ಬಿಬಿಎಂಪಿ: ಒಟಿಎಸ್‌ ಯೋಜನೆ ಅಂತ್ಯ; ಇಂದಿನಿಂದ ದಂಡ ಬಡ್ಡಿ ವಸೂಲಿ

Most read

ಬೆಂಗಳೂರು: ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್)‌ ನವೆಂಬರ್‌ 30ಕ್ಕೆ
ಅಂತ್ಯಗೊಂಡಿದೆ. ಸುಮಾರು 4,284 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ತಿಳಿಸಿದ್ದಾರೆ. ಇದು ಪಾಲಿಕೆಯ ಈವರೆಗಿನ ಅತ್ಯಧಿಕ ಸಂಗ್ರಹವಾಗಿದೆ.

ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಅಂದರೆ 1148.35 ಕೋಟಿ ರೂ ತೆರಿಗೆ ಸಂಗ್ರಹವಾಗಿದೆ. ಪೂರ್ವ ವಲಯದಲ್ಲಿ 710 ಕೋಟಿ ರೂ. ಮತ್ತು
ಕೇಂದ್ರ ಕಚೇರಿಯಲ್ಲಿ 36 ಕೋಟಿ ರೂ. ಸಂಗ್ರಹವಾಗಿದೆ. ಸುಸ್ತಿದಾರರ ಅನುಕೂಲಕ್ಕಾಗಿ ಒಟಿಎಸ್‌ (ಒನ್‌ ಟೈಮ್‌ ಸೆಟ್ಲ್‌ ಮೆಂಟ್)‌ ಯೋಜನೆಯನ್ನು
2024ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾಗಿತ್ತು. ಈ ಮೂಲಕ ತೆರಿಗೆದಾರರಿಗೆ ಬಾಕಿ ಮೇಲಿನ ಬಡ್ಡಿ ಚಕ್ರಬಡ್ಡಿ ಮತ್ತು ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವ ಯೋಜನೆ ಇದಾಗಿತ್ತು. ಜುಲೈ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಮತ್ತಷ್ಟು ಕಾಲಾವಕಾಶ ಬೇಕು ಎಂದು ಸಾರ್ವಜನಿಕರು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪುರಸ್ಕರಿಸಿದ ಬಿಬಿಎಂಪಿ ನವಂಬರ್‌ ಅಂತ್ಯದವರೆಗೆ ಗಡುವು ನೀಡಲಾಗಿತ್ತು.

ಪಾಲಿಕೆಯು 2025 ಮಾರ್ಚ್‌ ಅಂತ್ಯದ ವೇಳೆಗೆ 5,200 ಕೋಟಿ ರೂ ಸಂಗ್ರಹಿಸುವ ಗುರಿ ಹೊಂದಿದೆ. ಪಾಲಿಕೆ ಇಷ್ಟೆಲ್ಲಾ ಅನುಕೂಲ ಅವಕಾಶಗಳನ್ನು ಕಲ್ಪಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ತೆರಿಗೆ ಪಾವತಿಸದ
3.9 ಲಕ್ಷ ಸುಸ್ತಿದಾರರಲ್ಲಿ 2 ಲಕ್ಷ ತೆರಿಗೆದಾರರು ಈ ಯೋಜನೆಯ ಪ್ರಯೋಜನ
ಪಡೆದಿದ್ದಾರೆ ಎಂದು ಪಾಲಿಕೆ ತಿಳಿಸಿದೆ. ಡಿ.1ರಿಂದ ತೆರಿಗೆ, ಬಡ್ಡಿ, ದಂಡ ಎಲ್ಲವನ್ನೂ ಪಾವತಿಸಬೇಕಾಗುತ್ತದೆ.

More articles

Latest article