ಸಾಲ ಮನ್ನಾ ಆಗಬಹುದಾದರೆ ರೈತರ ಸಾಲ ಯಾಕೆ ಮನ್ನಾ ಆಗುವುದಿಲ್ಲ?” ಎಂದು ಅವರು ಪ್ರಶ್ನಿಸಿದರು. ಮೀಸಲಾತಿಯ 50% ಮಿತಿಯನ್ನು ನಾವು ತೆಗೆದು ಹಾಕುತ್ತೇವೆ.
ಜಾರ್ಖಂಡ್ ನ ಜನತೆ ನನಗೆ ಹೇಳಿದ್ದೇನೆಂದರೆ ಅಭಿವೃದ್ಧಿ ಮತ್ತು ರಸ್ತೆಯ ಹೆಸರಿನಲ್ಲಿ ಆದಿವಾಸಿಗಳ ಜಮೀನು ಕಿತ್ತು ಕೊಳ್ಳಲಾಗುತ್ತಿದೆ. ನಾವು ಪೇಸಾ ಕಾನೂನು ಮತ್ತು ಭೂ ಅಧಿಗ್ರಹಣ ಕಾನೂನು ತಂದಿದ್ದೆವು. ಭೂ ಅಧಿಗ್ರಹಣ ಕಾನೂನಿನಲ್ಲಿ ಗ್ರಾಮ ಸಭೆಯ ಅನುಮತಿ ಪಡೆಯದೆ ಜಮೀನು ವಶಪಡಿಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಾರುಕಟ್ಟೆ ಬೆಲೆಯ ನಾಲ್ಕರಷ್ಟು ಹೆಚ್ಚು ಬೆಲೆ ಕೊಡಬೇಕು ಎಂದೂ ಇದೆ. ಐದು ವರ್ಷ ಜಮೀನು ಬಳಕೆ ಮಾಡದಿದ್ದರೆ ವಾಪಸ್ ಮಾಡಬೇಕು ಎಂದೂ ಇದೆ. ಜಾರ್ಖಂಡದ ಹಿಂದಿನ ಸರಕಾರ ಲಕ್ಷಗಟ್ಟಲೆ ಎಕರೆ ಜಮೀನು ವಶಪಡಿಸಿತ್ತು. ಅದನ್ನು ಬಳಸಲೇ ಇಲ್ಲ. ಈಗ ಐದು ವರ್ಷ ಆಯಿತು. ಹಾಗಾಗಿ ಅದು ಆದಿವಾಸಿಗಳಿಗೆ ಮರಳಿ ಸಿಗಬೇಕಾಗಿದೆ. ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಬಹಳ ಮಹತ್ವ ಇದೆ. ಈಗ 50% ಮೀಸಲಾತಿ ಮಿತಿ ಇದೆ. ದೇಶದಲ್ಲಿ 8% ಆದಿವಾಸಿ, 15% ದಲಿತರು, 50% ಒಬಿಸಿ ಜನರಿದ್ದಾರೆ ಅಂದರೆ 73%. ಈ 50% ಮಿತಿ ಯಾಕೆ? ಆದ್ದರಿಂದಲೇ ಜಾತಿ ಗಣತಿ ನಡೆಯಲಿದೆ.
ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಬಡವರಿಗೆ ಅವರ ಹಕ್ಕು ಸಿಗುವುದು ಬಿಜೆಪಿಗೆ ಬೇಕಿಲ್ಲ. ದೇಶದ ಎಲ್ಲ ಹಣ ಆಯ್ದ ಉದ್ಯಮಿಗಳಿಗೆ ಹೋಗಬೇಕು ಎನ್ನುವುದು ಬಿಜೆಪಿಯ ಬಯಕೆ. ಆದರೆ ಎಷ್ಟು ಹಣ ಕೋಟ್ಯಾಧೀಶರಿಗೆ ಹೋಗುತ್ತದೋ ಅಷ್ಟೇ ಕಡಿಮೆ ಉದ್ಯೋಗ ಸೃಷ್ಟಿಯಾಗುತ್ತದೆ. ಯಾಕೆಂದರೆ ಚೀನಾದಿಂದ ಸರಕು ಖರೀದಿಸಿ ಅವರು ಮಾರುತ್ತಾರೆ. ಸಣ್ಣ ಉದ್ದಿಮೆಗಳಿಗೆ ಸಹಾಯ ಮಾಡಿದರೆ ಜಾರ್ಖಂಡದ ಎಲ್ಲರಿಗೂ ಉದ್ಯೋಗ ಸಿಗುತ್ತದೆ” ಎಂದು ಅವರು ಹೇಳಿದರು.
ಮಧ‍್ಯಾಹ್ನ 1.30 ಕ್ಕೆ ಜಾರ್ಖಂಡ್, ಗುಮ್ಲಾ ಜಿಲ್ಲಾ, ಕೋನಬೀರ್ ಬಸಿಯಾ ದ ಒಳಾಂಗಣ ಸ್ಟೇಡಿಯಂ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ದೇಶದ ಈಗಿನ ಬಹುಮುಖ್ಯ ವಿಷಯವೆಂದರೆ ಅನ್ಯಾಯ. ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ, ಪಿ ಎಸ್ ಯು ಗಳು ಬಂದ್ ಆಗುತ್ತಿವೆ, ಬೆಲೆ ಏರಿಕೆ ಹೆಚ್ಚುತ್ತಿದೆ, ಜಾತಿಜನಗಣತಿ ನಡೆಯುತ್ತಿಲ್ಲ, ಮೀಸಲಾತಿ 50% ಮಿತಿಯನ್ನು ಹೊಂದಿದೆ, ರೈತರು ಮತ್ತು ಕಾರ್ಮಿಕರಿಗೆ ಅನ್ಯಾಯ ಆಗುತ್ತಿದೆ, ಈ ಅನ್ಯಾಯಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಪ್ರಧಾನಿಯವರು ತಮ್ಮನ್ನು ತಾವು ಒಬಿಸಿ ಎನ್ನುತ್ತಾರೆ. ಆದರೆ ಗೊಂದಲಕ್ಕೊಳಗಾಗಿ ದೇಶದಲ್ಲಿ ಎರಡೇ ಜಾತಿ ಇರುವುದು ಬಡವರು ಮತ್ತು ಶ್ರೀಮಂತರು ಎಂದೂ ಹೇಳುತ್ತಾರೆ. ಇಲ್ಲಿ ಜಾತಿ ಇದೆಯೋ ಇಲ್ಲವೋ ಎಂಬುದನ್ನು ಮೊದಲು ಅವರು ನಿರ್ಧರಿಸಲಿ. ಮೋದಿಯವರು ಜಾತಿ ಜನಗಣತಿ ನಡೆಸಲಿ, ಹೆದರುವುದು ಬೇಡ. ಇಡೀ ದೇಶದಲ್ಲಿ ಇಡಿ, ಸಿಬಿಐ, ಐಟಿ ಮೊದಲಾದ ಏಜನ್ಸಿಗಳನ್ನು ವಿಪಕ್ಷದ ಮೇಲೆ ಧಾಳಿಗೆ ಕಳುಹಿಸಿದ್ದಾರೆ. ಈ ಏಜನ್ಸಿಗಳ ದುರುಪಯೋಗವಾಗುತ್ತಿದೆ.
ಬಿಜೆಪಿಯು ಜಾರ್ಖಂಡ ಸರಕಾರವನ್ನು ಉರುಳಿಸಲು ಯತ್ನಿಸಿತು. ಆದರೆ ಇದನ್ನು ನಾವು ಆಗಗೊಡಲಿಲ್ಲ. ಆದರೆ ಸತ್ಯ ಏನೆಂದರೆ ಬಿಜೆಪಿಯು ಚುನಾವಣಾ ಅಯೋಗ, ಏಜನ್ಸಿ, ನೌಕರಶಾಹಿ, ಪೊಲೀಸ್ ಎಲ್ಲವನ್ನೂ ದುರುಪಯೋಗಿಸುತ್ತಿದೆ. ಜಾರ್ಖಂಡದ ಹಿಂದಿನ ಮುಖ್ಯಮಂತ್ರಿ ಹೇಮಂತ ಸೊರೇನ್ ರಿಗೆ ಅನ್ಯಾಯ ಮಾಡಲಾಗುತ್ತಿದೆ.
ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ದೇಶದಲ್ಲಿ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿ ಸಾಧಿಸಿದೆವು, ಶಿಕ್ಷಣ, ಟೆಲಿಕಾಂ ಕ್ರಾಂತಿ ಸಾಧಿಸಿದೆವು. ಇದೇ ರೀತಿ ದೇಶದಲ್ಲಿ ಕಾಣುತ್ತಿರುವ ಇನ್ನೊಂದು ಕೊರತೆಯನ್ನು ಸರಿಪಡಿಸ ಬಯಸುತ್ತೇವೆ. ದೇಶದ ಹಿಂದುಳಿದವರು, ದಲಿತರು ಮತ್ತು ಆದಿವಾಸಿಗಳಿಗೆ ಅನ್ಯಾಯ ಆಗುತ್ತಿದೆ. ಜಾತಿಗಣತಿ ಈ ಅನ್ಯಾಯದ ವಿರುದ್ಧ ಮೊದಲ ಹೆಜ್ಜೆ” ಎಂದು ಅವರು ಹೇಳಿದರು.
ಶ್ರೀನಿವಾಸ ಕಾರ್ಕಳ, ಮಂಗಳೂರು