ಕನಕದಾಸ ಜಯಂತಿ ವಿಶೇಷ
ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರಲ್ಲಿ ಒಬ್ಬರಾದ, ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಹಾಸುಹೊಕ್ಕಿದ ಸಾಮಾಜಿಕ ತಾರತಮ್ಯ ಅಸಮಾನತೆಗಳನ್ನು ತೀಕ್ಷ್ಣವಾಗಿ ಖಂಡಿಸಿದ ದಾಸ ಶ್ರೇಷ್ಠ ಕನಕದಾಸರ ಜನ್ಮದಿನ ಇಂದು( ನವೆಂಬರ್ 18). ಮಹಾ ಮಾನವತಾವಾದಿ ಕನಕದಾಸರನ್ನು ಸ್ಮರಿಸಿ ಬರೆದಿದ್ದಾರೆ ಡಾ. ಗಂಗಾಧರಯ್ಯ ಹಿರೇಮಠ. ಸಮಸ್ತರಿಗೂ ಕನಕ ಜಯಂತಿಯ ಶುಭಾಶಯಗಳು
ಕನ್ನಡ ನಾಡಿನಲ್ಲಿ `ಕನಕದಾಸ’ರು ಭಕ್ತಿಯ ಪ್ರಸಾರ, ಧರ್ಮ ಜಾಗೃತಿಯನ್ನುಂಟು ಮಾಡಿದರು. ಮಠಾಧಿಪತಿಗಳು ಸಂಸ್ಕೃತದಲ್ಲಿ ಮಾಡುತ್ತಿದ್ದ ಧರ್ಮ ಪ್ರಚಾರ ಕಾರ್ಯವನ್ನು ಕನಕದಾಸರು ಕನ್ನಡದಲ್ಲಿಯೇ ಮಾಡಿ ಮಾನವೀಯತೆಯನ್ನೊಳಗೊಂಡ ಧರ್ಮ ಪ್ರಚಾರಕರಾದರು. ಆ ಕಾಲದಲ್ಲಿ ಮಠಾಧಿಪತಿಗಳನ್ನು ವ್ಯಾಸಕೂಟರು ಎಂದು, ಹರಿದಾಸರನ್ನು ದಾಸಕೂಟದವರೆಂದು ಕರೆಯಲಾಯಿತು. ಸಮಾಜವನ್ನು ಕುರಿತಾದ ಕನಕದಾಸರಿಗಿದ್ದ ಕಳಕಳಿ, ಕಾಳಜಿಗಳು, ಅನ್ಯಾಯವನ್ನು, ಅಸಮಾನತೆಯನ್ನು ಎದುರಿಸುವಲ್ಲಿ ಅವರು ಮೆರೆದ ಕ್ರಾಂತಿಕಾರಕ ಮನೋಭಾವ, ‘ಹರಿದಾಸ’ ಸಾಹಿತ್ಯದಲ್ಲಿಯೇ ವಿಶಿಷ್ಟವಾದವುಗಳು. ಅವರ ಸ್ವಾನುಭವದ ಅಭಿವ್ಯಕ್ತಿ, ನೊಂದ ನೋವಿನ ಪ್ರತಿಕ್ರಿಯೆಗಳು ಕನಕರ ಕೀರ್ತನೆಗಳಲ್ಲಿ ಜೀವಂತವಾಗಿ ಮೂಡಿವೆ. ತಮ್ಮ ಕಾವ್ಯಗಳ ಮೂಲಕ ಕವಿಯಾಗಿ, ಕೀರ್ತನೆಗಳ ಮೂಲಕ ಹರಿದಾಸರಾಗಿ ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸಿದವರು ಕನಕದಾಸರು. ಸಮಾಜದ ದೋಷಗಳನ್ನು ಟೀಕಿಸಿ ಅರ್ಥವಿಲ್ಲದ ಆಡಂಬರ, ಡಂಭಾಚಾರ, ಮತೀಯತೆ, ಕಪಟತನಗಳನ್ನು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಖಂಡಿಸಿದ್ದಾರೆ. ಸಮಾಜದಲ್ಲಿಯ ಉಚ್ಛ, ನೀಚ, ಭೇದ-ಭಾವಗಳ ವಿರುದ್ಧ ಕಟು ಠೀಕೆಯನ್ನು ಮಾಡುವುದರೊಂದಿಗೆ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಧಾರ್ಮಿಕ-ಆಧ್ಯಾತ್ಮಿಕ ಬೋಧನೆಯೊಂದಿಗೆ ಕೀರ್ತನೆಗಳ ವಸ್ತುವಾಗಿಸಿ ವಿಶಿಷ್ಟತೆಯನ್ನು ಮೆರೆದ ಮಹಾ ಮಾನವತಾವಾದಿ, ಮನುಕುಲದ ಉದ್ಧಾರಕ ಕನಕದಾಸರು.
ಕನಕದಾಸರ ಜನನ, ಶಿಕ್ಷಣ
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪುರಕ್ಕೆ ಹತ್ತಿರವಿರುವ `ಬಾಡ’ ಗ್ರಾಮವು ಕನಕದಾಸರ ಜನ್ಮಸ್ಥಳ. ಶ್ರೀ ಬೀರಪ್ಪ ಮತ್ತು ಬಚ್ಚಮ್ಮ ಎಂಬ ದಂಪತಿಗಳಿಗೆ ಏಕೈಕ ಪುತ್ರನಾಗಿ `ಕನಕದಾಸರು’ ಕ್ರಿ.ಶ. 1495 ರಲ್ಲಿ ಜನಿಸಿದರು. `ಬಾಡ’ ಗ್ರಾಮ ಮತ್ತು ಐತಿಹಾಸಿಕವಾಗಿ ಪ್ರಸಿದ್ಧವಾದ ಬಂಕಾಪುರ ಭಾಗದ `78′ ಗ್ರಾಮಗಳ ನಾಡಗೌಡಿಕೆ ಮತ್ತು ಡಣ್ಣಾಯಕತನ ಬೀರಪ್ಪನಿಗೆ ಇತ್ತು. ಒಂದು ರೀತಿಯ ಚಿಕ್ಕ ಪಾಳೆಯಗಾರನಾದ ಬೀರಪ್ಪನು ವಿಜಯನಗರ ಸಾಮ್ರಾಜ್ಯದ ಅರಸರಿಗೆ ಆತ್ಮೀಯನಾಗಿ, ಗೌರವದ ಸ್ಥಾನ-ಮಾನಗಳಿಗೆ ಪಾತ್ರನಾಗಿದ್ದನು.
ಅರ್ಧ ವಯಸ್ಸು ಕಳೆದರೂ ಬೀರಪ್ಪನಿಗೆ ಮಕ್ಕಳಾಗಲಿಲ್ಲ ವಿಜಯನಗರ ಅರಸರು ಶ್ರೀ ವೈಷ್ಣವ ಮತವನ್ನು ಸ್ವೀಕರಿಸಿದರು. ಇದರ ಪ್ರಭಾವ ಬೀರಪ್ಪನಿಗೆ ಆಯಿತು. ಶ್ರೀ ವೈಷ್ಣವಕ್ಷೇತ್ರಗಳಲ್ಲೆಲ್ಲಾ ಪ್ರಾಮುಖ್ಯತೆ ಹೊಂದಿದ್ದ ‘ತಿರುಪತಿ ತಿಮ್ಮಪ್ಪನ’ ಮಹಿಮೆ ಇವರನ್ನು ಆಕರ್ಷಿಸಿತು. ಇವರ ಭಕ್ತಿಗೋ ಎಂಬಂತೆ ಗಂಡು ಮಗು ಜನಿಸಿದಾಗ `ತಿಮ್ಮಪ್ಪ’ನೆಂದು ನಾಮಕರಣ ಮಾಡಿದರು.
ಮಗ ತಿಮ್ಮಪ್ಪನನ್ನು ಪ್ರೀತಿಯಿಂದ ಬೆಳೆಸಿದರು. ಮಗನು ತಂದೆಯಂತೆಯೇ ಡಣ್ಣಾಯಕನಾಗ ಬೇಕೆಂದು ದಂಪತಿಗಳ ಹೆಬ್ಬಯಕೆಯಾಗಿತ್ತು. ಹೀಗಾಗಿ ಮಗನಿಗೆ ಡಣ್ಣಾಯಕತನಕ್ಕೆ ಬೇಕಾದ ಕುಸ್ತಿ, ಕತ್ತಿವರಸೆ, ಧನುರ್ವಿದ್ಯೆ, ಅಶ್ವವಿದ್ಯೆ, ಬೇಟೆ ಇತ್ಯಾದಿ ಶಕ್ತಿ ಸಾಧಕ, ಕಾರ್ಯಸಾಧಕ ಮತ್ತು ಯುದ್ಧ ವಿದ್ಯೆಗಳನ್ನು ಕಲಿಯಲು ಅನುವು ಮಾಡಿಕೊಟ್ಟರು. ಇದರ ಜೊತೆಗೆ ಓದು-ಬರಹ, ಮತ-ಧರ್ಮ, ಸಾಹಿತ್ಯ – ಸಂಗೀತ, ಶಾಸ್ತ್ರ-ಪುರಾಣ ಇತ್ಯಾದಿಗಳ ಅಭ್ಯಾಸಕ್ಕೂ ವ್ಯವಸ್ಥಿತ ಏರ್ಪಾಡು ಬೀರಪ್ಪನವರು ಮಾಡಿದ್ದರು. ತಿಮ್ಮಪ್ಪ ವಿದ್ಯಾರ್ಥಿಯಾಗಿದ್ದಾಗ ರಾಮಾಯಣ, ಮಹಾಭಾರತ, ಭಾಗವತ, ಪುರಾಣಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡುವುದರ ಜೊತೆಗೆ ವ್ಯಾಕರಣ, ಛಂದಸ್ಸು, ಕೋಶ, ಅಲಂಕಾರಶಾಸ್ತ್ರ ಮೊದಲಾದವುಗಳ ಕುರಿತು ಅನುಭವ ಪಡೆದರು.
98 ವರ್ಷಗಳ ಕಾಲ ಬದುಕಿ ಕಾಗಿನೆಲೆಯ ಆದಿಕೇಶವ ದೇವಸ್ಥಾನದಲ್ಲಿ ಕ್ರಿ.ಶ. 1593 ರಲ್ಲಿ ಅವರು ಕೊನೆಯಸಿರೆಳೆದರೆಂದು ತಿಳಿದುಬರುತ್ತದೆ.
ಕನಕನಿಗೆ ಕೌಟಂಬಿಕ ಸಂಕಷ್ಟಗಳು
ಕನಕದಾಸರ ಮೋಹನ ತರಂಗಿಣಿ ಕಾವ್ಯವು ಕನಕದಾಸರ ದಾಂಪತ್ಯ ಜೀವನಕ್ಕೆ ಸಾಕ್ಷಿ ನುಡಿಯುತ್ತದೆ. ಕನಕದಾಸರಿಗೆ ಮಡದಿ-ಮಕ್ಕಳು ಇದ್ದರು ಎಂಬುದಕ್ಕೆ ಸಾಕಷ್ಟು ಆಧಾರಗಳು ಲಭ್ಯವಾಗಿವೆ. `ಸುಜ್ಞಾನವಧೂಟಿ’ ಎಂಬ ಮಹಿಳೆಯನ್ನು ಕನಕದಾಸರು ವಿವಾಹವಾದರು ಇವಳ ತಂದೆ ರಂಗಪ್ಪನ ಊರು ಪುತ್ತೂರು. ನಾಮಕರಣ ಮಾಡುವಾಗ ಆಚಾರ್ಯರು `ಶ್ರೀವಧೂ’ ಎಂದು ಕರೆದರು. ಜನರ ವಾಡಿಕೆಯಲ್ಲಿ `ವಧೂಟಿ’ ಆಯಿತು. ತಿಮ್ಮಪ್ಪನು 17ನೆಯ ವಯಸ್ಸಿನಲ್ಲಿದ್ದಾಗ ತಂದೆ ಬೀರಪ್ಪ ಮರಣವನ್ನಪ್ಪಿದ. ತಾಯಿಯ ಮಾರ್ಗದರ್ಶನದಿಂದ ಈತ ಡಣ್ಣಾಯಕತನದ ಹೊಣೆ ಹೊತ್ತುಕೊಂಡು, ಪಾಳೇಗಾರತನದ ಕಾರ್ಯ ಮುಂದುವರಿಸಿ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಹೆಸರುವಾಸಿಯಾದ. ಕನಕದಾಸರು ಸುಜ್ಞಾನ ವಧೂಟಿಯ ಜೊತೆಗೆ ಸುಖದಿಂದ ದಾಂಪತ್ಯ ಜೀವನ ನಡೆಸುವಾಗ ಅವರ ಮಮತೆಯ ತಾಯಿ ಬಚ್ಚಮ್ಮ ತೀರಿಕೊಂಡರು. ಕೆಲವೇ ವರ್ಷಗಳಲ್ಲಿ ಕನಕದಾಸರಿಗೆ ಜನಿಸಿದ ಗಂಡು ಮಗುವು ಸಹ ಅಕಾಲಿಕ ಮರಣಕ್ಕೆ ತುತ್ತಾಯಿತು. ಏಳೆಂಟು ವರ್ಷಗಳಲ್ಲಿ ಕನಕದಾಸರ ಅರ್ಧಾಂಗಿನಿ (ಪತ್ನಿ) ಸುಜ್ಞಾನ ವಧೂಟಿಯೂ ಸಹ ತೀರಿಕೊಂಡಳು.
ಕನಕ-ಕನಕದಾಸನಾದದ್ದು ಹೇಗೆ?
ತಿಮ್ಮಪ್ಪನು ಭೂಮಿಯನ್ನು ಅಗೆಯುತ್ತಿದ್ದಾಗ ಹೊನ್ನಿನ ನಿಕ್ಷೇಪ ದೊರೆಯಿತು. ದೊರೆತ ಚಿನ್ನವನ್ನು ಬಡಬಗ್ಗರಿಗೆ ನೀಡಿ ಅನುಕೂಲ ಕಲ್ಪಿಸಲು, ಗುಡಿ-ಗುಂಡಾರಗಳ ರಚನೆಗೆ ವಿನಿಯೋಗಿಸಿದ. ಕಾಗಿನೆಲೆಯಲ್ಲಿ ಶ್ರೀ ಆದಿಕೇಶವನ ದೇವಾಲಯವನ್ನು ನಿರ್ಮಿಸಿದ. ಅಪಾರ ಕನಕರಾಶಿ ತಿಮ್ಮಪ್ಪನಿಗೆ ಪ್ರಾಪ್ತಿಯಾಗಿದ್ದರಿಂದ ಜನರು ಈತನನ್ನು ಕನಕ, ಕನಕಪ್ಪ, ಕನಕನಾಯಕ ಎಂದು ಕರೆಯಲಾರಂಭಿಸಿದರು.
ಕನಕದಾಸರು ತಂದೆ, ತಾಯಿ, ಮಡದಿ ಹಾಗೂ ಮಗುವನ್ನು ಕಳೆದುಕೊಂಡು ತೀರಾ ಮಾನಸಿಕ ಅಘಾತಕ್ಕೆ ಒಳಗಾದರು. ಮತಧರ್ಮ, ತತ್ವಜ್ಞಾನಗಳ ಅಭ್ಯಾಸದಿಂದ ಅವರ ಮನಸ್ಸಿಗೆ ತುಸು ಶಾಂತಿ ದೊರೆಯಿತು. ಅಂದಿನ ಕಾಲದಲ್ಲಿಯೆ ‘ಹರಿದಾಸರ ಬಗೆಗೆ’ ಅದರಲ್ಲಿಯೂ `ರಾಮಾನುಜ ಮತದ ಬಗೆಗೆ ‘ಕನಕ’ ಆಕರ್ಷಿತನಾದನು. ತಾನು ಅವರೆಡೆಗೆ ಹೋಗಿ ಭಕ್ತನಾಗಬೇಕು, ವಿರಕ್ತನಾಗಬೇಕೆಂದು ಅವರ ಮನಸ್ಸು ತುಡಿಯಲಾರಂಭಿಸಿತು. ಶ್ರೀ ಹರಿಯು ಕನಕರಿಗೆ ಸ್ವಪ್ನದಲ್ಲಿ ದರ್ಶನವಿತ್ತು. ನನ್ನ ದಾಸನಾಗು ಎಂದು ಹೇಳಿದಂತಾಯಿತು. ಧನ, ಅಧಿಕಾರ ಬಲವನ್ನು ಬಿಟ್ಟು ದರಿದ್ರನಾಗಿ, ದಾಸನಾಗಿ ಬಾಳುವ ಮನಸ್ಸು ಕನಕರಿಗೆ ಒಪ್ಪಲಿಲ್ಲ. ತದನಂತರ ಕನಕ ಆದಿಕೇಶವನಾದ ಶ್ರೀ ಹರಿಯ ಪರಮಭಕ್ತನಾಗಿ, ವ್ಯಾಸರಾಯರ ಶಿಷ್ಯನಾಗಿ ಎಲ್ಲವನ್ನು ತ್ಯಾಗ ಮಾಡಿ ಕನಕದಾಸನಾದನು.
ಕನಕದಾಸರ ಜಾತ್ಯತೀತತೆ
ಕನಕದಾಸರು ಮಾಧ್ವ-ರಾಮಾನುಜ ಇವುಗಳ ಮತಸಾರವನ್ನು ಒಪ್ಪಿಯೂ ಯಾವುದೊಂದರ ನಿರ್ದಿಷ್ಟ ಪ್ರಚಾರವನ್ನು ಮಾಡುವ ಗೊಡೆವೆಗೆ ಹೋಗಿಲ್ಲ. ಶಿವ, ಹನುಮ, ಕೃಷ್ಣ, ಶಾರದೆ, ಬೀರಯ್ಯಗಳಿಗೆ ಮಹತ್ವನೀಡಿ ಮತದ ಪಡಿಯಚ್ಚಿನಲ್ಲಿ ಮಾತ್ರ ಬೆಳೆಯದೆ ಎಲ್ಲ ಮತದ ಸಾರಗ್ರಹಿಯಾದ ಪರಮಭಕ್ತ ನಾಗಿದ್ದವನು ಶ್ರೀ ಕನಕದಾಸರು. ಕನಕದಾಸರು ಅನೇಕ ಪರೀಕ್ಷೆಗಳಿಗೆ ಒಳಗಾಗಿ, ಜಾತಿನಿಂದನೆಗೆ ಒಳಗಾಗಿ, ಅನೇಕ ನೋವು-ನಲಿವುಗಳನ್ನು ಅನುಭವಿಸಿ ಕೊನೆಗೆ ವ್ಯಾಸಮುನಿಯ ಮಠದಲ್ಲಿ ಪರಮ ಭಕ್ತನ ಸ್ಥಾನ ಪ್ರಾಪ್ತಿಯಾಗಿದ್ದು ಕನಕರ ಜ್ಞಾನ, ಪಾಂಡಿತ್ಯ ಮತ್ತು ಶ್ರೇಷ್ಠತ್ವವನ್ನು ಇದು ಎತ್ತಿಹಿಡಿಯುತ್ತದೆ.
ಕನಕರ ಸಾಹಿತ್ಯ, ಭಾಷೆ
ಇಲ್ಲಿಯ ತನಕ ಕನಕದಾಸರನ್ನು ಕುರಿತಾಗಿ ರಚನೆಗೊಂಡ ಸಾಹಿತ್ಯದಲ್ಲಿ ಅವರನ್ನು ಒಬ್ಬ ಶ್ರೇಷ್ಠ ಕೀರ್ತನಕಾರ ಎಂದು ತಿಳಿಸಲಾಗಿದೆ. ‘ಕೀರ್ತನೆ’ ಎಂಬುದರ ಪದಶಃ ಅರ್ಥ ವರ್ಣಿಸುವಿಕೆ, ಹಾಡಿ ಹೊಗಳುವಿಕೆ ಎಂದಾಗುತ್ತದೆ. ಆದರೆ ‘ಕನಕದಾಸರ ಕೀರ್ತನೆಗಳು’, ಹೊಗಳುವಿಕೆಗೆ ಸೀಮಿತವಾಗಿರದೆ ಸಮಾಜದ ಅಂಕು-ಡೊಂಕನ್ನು ತಿದ್ದುವಲ್ಲಿ ಕಂದಾಚಾರ, ಮತೀಯತೆ, ದೇವದಾಸಿ ಪದ್ಧತಿ, ವೇಶ್ಯಾವೃತ್ತಿ, ಕಪಟತನ, ಡಂಬಾಚಾರ ಹಾಗೂ ಉಚ್ಚ-ನೀಚ ಭೇದ ಭಾವಗಳ ವಿರುದ್ಧ ಕಟು ಠೀಕೆಯನ್ನು ಮಾಡುವುದರೊಂದಿಗೆ ಸಾಮಾಜಿಕ ಸಮಸ್ಯೆಗಳನ್ನು ಧಾರ್ಮಿಕ, ಆಧ್ಯಾತ್ಮಿಕ ಬೋಧನೆಯೊಂದಿಗೆ ಕೀರ್ತನೆಗಳ ವಸ್ತುವಾಗಿಸಿ ವಿಶಿಷ್ಟತೆಯನ್ನು ಮೆರೆದ ಮಹಾಮಾನವತಾವಾದಿ, ಮನುಕುಲದ ಉದ್ಧಾರಕ ಶ್ರೀ ಕನಕದಾಸರು.
ಕನಕದಾಸರು ಕೃತಿಗಳಲ್ಲಿ ನಿಜವಾದ ವಿಶೇಷತೆಯಿರುವುದನ್ನು ಗಮನಿಸಬಹುದು. ತಮ್ಮ ಕಾವ್ಯದಲ್ಲಿ ಪೌರಾಣಿಕ ವಸ್ತುವನ್ನು ಆಯ್ದುಕೊಂಡು ಅಂದಿನ ಸಾಮಾಜಿಕ ಜೀವನದ ಸುಂದರ ಚಿತ್ರಣವನ್ನು ನೀಡಿದ್ದಾರೆ. ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಸಾರ, ಮೋಹನತರಂಗಿಣಿ ಇವುಗಳಲ್ಲಿ ಕನಕದಾಸರ ಜಾಣ್ಮೆಯಿದೆ, ಸಾಮಾಜಿಕ ಪ್ರಜ್ಞೆ, ವೈಚಾರಿಕ ನೆಲೆಗಟ್ಟಿನಲ್ಲಿ ಪ್ರತಿಬಿಂಬತವಾಗಿದೆ. ಹಾಸ್ಯ ಪ್ರಜ್ಞೆ, ನೋವಾಗದಂತೆ ಭರಿಸುವ ವಿಡಂಬನಾ ಚಾತುರ್ಯ ಇವುಗಳಲ್ಲಿ ಕಾಣಬಹುದು. ಹರಿದಾಸರಲ್ಲಿಯೇ ಕನಕದಾಸರ ಭಾಷೆ ವಿಶಿಷ್ಟವಾದುದು. ಪುರಂದರದಾಸರಿಗಿಂತ ಹೆಚ್ಚು ಗ್ರಾಮ್ಯವಾಗಿಯೂ, ಸತ್ವ ಪೂರ್ಣವಾಗಿಯೂ ಇರುವುದನ್ನು ಕಾಣುತ್ತೇವೆ. ಅಲ್ಲದೆ ಕನಕದಾಸರಲ್ಲಿಯ ಕನ್ನಡ ಜಾನಪದ ಸೊಗಡು ಇತರ ಎಲ್ಲ ದಾಸರಿಗಿಂತ ಭಿನ್ನವಾಗಿದೆ. ಕನಕದಾಸರ ಭಾಷೆ ಜಾನಪದದ ಗತ್ತನ್ನುಳ್ಳ ಪ್ರತಿನಿತ್ಯದ ಆಡುಮಾತೇ ಆಗಿದೆ.
ಕನಕರನ್ನು ಕುರಿತು ಸಂಶೋಧನೆ ಅಗತ್ಯ
ಕನಕದಾಸರ ಚರಿತ್ರೆಯನ್ನು ರೂಪಿಸುವಾಗ ಐತಿಹ್ಯಗಳಲ್ಲಿ ಭಿನ್ನಾಭಿಪ್ರಾಯಗಳು ಕಂಡುಬಂದಾಗ ಸಿಕ್ಕ ಆಧಾರಗಳ ಸಹಾಯವನ್ನು ಪಡೆದು, ಕ್ಷೇತ್ರ ಕಾರ್ಯದ ಅನುಭವದಿಂದ ತಕ್ಕಮಟ್ಟಿನ ನಿರ್ಣಯವನ್ನು ಕೈಗೊಳ್ಳುವ ಅವಶ್ಯಕತೆಯಿದೆ. ದಾಸ ಸಾಹಿತ್ಯದಲ್ಲಿ ಅಲಕ್ಷ್ಯಕ್ಕೀಡಾದ ದಾಸ ಕವಿಯನ್ನು ಸಾಹಿತ್ಯ ಲೋಕದಲ್ಲಿ ಬೆಳಕಿಗೆ ತರುವ ಸಂಶೋಧನೆಯ ಅವಶ್ಯಕತೆ ಇದೆ. ಬಹು ಎತ್ತರಕ್ಕೆ ಕನಕದಾಸರು ಹೋದರೂ ಅವರನ್ನು ಹಾಗೂ ಅವರ ಸಾಹಿತ್ಯವನ್ನು ಅಪಚಾರ ಮಾಡುವ ವ್ಯವಸ್ಥಿತ ಪ್ರಯತ್ನಗಳು ನಡೆದಿರುವುದು ವಿಷಾದದ ಸಂಗತಿ. ಈ ಹಿನ್ನೆಲೆಯಲ್ಲಿ ಸಮರ್ಥ ಸಂಶೋಧನೆಯ ಮೂಲಕ ಕನಕದಾಸರನ್ನು, ಅವರ ಸಾಹಿತ್ಯವನ್ನು ಟೀಕಿಸುವವರಿಗೆ ಉತ್ತರ ದೊರಕಿಸಬೇಕು ಎಂಬುದು ನನ್ನ ಆಶಯವಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು
ಇದನ್ನೂ ಓದಿ- http://ಕನಕದಾಸರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ https://kannadaplanet.com/cm-siddaramaiah-garland-kanakadasa-statue/