ಕರ್ನಾಟಕದ ರಾಜಧಾನಿಯಾಗಿ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಬೇಕಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ಕಾರಣಗಳಿಗಾಗಿ ಕನ್ನಡ ವಿರೋಧಿಯೆಂದು ಸಾರ್ವಜನಿಕ ವಲಯದಲ್ಲಿ ನಕಾರಾತ್ಮಕವಾಗಿ ಪ್ರತಿಬಿಂಬಿತವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಕೂಡಲೇ ಇದನ್ನು ಸರಿಪಡಿಸಿಕೊಳ್ಳಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಶನಿವಾರ ಪತ್ರ ಬರೆದಿರುವ ಡಾ.ಬಿಳಿಮಲೆ, ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ರಸ್ತೆ ನಾಮಫಲಕಗಳಲ್ಲಿ ತಪ್ಪು ತಪ್ಪಾದ ಕನ್ನಡ ಪದಗಳನ್ನು ಬಳಸಲಾಗುತ್ತಿರುವುದು, ಪಾಲಿಕೆಯೇ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕನ್ನಡದ ಶೀರ್ಷಿಕೆಗಳು ಕಾಣೆಯಾಗುತ್ತಿರುವುದು ಕನ್ನಡದ ಹಿತ ಕಾಯಬೇಕಾದ ಸಂಸ್ಥೆಯಿಂದ ಆಗಬೇಕಾದ ಕೆಲಸಗಳಲ್ಲ. ಕನ್ನಡ ಪರ ಕೆಲಸಗಳಿಗೆ ಅಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು, ಪಾಲಿಕೆಯ ಸಾರ್ವಜನಿಕ ಸೇವಾ ವಿಭಾಗಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕನ್ನಡ ಭಾಷೆ ಸಾಹಿತ್ಯದ ಜ್ಞಾನ ಮತ್ತು ಅಭಿಮಾನಗಳನ್ನು ಹೊಂದಿರಬೇಕಾಗುತ್ತದೆ. ಇಂತಹ ವಿಭಾಗಗಳಿಗೆ ಕಡ್ಡಾಯವಾಗಿ ಕನ್ನಡದ ಒಲವುಳ್ಳ ಅಧಿಕಾರಿಗಳನ್ನು ನೇಮಿಸಿ ಎಂದು ಸೂಚಿಸಿದ್ದಾರೆ.
ಇಂತಹ ಪ್ರಮಾದಗಳಿಗೆ ಕಾರಣರಾಗಿರುವ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆಯನ್ನು ನೀಡಿರೆಂದು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿರುವ ಡಾ.ಬಿಳಿಮಲೆ, ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಹಾಗೂ ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿ ನೀಡಬೇಕೆಂದು ತಿಳಿಸಿದ್ದಾರೆ.