ನಿರ್ಮಾಣ ಹಂತದ ಕಟ್ಟಡಗಳ ತಪಾಸಣೆಗೆ ಬಿಬಿಎಂಪಿ ನಿರ್ಧಾರ: ನಿಯಮ ಉಲ್ಲಂಘಿಸಿದ್ದರೆ ಧ್ವಂಸ ಖಚಿತ!

Most read

ಬೆಂಗಳೂರು: ಬೆಂಗಳೂರಿನಲ್ಲಿ ನೀವು ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ಕಟ್ಟಿಸುತ್ತಿದೀರಾ? ನಿಯಮಗಳನ್ನು ಉಲ್ಲಂಘಿಸಿದ್ದರೆ ತಪಾಸಣೆಗಾಗಿ ಬಿಬಿಎಂಪಿ ಅಧಿಕಾರಿಗಳು ಬರುತ್ತಿದ್ದಾರೆ, ಎಚ್ಚರ.!

ಇತ್ತೀಚೆಗೆ ಬೆಂಗಳೂರಿನ ಬಾಬುಸಾ ಪಾಳ್ಯ ಮತ್ತು ನಿರ್ಮಾಣ ಹಂತದಲ್ಲಿದ್ದ ಎರಡು ಮೂರು ಕಟ್ಟಡಗಳು ಉರುಳಿ ಬಿದ್ದು ಹಲವಾರು ಕಾರ್ಮಿಕರು ಅಸು ನೀಗಿದ್ದರು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸಲಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ನಮ್ಮ ಅಧಿಕಾರಿಗಳು ಸಮೀಕ್ಷೆ ನಡೆಸಲಿದ್ದಾರೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದರೆ ಅಂತಹ ಕಟ್ಟಡದ ನಿರ್ಮಾಣವನ್ನು ನಿಲ್ಲಿಸಲಾಗುತ್ತದೆ. ಈ ಕೆಲಸಕ್ಕಾಗಿ ಪಾಲಿಕೆಯ ೭೦ ನೌಕರರನ್ನು ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಅನುಮತಿ ಪಡೆಯುವುದಕ್ಕೂ ನಿರ್ಮಾಣ ಮಾಡುವ ಕಟ್ಟಡಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಎರಡು ಮಹಡಿಗಳಿಗೆ ಅನುಮತಿ ಪಡೆದು ನಾಲ್ಕೈದು ಮಹಡಿ ಕಟ್ಟುತ್ತಾರೆ. ಇಂತಹ ಕಟ್ಟಡಗಳನ್ನು ಪತ್ತೆ ಹಚ್ಚಿ ಹೆಚ್ಚುವರಿಯಾಗಿ ನಿರ್ಮಿಸಿರುವ ಮಹಡಿಗಳನ್ನು ಧ್ವಂಸಗೊಳಿಸಲಾಗುತ್ತದೆ.

ಇದಕ್ಕೆ ತಗುಲುವ ವೆಚ್ಚವನ್ನು ಕಟ್ಟಡಗಳ ಮಾಲೀಕರೇ ಭರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಕ್ಷೆಯ ಕೆಲಸ ಇಷ್ಟಕ್ಕೇ ಸೀಮಿತವಾಗಿರುವುದಿಲ್ಲ. ಕಟ್ಟಡಗಳ ನಿರ್ಮಾಣಕ್ಕೆ ಕಳಪೆ ಸಾಮಗ್ರಿಗಳನ್ನು ಬಳಸಿದ್ದರೆ, ಇಂತಹ ಕಟ್ಟಡಗಳ ನಿರ್ಮಾಣದಿಂದ ಅಕ್ಕಪಕ್ಕದ ಕಟ್ಟಡಗಳಿಗೆ ತೊಂದರೆ ಉಂಟಾಗುತ್ತಿದ್ದರೂ ಧ್ವಂಸ ಮಾಡಬೇಕಾಗುತ್ತದೆ. ಕೆರೆ ಅಥವಾ ರಾಜಕಾಲುವೆಗಳನ್ನು ಒತ್ತುವರಿ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ಅಂತಹ ಕಟ್ಟಡವನ್ನು ಧ್ವಂಸ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article