ಬೆಂಗಳೂರಿನ ಅಗತ್ಯಗಳಿಗೆ ಮತ್ತೊಂದು ವಿಮಾನ ನಿಲ್ದಾಣ: ಅಧಿಕಾರಿಗಳೊಂದಿಗೆ ಸಚಿವ ಎಂ.ಬಿ. ಪಾಟೀಲ್ ಸಭೆ

Most read

ವೇಗವಾಗಿ ಬೆಳೆಯುತ್ತಿರುವ ಮತ್ತು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ಮಹಾನಗರದ ಮುಂಬರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌.ಬಿ. ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಗುರುವಾರ ಇಲ್ಲಿ ಪ್ರಾಥಮಿಕ ಹಂತ ಕುರಿತು ಚರ್ಚಿಸಿದರು.

”ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೂರನೇ ಅತಿ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಕಳೆದ ಸಾಲಿನಲ್ಲಿ ಇಲ್ಲಿ 37.5 ಮಿಲಿಯನ್ ಪ್ರಯಾಣಿಕರ ಮತ್ತು 4 ಲಕ್ಷ ಟನ್​ಗೂ ಹೆಚ್ಚಿನ ಸರಕು ಸಾಗಣೆ ನಿರ್ವಹಣೆ ಆಗಿದೆ. ಈ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಎರಡನೇ ವಿಮಾನ ನಿಲ್ದಾಣದ ಅಗತ್ಯ ಇದೆ ಎಂದಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಸಿ. ಸತೀಶ್, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ. ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು. ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯಾಸಾಧ್ಯತೆ ವರದಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಾಗ ಬಿಐಎಎಲ್ ಸಂಸ್ಥೆ, ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು 25 ವರ್ಷಗಳವರೆಗೆ (ಅಂದರೆ 2033) 150 ಕಿ.ಮೀ. ವ್ಯಾಪ್ತಿಯಲ್ಲಿ ಇನ್ನೊಂದು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಹೇಳಿತ್ತು. ಈ ಷರತ್ತು ಇನ್ನು ಒಂಬತ್ತು ವರ್ಷಗಳಲ್ಲಿ ಮುಗಿಯಲಿದೆ. ಆದ್ದರಿಂದ ಈಗಿನಿಂದಲೇ ನಾವು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮುಂದಡಿ ಇಡಬೇಕಾಗಿದೆ” ಎಂದು ವಿವರಿಸಿದ್ದಾರೆ.

More articles

Latest article