ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸುತ್ತಿರುವವರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಬಿಬಿಎಂಪಿಗೆ ಮಂಗಳವಾರ ರಾಜ್ಯ ಹೈ ಕೋರ್ಟ್ ಚಾಟಿ ಬೀಸಿದೆ.
ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ BBMP ನೀಡಿದ್ದ ನೋಟಿಸ್ ಪ್ರಶ್ನಿಸಿ ಬೆಂಗಳೂರಿನ ರೆಮ್ಕೋ (BHEL) ಬಡಾವಣೆಯ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನ್ಯಾಯಪೀಠ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಾಯಿದೆ, 2020ರ ಸೆಕ್ಷನ್ 248(3) ಮತ್ತು 356ರ ಅಡಿಯಲ್ಲಿ ಆದೇಶಗಳನ್ನು ನೀಡುವ ಮೊದಲು, ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣವಾಗಿದೆಯೇ ಅಥವಾ ಕಟ್ಟಡದ ಬೈಲಾಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಯೋಜನೆಗೆ ಅನುಮೋದನೆ ಪಡೆಯದೆ ನಿರ್ಮಿಸಲಾದ ಕಟ್ಟಡ ಮತ್ತು ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಕೆಡವುದರ ಬದಲಾಗಿ ಅವರಿಗೆ ಸೂಕ್ತ ನಿರ್ದೇಶನ ನೀಡಬಹುದು ಮತ್ತ ಅದನ್ನು ಸಕ್ರಮಗೊಳಿಸಲು ಬೈಲಾದಲ್ಲಿ ಸೂಕ್ತ ಅವಕಾಶಗಳಿವೆ ಎಂದು ಕೋರ್ಟ್ ಹೇಳಿದೆ.
ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ನಿರ್ಮಿಸಿದರೆ ಅಂತವರ ಮೇಲೆ ದಂಡ, ತೆರೆಗಿ ಇತ್ಯಾದಿಗಳನ್ನು ವಿಧಿಸಿ ನಂತರ ಯೋಜನೆಗೆ ಅನುಮೋದನೆ ನೀಡಿ, 2003 ರ ಕಟ್ಟಡ ಉಪ-ಕಾನೂನುಗಳ ಪ್ರಕಾರ ಅನುಮತಿ ಮಿತಿಯೊಳಗೆ ಇರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಮಾಲೀಕರು ಕಟ್ಟಡವನ್ನು ಉಪ-ಕಾನೂನುಗಳಿಗೆ ಅನುಗುಣವಾಗಿ ತರಲು ವಿಫಲವಾದರೆ ಮಾತ್ರ ಅಂತಹ ಕಟ್ಟಡಗಳನ್ನು ಕೆಡವಲು ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರು, ‘ಮಿರ್ಲೆ ವರದರಾಜ್ ಮತ್ತು ಅವರ ಸಂಬಂಧಿ ಮಂಜುನಾಥ್ ಎಂಬವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಮ್ಮ ಜಮೀನು ಕಬಳಿಸಿದ್ದಾರೆ. ಈ ಸಂಬಂಧ ದೂರು ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಜರುಗಿಸಿಲ್ಲ’ ಎಂಬ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ಬಿಬಿಎಂಪಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಕೈಜೋಡಿಸಿರುವ ಆರೋಪಕ್ಕೆ ಸಂಬಂಧಿಸಿದ ಸತ್ಯಾಸತ್ಯತೆ ಪತ್ತೆ ಹಚ್ಚಲು ಪಾಲಿಕೆ ಮುಖ್ಯ ಆಯುಕ್ತರು ಕ್ರಮ ವಹಿಸಬೇಕು’ ಎಂದು ನಿರ್ದೇಶಿಸಿದೆ.