“ದೇಶದಲ್ಲಿ 50 ಕೋಟಿ ಜನ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕಾರ್ಮಿಕರಿಗಾಗಿ ಕಾಂಗ್ರೆಸ್ ಸರಕಾರ ಅನೇಕ ಕಾನೂನುಗಳನ್ನು ಮಾಡಿತ್ತು. ಆದರೆ, ಮೋದಿ ಸರಕಾರ ಆ ಎಲ್ಲ ಕಾನೂನುಗಳನ್ನು ನಾಶ ಮಾಡಿತು. ಕಾರ್ಮಿಕರಿಂದ ದೇಶ ಆಗಿದೆ. ಆದರೆ, ಸುದ್ದಿ ಮಾಧ‍್ಯಮಗಳು ಅವರ ಸಮಸ್ಯೆಗಳನ್ನು ತೋರಿಸುವುದಿಲ್ಲ”-ರಾಹುಲ್ ಗಾಂಧಿ
ಇಂದಿನ (04.02.2024) ಕಾರ್ಯಕ್ರಮಗಳು ಹೀಗಿದ್ದವು:
ಬೆಳಿಗ್ಗೆ 8.00 ಕ್ಕೆ ಜಾರ್ಖಂಡದ ಧನಬಾದ್ ಗೋವಿಂದಪುರ ಮೋರ್ ನಿಂದ ಯಾತ್ರೆ ಶುರು. ಧನಬಾದ್ ಬ್ಯಾಂಕ್ ಮೋರ್ ನ ಬಿರ್ಸಾ ಮುಂಡ ಚೌಕದಲ್ಲಿ ಸಾರ್ವಜನಿಕ ಭಾಷಣ. ಜೋಧಾದಿಹ್ ಮೋರ್ ನಿಂದ ಬೊಕಾರೋ ಸ್ಟೀಲ್ ನಗರ ಚಾಸ್ ನ ರಾಜೇಂದ್ರ ನಗರದವರೆಗೆ ಪಾದಯಾತ್ರೆ. ಬಳಿಕ ಸಾರ್ವಜನಿಕ ಭಾಷಣ.
ಮಧ್ಯಾಹ್ನ 12.00 ಕ್ಕೆ ಮಧ್ಯಾಹ್ನದ ವಿರಾಮ ಬೊಕಾರೋ ಸ್ಟೀಲ್ ಸಿಟಿಯ ಝೈಕಾ ರೆಸ್ಟಾರೆಂಟ್ ನಲ್ಲಿ. 2.00 ಕ್ಕೆ ಬೊಕಾರೋ ಸ್ಟೀಲ್ ಸಿಟಿಯ ಬಿರ್ಸಾ ಮುಂಡಾ ಪ್ರತಿಮೆಯ ಬಳಿ ಜೈನಾ ಮೋರ್ ನಿಂದ ಮತ್ತೆ ಯಾತ್ರೆ ಆರಂಭ. ಸಂಜೆ ವಿರಾಮ ರಾಮಘಡದ ಗೋಲಾ ದಲ್ಲಿ. ಬಳಿಕ ಸಾರ್ವಜನಿಕ ಸಭೆ. ರಾತ್ರಿ ವಾಸ್ತವ್ಯ ರಾಮಘಢದಲ್ಲಿ.
ಶನಿವಾರ ಧನಬಾದ್ ಜಿಲ್ಲೆಯ ತುಂಡಿ ಬ್ಲಾಕ್ ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಯಾತ್ರಿಗಳು ಭಾನುವಾರ ಧನಬಾದ್ ಸಿಟಿಯ ಗೋವಿಂದಪುರದಿಂದ ಯಾತ್ರೆ ಮುಂದುವರಿಸಿದರು.
“ನಾವಿಂದು ಧನಬಾದ್ ನಲ್ಲಿದ್ದೇವೆ, ನಾವು ಬೊಕಾರೋಗೆ ಹೋಗುತ್ತಿದ್ದೇವೆ, ಬೊಕಾರೋ ಒಂದು ಸ್ಟೀಲ್ ಸಿಟಿ” ಎಂದು ಕಾಂಗ್ರೆಸ್ ನಾಯಕ ಜಯರಾಮ ರಮೇಶ್ ಹೇಳಿದರು. “ಇವೆಲ್ಲ ಜವಾಹರಲಾಲ್ ನಿರ್ಮಿಸಿದ ಸ್ಮಾರಕಗಳು. ನೀವು 70 ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಜನರು ಕೇಳಿದಾಗ ಭಿಲಾಯಿ, ರೂರ್ಕೆಲಾ, ದುರ್ಗಾಪುರ, ಭಾಕ್ರಾ ನಂಗಲ್, ಬೊಕಾರೋ, ಧನಬಾದ್, ಬರೂನಿ, ಸಿಂದ್ರಿ ಇವು ಇಂಡಿಯಾದ ಆರ್ಥಿಕ ಅಭಿವೃದ್ಧಿ, ಇವನ್ನು ನಾವು ತೋರಿಸುತ್ತೇವೆ” ಎಂದು ಅವರು ಹೇಳಿದರು.
ಗೋವಿಂದಪುರದಲ್ಲಿ ಆರಂಭವಾದ ಯಾತ್ರೆ ಸರಯಿಧೆಲಾ, ಐಐಟಿ ಐಎಸ್ ಎಮ್ ಗೇಟ್, ರಣದೀರ್ ವರ್ಮಾ ಚೌಕ, ಶ್ರಮಿಕ ಚೌಕ, ಅಲ್ಲಿಂದ ಬ್ಯಾಂಕ್ ಮೋರ್ ತಲಪಲಿದೆ ಎಂದು ಜಾರ್ಖಂಡ ಕಾಂಗ್ರೆಸ್ ಉಪಾಧ್ಯಕ್ಷ ಬೃಜೇಂದ್ರ ಪ್ರಸಾದ್ ಸಿಂಗ್ ಹೇಳಿದರು. ಸಾರ್ವಜನಿಕ ಭಾಷಣದ ಬಳಿಕ ಅಲ್ಲಿಂದ ಅದು ಬೊಕಾರೋ ಸ್ಟೀಲ್ ಸಿಟಿ ತಲಪಲಿದೆ. ಬೊಕಾರೋದಲ್ಲಿ ಭೋಜನ ವಿರಾಮದ ಬಳಿಕ ಜೇನಾ ಮೋರ್ ನಿಂದ ಯಾತ್ರೆ ಮತ್ತೆ ಶುರುವಾಗಲಿದೆ.
ಯಾತ್ರೆ ರಾಜ್ಯದಲ್ಲಿ ಎಂಟು ದಿನಗಳ ಕಾಲ ನಡೆಯಲಿದ್ದು 13 ಜಿಲ್ಲೆಗಳ 804 ಕಿಲೋಮೀಟರ್ ಕ್ರಮಿಸಲಿದೆ ಎಂದೂ ಅವರು ಹೇಳಿದರು.
ಬೊಕಾರೋದಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು “ದೇಶದಲ್ಲಿ 50 ಕೋಟಿ ಜನ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕಾರ್ಮಿಕರಿಗಾಗಿ ಕಾಂಗ್ರೆಸ್ ಸರಕಾರ ಅನೇಕ ಕಾನೂನುಗಳನ್ನು ಮಾಡಿತ್ತು. ಆದರೆ, ಮೋದಿ ಸರಕಾರ ಆ ಎಲ್ಲ ಕಾನೂನುಗಳನ್ನು ನಾಶ ಮಾಡಿತು. ಕಾರ್ಮಿಕರಿಂದ ದೇಶ ಆಗಿದೆ. ಆದರೆ, ಸುದ್ದಿ ಮಾಧ‍್ಯಮಗಳು ಅವರ ಸಮಸ್ಯೆಗಳನ್ನು ತೋರಿಸುವುದಿಲ್ಲ. ದೇಶದಲ್ಲಿ ದ್ವೇಷ ಹರಡುವುದು ಮತ್ತು ಅನ್ಯಾಯ ಮಾಡುವುದು ಬಿಜೆಪಿ ಸರಕಾರ ಮತ್ತು ಆರ್ ಎಸ್ ಎಸ್ ಸಿದ್ಧಾಂತದ ಕೆಲಸ. ಇಂದಿನ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಯಾಕೆಂದರೆ ಸಾರ್ವಜನಿಕ ರಂಗದ ಉದ್ಯಮಗಳನ್ನು ಮೋದಿ ಸರಕಾರ ಮಾರಿಬಿಟ್ಟಿದೆ. ಬೊಕಾರೋದಲ್ಲಿ ಸಾರ್ವಜನಿಕ ರಂಗದ ಉದ್ಯಮಗಳಿವೆ. ಆದರೆ ಅಲ್ಲಿಯೂ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.
ಶ್ರೀನಿವಾಸ ಕಾರ್ಕಳ, ಮಂಗಳೂರು