ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಸೀಗೆಬಾಗಿ ಬಾಬಳ್ಳಿ ಎಂಬಲ್ಲಿ ಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ತೆರಳಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಯೊಬ್ಬರನ್ನು ಸ್ಥಳೀಯ ಶಾಸಕರ ಪುತ್ರ ಎಂದು ಹೇಳಿಕೊಂಡ ವ್ಯಕ್ತಿ, ಮೊಬೈಲ್‌ನಲ್ಲಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಭದ್ರಾವತಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೀಗೆಬಾಗಿ– ಬಾಬಳ್ಳಿ ಹತ್ತಿರದಲ್ಲಿ ಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಟ್ರ್ಯಾಕ್ಟರ್‌ನಲ್ಲಿ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭದ್ರಾವತಿ ವಿಭಾಗದ ಭೂವಿಜ್ಞಾನಿ ಕೆ.ಕೆ.ಜ್ಯೋತಿ ಹಾಗೂ ಶಿವಮೊಗ್ಗ ವಿಭಾಗದ ಭೂ ವಿಜ್ಞಾನಿ ಪ್ರೀತಿ ದೊಡ್ಡಗೌಡರ್ ಅವರು ಮೂವರು ಸಿಬ್ಬಂದಿಯೊಂದಿಗೆ ರಾತ್ರಿ ಸ್ಥಳಕ್ಕೆ ತೆರಳಿದ್ದಾರೆ.
ಈ ವೇಳೆ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಕಾರ್ಮಿಕನೊಬ್ಬ ಜ್ಯೋತಿ ಅವರ ಬಳಿ ಬಂದು ಮೊಬೈಲ್ ಕೊಟ್ಟು ಅಣ್ಣಾ ಮಾತಾಡುತ್ತರೆ ಎಂದು ಹೇಳುತ್ತಾನೆ. ಫೋನ್ ಸ್ವೀಕರಿಸಲು ನಿರಾಕರಿಸುವ ಅಧಿಕಾರಿ, ಅವರಿಗೆ ನನ್ನ ಫೋನ್‌ಗೆ ಕರೆ ಮಾಡಲು ಹೇಳಿ ಎಂದು ತಿಳಿಸುತ್ತಾರೆ. ಅಧಿಕಾರಿಯ ಫೋನ್‌ಗೆ ಕರೆ ಮಾಡಬೇಕಂತೆ ಅಣ್ಣಾ ಎಂದು ಆ ಕಾರ್ಮಿಕ ಹೇಳುತ್ತಾನೆ. ಹೌದಾ ? ಎನ್ನುವ ಆ ವ್ಯಕ್ತಿ, ಲೌಡ್ ಸ್ಪೀಕರ್ ಆನ್ ಮಾಡು ಎಂದು ಹೇಳುತ್ತಾನೆ. ಲೌಡದ ಸ್ಪೀಕರ್ ಆನ್ ಮಾಡುತ್ತಿದ್ದಂತೆ ಅತ್ಯಂತ ಅವಾಚ್ಯವಾಗಿ ಮಹಿಳಾ ಅಧಿಕಾರಿಗೆ ನಿಂದಿಸುತ್ತಾನೆ. ನೆಟ್ಟಗೆ ಮಾತನಾಡಿ, ಯಾರಿಗೆ ಮಾತಾಡುತ್ತೀರಿ. ಒಬ್ಬ ಅಧಿಕಾರಿಗೆ ಮಾತಾಡುತ್ತಿದ್ದೀರಿ. ಬೆಲೆ ಕೊಟ್ಟು ಮಾತನಾಡಿ ಎಂದು ಮಹಿಳಾ ಅಧಿಕಾರಿ ಹೇಳಿದರೂ ಆ ವ್ಯಕ್ತಿ ಹೀನಾಯವಾಗಿ ನಿಂದಿಸುವುದನ್ನು ಮುಂದುವರಿಸುತ್ತಾನೆ.
ಐದು ನಿಮಿಷ ಅಣ್ಣಾ, ಸ್ಥಳಕ್ಕೆ ಡಿವೈಎಸ್‌ಪಿ ಬರುತ್ತಾರೆ. ನೀನೇ ಇಲ್ಲಿಗೆ ಬಂದು ಬಿಡು ಎಂದು ಫೋನ್ ಹಿಡಿದ ವ್ಯಕ್ತಿ ಹೇಳಿದಾಗ, ಆಯ್ತು ಬರುವೆ ಎನ್ನುತ್ತಾ ಆ ವ್ಯಕ್ತಿ ಕರೆ ಕಡಿತಗೊಳಿಸುವುದು ವಿಡಿಯೊದಲ್ಲಿ ದಾಖಲಾಗಿದೆ.ಕರೆ ಮಾಡಿದ ವ್ಯಕ್ತಿ ಯಾರು ಎನ್ನುವುದನ್ನು ಭೂ ವಿಜ್ಞಾನಿ ಜ್ಯೋತಿ ಅವರು ಸ್ಪಷ್ಟಪಡಿಸಿಲ್ಲ. ಫೋನ್ ಮೂಲಕ ಕರೆ ಮಾಡಿ ನಿಂದಿಸಿದವರು ಯಾರು ಎಂದು ತಿಳಿದಿಲ್ಲ. ಆ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ಕೊಟ್ಟಿದ್ದೇವೆ ಎಂದು ಇನ್ನೊಬ್ಬ ಅಧಿಕಾರಿ ಪ್ರೀತಿ ದೊಡ್ಡಗೌಡರ್ ತಿಳಿಸಿದ್ದಾರೆ.
ಘಟನೆಯ ವೇಳೆ ರಕ್ಷಣೆಗೆ ಮಹಿಳಾ ಅಧಿಕಾರಿಗಳು ಸಂಪರ್ಕಿಸಿದರೂ ಸ್ಥಳೀಯ ಪೊಲೀಸರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. 112ಕ್ಕೆ ಕರೆ ಮಾಡಿದರೂ ಅದು ಸಂಪರ್ಕಕ್ಕೆ ಸಿಗಲಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಇನ್ನು ಜ್ಯೋತಿ ಅವರು ಒಂದು ದಿನ ತಡವಾಗಿ ದೂರು ದಾಖಲಿಸಿದ್ದಾರೆ. ಮೊಬೈಲ್ ನಲ್ಲಿ ಕರೆ ಮಾಡಿದ ವ್ಯಕ್ತಿ ಯಾರು ಎಂದು ತಿಳಿದು ಬಂದಿಲ್ಲ. 7-8 ಮಂದಿ ನಮ್ಮ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಿದ ಕಾರ್ಮಿಕರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.