ಬೆಳ್ತಂಗಡಿ: ತಮ್ಮ ಶಾಲೆ ಶೇ.ನೂರರಷ್ಟು ಫಲಿತಾಂಶ ಸಾಧಿಸಬೇಕು ಎಂಬ ಕಾರಣಕ್ಕೆ, ಇಬ್ಬರು ವಿದ್ಯಾರ್ಥಿನಿಯರಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಇಬ್ಬರು ವಿದ್ಯಾರ್ಥಿನಿಯರಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವ ಮೂಲಕ ಶಿಕ್ಷಕರು ಮಹಾ ಅನ್ಯಾಯವೆಸಗಿದ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹಿಂದುಳಿದಿದ್ದು, ಒಂದು ವೇಳೆ ಪರೀಕ್ಷೆ ಬರೆದರೆ ಅನುತ್ತೀರ್ಣರಾಗುತ್ತಾರೆ. ಇದರಿಂದ ಶಾಲೆಗೆ ಶೇ.100 ಶೇಕಡ ಫಲಿತಾಂಶ ಬರುವುದಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಕ್ಕಳಿಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕ ಮೊಯ್ದಿನ್ ಕುಟ್ಟಿ, ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಎರಡು ತಿಂಗಳ ಹಿಂದೆಯೇ 6 ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿದ್ದ ಶಿಕ್ಷಕರು ನಿಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಪರೀಕ್ಷೆ ಬರೆದರೆ ಉತ್ತೀರ್ಣರಾಗುವುದಿಲ್ಲ. ಅವರನ್ನು ಏಪ್ರಿಲ್ನಲ್ಲಿ ನಡೆಯಲಿರುವ ಪರೀಕ್ಷೆಗೆ ಕೂರಿಸುತ್ತೇವೆ ಎಂದು ಹೇಳಿದ್ದರು. ಈ ಬಗ್ಗೆ ಹೆಚ್ಚಿನ ಅರಿವು ಇಲ್ಲದ ಇಲ್ಲದ ವಿದ್ಯಾರ್ಥಿಗಳ ಪೋಷಕರು ಒಪ್ಪಿಗೆ ಸೂಚಿಸಿದ್ದರು. ಆದರೆ, ಇಬ್ಬರನ್ನು ಹೊರತುಪಡಿಸಿ ನಾಲ್ವರು ವಿದ್ಯಾರ್ಥಿಗಳಿಗೆ ಅಂತಿಮ ಕ್ಷಣದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರಿಗೆ ಅವಕಾಶ ನಿರಾಕರಿಸಲಾಗಿದೆ. ಪೋಷಕರು ಹಾಲ್ ಟಿಕೆಟ್ ನೀಡುವಂತೆ ಒತ್ತಾಯಿಸಿದಾಗ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿನಿಯರಿಗೆ ಅನ್ಯಾಯ ಮಾಡಲಾಗಿದ್ದು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರಕಾರಿ ಶಾಲೆಯಲ್ಲಿಯೇ ಇಂತಹ ವಂಚನೆ ನಡೆದರೆ ಹೇಗೆ ಎನ್ನುವುದು ಪೋಷಕರ ಪ್ರಶ್ನೆಯಾಗಿದೆ.
ಇಷ್ಟೇ ಅಲ್ಲದೆ ಖಾಸಗಿ ಶಾಲೆಗಳು ಶೇ.ನೂರರಷ್ಟು ಫಲಿತಾಂಶ ದಾಖಲಿಸುವ ಉಮೇದಿನಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಒಂಬತ್ತನೇ ತರಗತಿಯಿಂದಲೇ ಟಿಸಿ ಕೊಟ್ಟು ಬೇರೆ ಶಾಲೆಗಳಿಗೆ ವರ್ಗಾಯಿಸುತ್ತಿರುವ ಆರೋಪಗಳೂ ಕೇಳಿ ಬರುತ್ತಿವೆ.
ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಪೂರಕವಾಗಿ ನಡೆಯುವುದು ಸರ್ಕಾರಿ ಶಾಲೆಗಳ ಕರ್ತವ್ಯವಾಗಿರುತ್ತದೆ. ಆದರೆ, ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ವೃಂದ 100 ಶೇಕಡ ಫಲಿತಾಂಶದ ಗೀಳಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡದಿರುವುದು ಅಕ್ಷಮ್ಯ ಅಪರಾಧವಾಗಿದೆ.
ಅವಕಾಶ ವಂಚಿತ ವಿದ್ಯಾರ್ಥಿನಿಯರು ಮಕ್ಕಳ ಹಕ್ಕುಗಳ ಆಯೋಗ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕರಿಗೆ ಪತ್ರ ಬರೆದಿದ್ದಾರೆ. ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥ ಶಿಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅವಕಾಶ ನಿರಾಕರಿಸಲಾದ ಮಕ್ಕಳಿಗೆ ಪರೀಕ್ಷೆ ಬರೆಯಲು ಕೂಡಲೇ ವ್ಯವಸ್ಥೆ ಮಾಡಿಕೊಡಬೇಕು ಎಂದು ಮೊಯ್ದಿನ್ ಕುಟ್ಟಿ ಒತ್ತಾಯಿಸಿದ್ದಾರೆ.