ಬೆಂಗಳೂರಿನಲ್ಲಿ 5 ಪಾಲಿಕೆಗಳ ರಚನೆ; ಶೀಘ್ರದಲ್ಲೇ ಚುನಾವಣೆ: ಡಿಸಿಎಂ ಡಿ.ಕೆ.ಶಿವಕುಮಾರ್

Most read

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆಗಳನ್ನು ರಚಿಸಿ ಶೀಘ್ರದಲ್ಲೇ ಚುನಾವಣೆ ನಡೆಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಇಂದು ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಈಗಾಗಲೇ ಜಿಬಿಎ ರಚಿಸಲಾಗಿದ್ದು, ಈ ಮೂಲಕ ಐದು ಪಾಲಿಕೆಗಳನ್ನು ರಚಿಸಲಾಗುತ್ತದೆ. ಈ ಕುರಿತು ಶಾಸಕ ರಿಜ್ವಾನ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡಬಹುದು. ಆದರೆ ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ ಎಂದರು.

“ಪಾಲಿಕೆಗಳು ರಚನೆಯಾದರೆ ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನ ಮಾನ ನೀಡಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಡಿ.ಕೆ.ಶಿವಕುಮಾರ್ ಒಬ್ಬನೇ ಸರ್ಕಾರ ತರಲು ಆಗುವುದಿಲ್ಲ. ಕಾರ್ಯಕರ್ತರೇ ಇಲ್ಲಿ ಜೀವಾಳ. ನಾವು ವಿಧಾನಸೌಧದಲ್ಲಿ ತೀರ್ಮಾನ ಮಾಡಬಹುದು. ಆದರೆ ಸರ್ಕಾರದ ರಾಯಭಾರಿಗಳು ನೀವು. ನಮ್ಮ ಭವಿಷ್ಯ, ಬೆಂಗಳೂರು ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂದರು.

ಜನರ ಕಲ್ಯಾಣಕ್ಕಾಗಿ ಶೇ.25 ರಷ್ಟು ಅನುದಾನ ವಿನಿಯೋಗ

“ಸರ್ಕಾರ ಸಮಾಜ ಹಾಗೂ ಬಡವರ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ನೀಡಿದೆ. 50 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚವಾದರೆ, 19 ಸಾವಿರ ಕೋಟಿ ಹಣವನ್ನು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಸುಮಾರು 11 ಸಾವಿರ ಕೋಟಿಯನ್ನು ಪಿಂಚಣಿಗಳಿಗೆ ವೆಚ್ಚ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯ ಬಜೆಟ್ಟಿನ ಶೇ.25 ಹಣವನ್ನು ಜನರಿಗೆ ನೀಡುತ್ತಿದ್ದೇವೆ. ಈ ವಿಷಯವನ್ನು ರಾಜ್ಯದ ಜನರಿಗೆ ಮನದಟ್ಟು ಮಾಡಬೇಕಿರುವುದು ನಿಮ್ಮ ಕರ್ತವ್ಯ” ಎಂದರು.

ದೇಶದಲ್ಲಿ ಕಾಂಗ್ರೆಸ್ ನೀಡಿರುವ ಹಲವಾರು ಕಾರ್ಯಕ್ರಮಗಳನ್ನು ಯಾವುದೇ ಪಕ್ಷದ ಸರ್ಕಾರ ನಿಲ್ಲಸಲು ಸಾಧ್ಯವಿಲ್ಲ. ಉಳುವವನೇ ಭೂಮಿಯ ಒಡೆಯ, ಅಂಗನವಾಡಿ, ಆಶಾ, ನರೇಗಾ ಹೀಗೆ ನೂರಾರು ಕಾರ್ಯಕ್ರಮಗಳನ್ನು  ಕಾಂಗ್ರೆಸ್ ನೀಡಿದೆ. ] ಅರಣ್ಯ ಭೂಮಿ ಹಕ್ಕು, ಆಹಾರ ಭದ್ರತಾ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಂಗಾರಪ್ಪ ಅವರು ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿದರು. ಜನರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ ಗಳ ರಾಷ್ಟ್ರೀಕರಣದಿಂದ ಬ್ಯಾಂಕ್ ಗಳೇ ಮನೆ ಬಾಗಿಲಿಗೆ ಬಂದಂತಾಗಿವೆ. ಬಿಸಿಯೂಟ, ಅನ್ನಭಾಗ್ಯದಂತಹ ಕ್ರಾಂತಿಕಾರಕ ಯೋಜನೆಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಹಟ್ಟಿ, ತಾಂಡಾಗಳಲ್ಲಿ ವಾಸವಿರುವ ಜನರು ಯಾವುದೇ ಭೂ ದಾಖಲೆಗಳನ್ನು ಹೊಂದಿರಲಿಲ್ಲ. ಅವರಿಗೆಲ್ಲ ಉಚಿತವಾಗಿ ಭೂ ದಾಖಲೆಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ 1,11,111 ದಾಖಲೆಗಳನ್ನು ನೀಡಲಾಯಿತು” ಎಂದರು.

“ನಮ್ಮ ಸರ್ಕಾರ ಐದು ಗ್ಯಾರಂಟಿ ಜೊತೆಗೆ ಭೂ ಗ್ಯಾರಂಟಿ ನೀಡಿದೆ. ಈಗ ಬೆಂಗಳೂರು ನಗರದಲ್ಲಿ ಎಲ್ಲಾ ಆಸ್ತಿ ಖಾತಾ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅನೇಕ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ಯಾರ ಹೆಸರಲ್ಲಿದೆ ಎಂಬುದೇ ಗೊತ್ತಿಲ್ಲ. ಅವರ ತಾತ, ಮುತ್ತಾತನ ಹೆಸರಿನಲ್ಲಿ ಖಾತೆಗಳಿವೆ. ಇದನ್ನು ಸರಿಪಡಿಸಿ ದಾಖಲೆಗಳನ್ನು ನೀಡಲು ಮುಂದಾಗಿದೆ. ಕೃಷ್ಣಭೈರೇಗೌಡ ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಮಾಡಿದ್ದು, ಅಲ್ಲಿ ಪ್ರತಿ ವಾರ್ಡ್ ನಲ್ಲಿ 20-30 ಕಾರ್ಯಕರ್ತರಂತೆ, ಇಡೀ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಸ್ಥಳೀಯರ ಮನೆಮನೆಗೆ ಹೋಗಿ, ಅರ್ಜಿ ಕೊಟ್ಟು ಅದನ್ನು ತುಂಬಿಸಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಹೇಳಿದರು.

More articles

Latest article