ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ ‘ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ’ವನ್ನು ಆಚರಣೆ ಮಾಡುತ್ತಿದ್ದು, ಈ ಬಾರಿ ಕುಂದಾಪುರ ಕನ್ನಡ ದಿನಾಚರಣೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ವಿಜೃಂಭಣೆಯಿಂದ ನೆರವೇರಲಿದೆ.
ಬೆಂಗಳೂರಿನ ಸುದೀಕ್ಷಾ ಕನ್ವೆನ್ಷನ್ ಹಾಲ್‌ನಲ್ಲಿ ಜು. 7ರಂದು ಹಮ್ಮಿಕೊಂಡಿದ್ದ ‘ವಾಲ್ಗ’ ಕಾರ್ಯಕ್ರಮದಲ್ಲಿ ದಿನಾಂಕ ಘೋಷಣೆ ಮಾಡಿ ಕಾರ್ಯಕ್ರಮದ ವಿವರಗಳನ್ನು ನೀಡಲಾಯಿತು. ಆರು ವರ್ಷದ ಹಿಂದೆ ಶುರುವಾದ ಈ ಹಬ್ಬಕ್ಕೆ ಇಂದು ಐದನೇ ಸಂಭ್ರಮ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಆದರೆ ಅದಕ್ಕೆ ಲಕ್ಷಾಂತರ ಜನ ಬಂದುದ್ದರು. ಅದರ ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲಿಕ್ಕೂ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಹೆಚ್ಚು ಜನ ಕೂಡ ಇಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು.
ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ದಿಬ್ಬಣದ ಮೂಲಕ ಬರುತ್ತಾರೆ. ಇದರೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಕುಂದಾಪುರ ಭಾಷೆಯ ಒಂದಷ್ಟು ಹಾಡುಗಳ ಮೂಲಕ ಉದ್ಘಾಟನೆ ಮಾಡಲಾಗುತ್ತದೆ. ಜೋಡಾಟ ಕೂಡ ಈ ಬಾರಿ ದೊಡ್ಡ ಮಟ್ಟದಲ್ಲಿ ಇರಲಿದೆ ಯಕ್ಷಗಾನಕ್ಕೆ ಸುಮಾರು 29 ಸಾವಿರ ಜನ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಕಾರ್ಯಕ್ರಮಗಳ ಪಟ್ಟಿ
‘ಹಂದಾಡ್ತ ನೆಗ್ಯಾಡಿ’: ಕುಂದಾಪ್ರ ಕನ್ನಡದ ನಗೆ ರಾಯಭಾರಿ ಮನು ಹಂದಾಡಿ ಅವರಿಂದ ನಗೆ ಪ್ರಹಸನ.
‘ಬಯಲಾಟ’: ಗ್ರಾಮೀಣ ಕ್ರೀಡೋತ್ಸವ
‘ರಥೋತ್ಸವ’: ಹಬ್ಬದ ರೀತಿಯಲ್ಲೇ ಭಾವಬೀದಿಯಲ್ಲಿ ಭಾಷೆಯ ತೇರು.
‘ಪೆಟ್ಟ್ ಒಂದೇ, ಸ್ವರ ಬೇರೆ’: ಆಫ್ರಿಕದ ಜಂಬೆ, ಕುಂದಾಪುರದ ಚೆಂಡೆ ಜುಗಲ್ ಬಂದಿ.
‘ಭುಜಬಲದ ಪರಾಕ್ರಮ’ ಹಗ್ಗಜಗ್ಗಾಟ 8 ಊರಿನ ಹೆಸರಲ್ಲಿ ತಂಡ.
‘ಯಬ್ಯಾ ಸೌಂಡೇ’: ರವಿ ಬಸ್ರೂರು ಅವರ ಶತಕುಂದ ಪದ್ಯಗಳ ಡಿಜೆ
‘ಡ್ಯಾನ್ಸ್ ಕುಂದಾಪ್ರ ಡ್ಯಾನ್ಸ್’: ವಿಶೇಷ ನೃತ್ಯ ಪ್ರದರ್ಶನ
‘ಗಂಡಿನ್ ಪಿಚ್ಚರ್ ಬಿಡ್ತ್’: ವಿಶೇಷ ಕಿರುಚಿತ್ರ ಪ್ರದರ್ಶನ.
‘ನಮ್ ಊರ್ಮನಿ ಪಿಚ್ಚರ್ ಯಾಕ್ಟ್ರ್ಸ್’: ಊರಿನ ಸಿನಿತಾರೆಯರು, ಸೂಪರ್ ಸ್ಟಾರ್‌ಗಳ ಸಮಾಗಮ.
‘ಕುಂದಾಪ್ರ ಸಂತಿ’: ಕುಂದಾಪುರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಂತೆ.
‘ಹೊಟ್ಟಿ ಕಂಡದ್ ನಾವೇ ಸೈ’: ಕರಾವಳಿಯ ವಿಶೇಷ ಖಾದ್ಯ ಮೇಳ.