ಬೆಂಗಳೂರು: ಬೆಂಗಳೂರಿನ ನಾಗರೀಕರು ಹಸಿ ಕಸ,ಒಣಕಸ ವಿಂಗಡಣೆ ಮಾಡುವುದರಿಂದ ಸ್ವಚ್ಚತೆಯ ಜತೆಗೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮದ ಅಧ್ಯಕ್ಷ ಎ.ಎನ್.ನಟರಾಜ್ ಗೌಡ ತಿಳಿಸಿದ್ದಾರೆ.
ಅವರು ಇಂದು ಜಿಬಿಎ ಆವರಣದಲ್ಲಿರುವ ನಿಗಮದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಎರಡು ತಿಂಗಳಲ್ಲಿ 5ಸಾವಿರ ಟನ್ ಹಸಿ ಕಸವನ್ನು ಕಾಂಪೋಸ್ಚ್ ಗೊಬ್ಬರ ಮಾಡಿ ವಿವಿಧ ಜಿಲ್ಲೆಯ ರೈತರಿಗೆ ಸಬ್ಸಡಿ ಮೂಲಕ ರೈತರಿಗೆ ನೀಡಲಾಗಿದೆ. ಪ್ರತಿ ಟನ್ ಗೆ ರೂ. 3,600ರೂ ನಿಗದಿ ಮಾಡಲಾಗಿದ್ದರೂ ರಿಯಾಯಿತಿ ದರದಲ್ಲಿ 2000ರೂಗಳಿಗೆ ನೀಡಲಾಗಿದೆ ಎಂದರು.
ಕಾಂಪೋಸ್ಟ್ ಗೊಬ್ಬರದಿಂದ ಬಳಕೆಯಿಂದ ಮಣ್ಣಿನ ಫಲವತ್ತಾತೆ ಬರುತ್ತದೆ,ಉತ್ತಮ ಬೇಳೆ ಸಿಗುತ್ತದೆ. ರೈತರಿಗೆ ಸಕಾಲಕ್ಕೆ ಗೊಬ್ಬರ ಸಿಗಬೇಕು ಉತ್ತಮ ಇಳುವರಿಯಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ. ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ 369ವಾರ್ಡ್ ಗಳಲ್ಲಿ ಹಸಿಕಸ, ಒಣಕಸ ವಿಂಗಡನೆ ಜನ ಜಾಗೃತಿ ಅಭಿಯಾನ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮಾಡುವ ಘಟಕಗಳಿಗೆ ಸ್ಥಾಪನೆ ಒತ್ತು ನೀಡಲಾಗುವುದು. ಪ್ರಮುಖ ವಾಣಿಜ್ಯ ಸಂಕೀರ್ಣಗಳು ಹಾಗೂ ಅಪಾರ್ಟ್ ಮೆಂಟ್ ಗಳಲ್ಲಿ ಸ್ಥಳೀಯವಾಗಿಯೇ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸುವ ಮೂಲಕ ತ್ಯಾಜ್ಯ ಸಾಗಾಣಿಕೆ ಹೊರೆಯನ್ನು ತಗ್ಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ದೊಡ್ಡ ಉದ್ಯಾನವನಗಳಲ್ಲಿ ಕಾಂಪೋಸ್ಟ್ ಘಟಕಗಳನ್ನು ಸ್ಥಾಪಿಸಿ, ಅಲ್ಲಿ ಉದುರುವ ಎಲೆಗಳು ಮತ್ತು ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಅದನ್ನು ಉದ್ಯಾನವನದ ಗಿಡಮರಗಳ ಪೋಷಣೆಗೆ ಬಳಸಲು ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು “Zero Waste City” (ಶೂನ್ಯ ತ್ಯಾಜ್ಯ ನಗರ) ಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಪ್ರತಿನಿತ್ಯ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ತ್ವರಿತವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲು ಆಧುನಿಕ ತಂತ್ರಜ್ಞಾನ ಅಳವಡಿಸುವ ಉದ್ದೇಶವಿದೆ. ದುರ್ವಾಸನೆ ನಿಯಂತ್ರಣ: ತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ವಾಸನೆ ನಿಯಂತ್ರಣಕ್ಕೆ (Odour Control) ಹೊಸ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲಾಗುತ್ತದೆ. ಆಧುನಿಕ ತಂತ್ರಜ್ಞಾನ , ವೈಜ್ಞಾನಿಕ ಕ್ರಮ ಅಳವಡಿಕೆ ಮಾಡಿ, ಗೊಬ್ಬರ ತಯಾರಿಕೆ ಹೆಚ್ಚು ಮಾಡುವುದು ನಿಗಮದ ಉದ್ದೇಶವಾಗಿದೆ ಎಂದು ನಟರಾಜ್ ಗೌಡ ಹೇಳಿದರು.

