ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ದ; ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಕಟ್ಟೆಚ್ಚರ; ಮೇಲ್ಸೇತುವೆಗಳಲ್ಲಿ ಸಂಚಾರ ನಿಷೇಧ

Most read

ಬೆಂಗಳೂರು: ಹೊಸ ವರ್ಷಾಚರಣೆಗೆ ಡಿಸೆಂಬರ್ 31 ರಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಬೆಂಗಳೂರು ನಗರ ಕಮೀಷನರ್ ಬಿ ದಯಾನಂದ್ ತಿಳಿಸಿದ್ದಾರೆ. ಬಿಬಿಎಂಪಿ, ಅಗ್ನಿಶಾಮಕ ದಳ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಜೊತೆ ಪರಸ್ಪರ ಸಮನ್ವಯ ಸಾಧಿಸಲಾಗಿದೆ. ವಿಶೇಷವಾಗಿ ಹೊಸ ವರ್ಷಾಚರಣೆಗೆ ಹೆಚ್ಚು ಜನರು ಸೇರುವ ಇಂದಿರಾನಗರ, ಕೋರಮಂಗಲ, ಎಂ ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದರು.

ಮಹಿಳೆಯರ ಸುರಕ್ಷತೆಗೆ ಹೈಲ್ಯಾಂಡ್ ಮತ್ತು ವಾಚ್ ಟವರ್ ಸ್ಥಾಪಿಸಲಾಗಿದೆ. ಶ್ವಾನ ದಳ, ಡ್ರೋನ್ ಕ್ಯಾಮರಾ ಮೂಲಕ ಹೆಚ್ಚಿನ ನಿಗಾ, ಸಾಕಷ್ಟು ಸಂಖ್ಯೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬ್ರಿಗೇಡ್ ರಸ್ತೆಗೆ ಕಾವೇರಿ ಎಪೋರಿಯಂ ಕಡೆಯಿಂದ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಏಕಮುಖ ಸಂಚಾರ ವ್ಯವಸ್ಥೆ ಮಾತ್ರ ಇರುತ್ತದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ. ಬೆಂಗಳೂರಿನ ಎಲ್ಲಾ ಮೇಲ್ಸೇತುವೆಗಳನ್ನು ಮುಚ್ಚಲಾಗುತ್ತದೆ. ನಗರದ ಹೊರವಲಯಗಳಲ್ಲಿ ನಡೆಯುವ ರೇವ್ ಪಾರ್ಟಿಗಳ ಮೇಲೆ ನಿಗಾ ಇಡಲಾಗುವುದು ಅಲ್ಲದೆ ಅನಧಿಕೃತವಾಗಿ ಆಯೋಜನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

11 ಗಂಟೆ ನಂತರ ಎಂಜಿ ರಸ್ತೆ ಮೆಟ್ರೊ ಸ್ಟೇಷನ್ ಬಂದ್ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನಲೆ, ಕೇವಲ ಬಂದು ಇಳಿಯಲು ಮಾತ್ರ ಅವಕಾಶ ನೀಡಲಾಗುವುದು. ಆದರೆ, ವಾಪಸ್ ಹೋಗಲು ಟ್ರಿನಿಟಿ ಸರ್ಕಲ್ ಅಥವಾ ಕಬ್ಬನ್ ಪಾರ್ಕ್ ಸ್ಟೇಷನ್ ಗೆ ಹೋಗಬೇಕು ಎಂದು ಮಾಹಿತಿ ನೀಡಿದ್ದಾರೆ. ಎಂಜಿ ರಸ್ತೆ, ಬಿಗ್ರೇಡ್ ರಸ್ತೆ, ಕ್ಲಬ್, ಪಬ್ಗಳು, ರೆಸ್ಟೋರೆಂಟ್ಗಳಲ್ಲಿ ಫೇಸ್ ಮಾಸ್ಕ್ ನಿಷೇಧ ಮಾಡಲಾಗಿದ್ದು, ಯಾರೊಬ್ಬರೂ ಫೇಸ್ ಮಾಸ್ಕ್ ಧರಿಸುವಂತಿಲ್ಲ. ಡಿಸೆಂಬರ್ 31 ರಾತ್ರಿ 8 ಗಂಟೆಯಿಂದ ಜನವರಿ 1ರ ಬೆಳಗ್ಗೆವರೆಗೆ ಎಂಜಿ ರಸ್ತೆಯಿಂದ ಅನಿಲ್ ಕುಂಬ್ಳೆ ಸರ್ಕಲ್, ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಶೇಷವಾಗಿ ಕೇಂದ್ರ ವಿಭಾಗದ ಬಿಗ್ರೇಡ್ ರಸ್ತೆಯಲ್ಲಿ ಭದ್ರತೆಗಾಗಿ 5 ಡಿಸಿಪಿ, 18 ಎಸಿಪಿ, 41 ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ 2572 ಪೊಲೀಸರನ್ನು ನಿಯೋಜನೆ ಮಾಡಲಾಗುವುದು. ಪೊಲೀಸ್ ಕಿಯೋಸ್ಕ್ಗಳನ್ನ ನಿರ್ಮಾಣ ಮಾಡಲಾಗುವುದು. ನಗರದಲ್ಲಿ ಭದ್ರತೆಗೆ 11830 ಪೊಲೀಸರನ್ನು ನಿಯೋಜನೆ ಮಾಡಲಾಗುವುದು. 2 ಹೆಚ್ಚುವರಿ ಪೊಲೀಸ ಆಯುಕ್ತರು, 1 ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 44 ಎಸಿಪಿಗಳು, 135 ಇನ್ಸ್‌ಪೆಕ್ಟರ್ಗಳು, ಸಿವಿಲ್ ಡಿಫೆನ್ಸ್ 800, 1048 ಮಹಿಳಾ ಸಿಬ್ಬಂದಿ, 72 ಕೆಎಸ್ಆರ್ಪಿ ತುಕಡಿ, 21 ಸಿಎಆರ್ ತುಕಡಿ ಯನ್ನು ನಿಯೋಜನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಅನುಚಿತ ವರ್ತನೆ‌ ತೋರುವರಿಗೆ ಕಮೀಷನರ್ ವಾರ್ನಿಂಗ್ ಕೊಟ್ಟಿದ್ದಾರೆ. ಬೈಕ್‌ಗಳಲ್ಲಿ ಪದೇ ಪದೇ ಓಡಾಡುವಂತಿಲ್ಲ. ವಿಷ್ ಮಾಡುವ ನೆಪದಲ್ಲಿ ಕೂಗಾಟ, ಪೀಪಿಗಳನ್ನ ಊದುವುದು, ವಿಚಿತ್ರ ರೀತಿಯ ಮಾಸ್ಕ್ ಹಾಕುವುದು. ಮಕ್ಕಳಿಗೆ, ವೃದ್ಧರಿಗೆ, ಹೆಣ್ಣುಮಕ್ಕಳಿಗೆ ತೊಂದರೆ ಮಾಡುವಂತಿಲ್ಲ.

More articles

Latest article