ಬೆಂಗಳೂರು ದರೋಡೆ: ಸುಮಾರು 5 ಕೋಟಿ ರೂ.ಹಣ ಜಪ್ತಿ; ಹಲವರ ಬಂಧನ

Most read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 7.11 ಕೋಟಿ ರೂಪಾಯಿ ಹಗಲು ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 5 ಕೋಟಿ ರೂ.ಹಣವನ್ನು ವಶಪಡಿಸಿಕೊಂಡಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ದರೋಡೆಯ ಮಾಸ್ಟರ್‌ ಮೈಂಡ್‌ ಪ್ರಕರಣದ ಪ್ರಮುಖ ಆರೋಪಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ನಿವಾಸಿ ರವಿ ಮತ್ತು ಬೆಂಗಳೂರಿನ ಕೆಜಿ ಹಳ್ಳಿ ನಿವಾಸಿ ನವೀನ್  ಅವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ದರೋಡೆಗೆ ಯೋಜನೆ ರೂಪಿಸಿದ್ದ ಬೆಂಗಳೂರಿನ ಪೊಲೀಸ್ ಪೇದೆ ಅಣ್ಣಪ್ಪನನ್ನು ಈಗಾಗಲೇ ಬಂಧಿಸಲಾಗಿದ್ದು ಈತ ರವಿ ಜತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಘಟನೆ ನಡೆದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಐವರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ 30 ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವೀನ್  ಕುಪ್ಪಂನಲ್ಲಿ ಕಾರು ಬಿಟ್ಟು ಮತ್ತೊಂದು ಕಾರಿನಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದ. ಈತನನ್ನು ವೇಲೂರು ಬಳಿ ಪೊಲೀಸರು ಬಂಧಿಸಿದ್ದಾರೆ. ರವಿಯನ್ನು ಚಿತ್ತಾಪುರದಲ್ಲಿ ಬಂಧಿಸಲಾಗಿದ್ದು, ಎಲ್ಲರನ್ನೂ ಬೆಂಗಳೂರಿಗೆ ಕರೆತರಲಾಗುತ್ತಿದೆ. ಚಿತ್ತೂರು ಬಳಿ ನಿರ್ಜನ ಪ್ರದೇಶದಲ್ಲಿ ಬಾಕ್ಸ್‌ ಗಳು ಪತ್ತೆಯಾಗಿವೆ. ಹಣವನ್ನು ತೆಗೆದುಕೊಂಡು ಈ ಬಾಕ್ಸ್‌ ಗಳನ್ನು ಎಸೆದು ಹೋಗಿದ್ದಾರೆ.

ದರೋಡೆ ಸಂಬಂಧ ಸಭೆ ನಡೆಸಿ ನಂತರ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದರೋಡೆಯನ್ನು ಬೇಧಿಸುವಲ್ಲಿ ಸಾಕಷ್ಟು ಪ್ರಗತಿಯಾಗಿದೆ.  ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ದರೋಡೆ ಪ್ರಕರಣಕ್ಕೆ ಬೇಗ ಮುಕ್ತಾಯ ಹಾಡುತ್ತೇವೆ. ಪ್ರಕರಣದಲ್ಲಿ ಶಾಮೀಲಾದ ಎಲ್ಲರನ್ನೂ ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More articles

Latest article