ಚಂಡೀಗಢ: ಹಿರಿಯ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೇವಾಲ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಕೊನೆಗೊಳಿಸಿಲ್ಲ ಎಂದು ದಲ್ಲೇವಾಲ್ ಆಪ್ತ ಅಭಿಮನ್ಯು ಕೋಹರ್ ತಿಳಿಸಿದ್ದಾರೆ. ದಲ್ಲೇವಾಲ್ ಅವರು ನೀರು ಕುಡಿಯುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಗೆ ಪಂಜಾಬ್ ಸರ್ಕಾರ ತಿಳಿಸಿತ್ತು.
ಕಳೆದ ವಾರ ದಲ್ಲೇವಾಲ್ ಸೇರಿದಂತೆ ರೈತ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದರು. ಈ ಸಂದರ್ಭದಲ್ಲಿ ದಲ್ಲೇವಾಲ್ ಅವರು ಒಂದು ಲೋಟ ನೀರು ಕುಡಿದಿದ್ದರು. ರೈತ ಮುಖಂಡರ ಬಿಡುಗಡೆಯ ನಂತರ ದಲ್ಲೇವಾಲ್ ಅವರು ಒಂದು ಲೋಟ ನೀರು ಕುಡಿದಿದ್ದನ್ನೇ ಮುಂದಿಟ್ಟುಕೊಂಡು ಅವರು ಅನಿರ್ದಿಷ್ಟಾವಧಿ ಉಪವಾಸ ಕೊನೆಗೊಳಿಸಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ. ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಲಿದ್ದಾರೆ ಎಂದು ಕೋಹರ್ ಹೇಳಿದ್ದಾರೆ.
ರೈತ ನಾಯಕರ ಬಂಧನದ ವಿಷಯ ತಿಳಿದ ದಲ್ಲೇವಾಲ್ ಅವರು ರೈತರನ್ನು ಬಿಡುಗಡೆಗೊಳಿಸುವವರೆಗೂ ನೀರು ಕುಡಿಯಲು ನಿರಾಕರಿಸಿದ್ದರು. ರೈತರ ಬಿಡುಗಡೆ ನಂತರ ನೀರು ಕುಡಿದಿದ್ದರು ಎಂದು ಮತ್ತೊಬ್ಬ ರೈತ ನಾಯಕ ಕಾಕಾ ಸಿಂಗ್ ಕೊಟ್ರಾ ಹೇಳಿದ್ದಾರೆ.
70 ವರ್ಷದ ದಲ್ಲೇವಾಲ್ ಅವರು ಸಂಯುಕ್ತ ಕಿಸಾನ್
ರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಜಂಟಿ ವೇದಿಕೆಯ ಹಿರಿಯ ನಾಯಕರಾಗಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕಳೆದ ವರ್ಷ ನವೆಂಬರ್ 26ರಿಂದ ದಲ್ಲೇವಾಲ್ ಅವರು ಅನಿರ್ದಿಷ್ಟಾವಧಿ ಉಪವಾಸ ಪ್ರಾರಂಭಿಸಿದ್ದಾರೆ. ಮಾರ್ಚ್ 19ರಂದು ಪ್ರತಿಭಟನಾ ರೈತರು ಮೊಕ್ಕಾಂ ಹೂಡಿದ್ದ ಖನೌರಿ ಮತ್ತು ಶಂಭು ಗಡಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರು. ಈ ವೇಳೆ ಹಲವು ರೈತ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದರು.