ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಸರಿನಲ್ಲಿ ಯುವಜನಾಂಗ ಬೆಟ್ಟಿಂಗ್ ಹಾಗೂ ಜೂಜಾಡುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಸುಪ್ರಿಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಬೆಟ್ಟಿಂಗ್ ಆಪ್ ಗಳ ಮೇಲೆ ನಿಯಂತ್ರಣ ತರಬೇಕು ಎಂದು ಕೆ.ಎ.ಪೌಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೋಟೇಶ್ವರಸಿಂಗ್ ಹಾಗೂ ಸೂರ್ಯಕಾಂತ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು, ನಟರು, ಕ್ರಿಕೆಟಿಗರು ಈ ರೀತಿಯ ಆನ್‌ಲೈನ್ ಅಪ್ಲಿಕೇಶನ್ ಗಳನ್ನು ಬಳಸುವಂತೆ ಜಾಹಿರಾತು ನೀಡುತ್ತಿರುವುದರಿಂದ ಮಕ್ಕಳ ಆದಿಯಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ. ಸಿಗರೇಟ್ ಪ್ಯಾಕ್ ನ ಮೇಲೆ ಧೂಮಪಾನ ಹಾನಿಕಾರಕ ಎಂಬ ಎಚ್ಚರಿಕೆಯ ಬರಹವಾದರೂ ಇರುತ್ತದೆ. ಆದರೆ, ಬೆಟ್ಟಿಂಗ್ ಅಪ್ಲಿಕೇಶನ್ ಗಳಲ್ಲಿ ಯಾವುದೇ ಸೂಚನೆ ಇರುವುದಿಲ್ಲ. ಅಷ್ಟೇ ಅಲ್ಲದೇ, ಮಾಜಿ ಕ್ರಿಕೆಟಿಗರೂ ಈ ಆಪ್ ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಪಿಐಎಲ್ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಬೆಟ್ಟಿಂಗ್ ಅಪ್ಲಿಕೇಶನ್ ಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ತೆಲಂಗಾಣವೊಂದರಲ್ಲೇ 1,023 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25ಕ್ಕೂ ಅಧಿಕ ಬಾಲಿವುಡ್ ಹಾಗೂ ಟಾಲಿವುಡ್ ನಟರು ಬೆಟ್ಟಿಂಗ್ ಅಪ್ಲಿಕೇಶನ್ ಗಳ ಪ್ರಚಾರ ಮಾಡುವ ಮೂಲಕ ಅಮಾಯಕರ ಸಾವಿಗೆ ಕಾರಣವಾಗಿದ್ದಾರೆ ಎಂದು ಕೆ.ಎ.ಪೌಲ್ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಾವು ನಮ್ಮ ಮಕ್ಕಳಿಗೆ ಇ,ಟರ್ ನೆಟ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದೇವೆ. ಶಾಲಾ ಕಾಲೇಜುಗಳಲ್ಲೂ ಇಂಟರ್ ನೆಟ್ ಸರ್ವೇಸಾಮಾನ್ಯವಾಗಿದೆ. ಅದರ ಮೇಲೆ ಸಂಪೂರ್ಣ ನಿಗಾವಹಿಸಲು ಹಾಗೂ ಕಾನೂನಿನ ಮೂಲಕ ವೈಯಕ್ತಿಕವಾಗಿ ಬೆಟ್ಟಿಂಗ್ ನಿಲ್ಲಿಸಲು ಸಾಧ್ಯವಿಲ್ಲ. ಇದು ಸಮಾಜದ ನೈತಿಕ ಪತನವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಆನ್ ಲೈನ್ ಬೆಟ್ಟಿಂಗ್ ಹಾಗೂ ಜೂಜಾಡುವ ಅಪ್ಲಿಕೇಶನ್ ಗಳ ವ್ಯಸನದಿಂದ ಮಕ್ಕಳು ಮೃತಪಟ್ಟಿದ್ದು, ಇವುಗಳ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯ ಪೀಠ ಆದೇಶ ನೀಡಿದೆ.