ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ನಗರದಲ್ಲಿ ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್/ಬ್ಯಾನರ್ ಗಳ ನಿಯಂತ್ರಣಕ್ಕಾಗಿ ಎಸ್.ಒ.ಪಿ ಹೊರಡಿಸಲಾಗುವುದೆಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್‌ಗಳ ನಿಯಂತ್ರಣಕ್ಕಾಗಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಜೊತೆ ಇಂದು ಪೊಲೀಸ್ ಅಧಿಕಾರಿ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರದಲ್ಲಿ ಅನಧಿಕೃವಾಗಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್ ಗಳ ನಿಯಂತ್ರಣಕ್ಕಾಗಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಸೂಕ್ತವಾದ ಪ್ರಮಾಣಿತ ಕಾರ್ಯಾಚರಣೆಯ ವಿಧಾನ(SOP)ವನ್ನು ಹೊರಡಿಸಲಾಗುವುದು. ಅದರಂತೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅನಧಿಕೃತ ಜಾಹೀರಾತುಗಳು ಅಳವಡಿಸುವುದನ್ನು ಪರಣಾವಕಾರಿಯಾಗಿ ನಿಯಂತ್ರಿಸಲು ನಿರ್ದೇಶನ ನೀಡಿದರು.
ಫ್ಲೆಕ್ಸ್/ಬ್ಯಾನರ್ (Flex/Banner) ಫ್ರಿಂಟಿಂಗ್ ಯುನಿಟ್ಸ್ ಗಳಿಗೆ ಎಚ್ಚರಿಕೆ:
ಪಾಲಿಕೆ ವ್ಯಾಪ್ತಿಯ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಫ್ರಿಂಟಿಂಗ್ ಯುನಿಟ್ಸ್ ಗಳ ಪಟ್ಟಿ ಮಾಡಿಕೊಂಡು ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಸಹಯೋಗದೊಂದಿಗೆ ಎಲ್ಲಾ ಫ್ರಿಂಟಿಂಗ್ ಯುನಿಟ್ಸ್ ಗಳಿಗೆ ಭೇಟಿ ನೀಡಿ ಯಾವುದೇ ಕಾರಣಕ್ಕೂ ಅನಧಿಕೃತ ಜಾಹೀರಾತುಗಳನ್ನು ಮುದ್ರಿಸದಂತೆ ಎಚ್ಚರಿಕೆ ನೀಡಬೇಕು. ಪಾಲಿಕೆಯಿಂದ ಅನುಮತಿಯಿಲ್ಲದೆ ಯಾವದೇ ಅನಧಿಕೃತ ಜಾಹೀರಾತುಗಳನ್ನು ಮುದ್ರಿಸಿದಲ್ಲಿ ಅದನ್ನು ವಶಪಡಿಸಿಕೊಂಡು, ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ರಾತ್ರಿ ವೇಳೆ ಗಸ್ತು ತಿರುಗುವ ಮೂಲಕ ನಿಗಾ:
ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಮೇಲೆ ನಿಗಾ ವಹಿಸಲು ವಲಯಕ್ಕೊಂದು ಪ್ರಹರಿ ವಾಹನವನ್ನು ನಿಯೋಜಿಸಲಾಗುತ್ತಿದೆ. ಈ ಸಂಬಂಧ ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳೂ ರಾತ್ರಿ ವೇಳೆ ಗಸ್ತು ತಿರುಗಲಿದ್ದು, ಈ ವೇಳೆ ಪೊಲೀಸ್ ಇಲಾಖೆಯಿಂದಲೂ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ ಗಳನ್ನು ಅಳವಡಿಸುವ ಮೇಲೆ ನಿಗಾವಹಿಸಲು ಮನವಿ ಮಾಡಿದರು.
ಪೊಲೀಸ್ ಠಾಣಾವಾರು ನೋಡಲ್ ಅಧಿಕಾರಿ ನಿಯೋಜನೆ:
ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳ ನಿಯಂತ್ರಣಕ್ಕಾಗಿ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣಾವಾರು ಪಾಲಿಕೆಯಿಂದ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಬೇಕು. ಇದರಿಂದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜೊತೆ ಸಮನ್ವಯ ಸಾಧಿಸಲು ಅನುಕೂಲವಾಗಲಿದೆ. ಆದ್ದರಿಂದ ಕೂಡಲೆ ಪೊಲೀಸ್ ಠಾಣಾವಾರು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡಲು ವಲಯ ಆಯುಕ್ತರಿಗೆ ಸೂಚನೆ ನೀಡಲಾಯಿತು.
1533ಗೆ ಕರೆ ಮಾಡಿ ಮಾಹಿತಿ ಕೊಡಿ:
ನಗರದಲ್ಲಿ ಅನಧಿಕೃತ ಫ್ಲೆಕ್ಸ್/ಬ್ಯಾನರ್ ಗಳನ್ನು ಅಳವಡಿಸುವುದು ಕಂಡುಬಂದರೆ ಪಾಲಿಕೆಯ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ಮಾಹಿತಿ ನೀಡಬಹುದೆಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಫ್ಲೆಕ್ಸ್, ಬ್ಯಾನರ್ ಗಳಿಗಾಗಿ ಅಫ್ಲಿಕೆಷನ್:
ನಗರದಲ್ಲಿ ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್ ಗಳಿಗೆ ಸಂಬಂಧಿಸಿದಂತೆ ಪಾಲಿಕೆ ವತಿಯಿಂದ ಅಫ್ಲಿಕೇಷನ್ ಅನ್ನು ಸಿದ್ದಪಡಿಸಲು ಚಿಂತನೆ ನಡೆಸಲಾಗಿದೆಯೆಂದು ಕಂದಾಯ ವಿಭಾಗದ ವಿಶೇಷ ಆಯುಕ್ತರು ಸಭೆಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ದಯಾನಂದ್ ರವರು ಮಾತನಾಡಿ, ನಗರದ ಸಾರ್ವಜನಿಕ ಸ್ಥಳ, ಪ್ರಮುಖ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್ ಗಳಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಜೊತೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದೆಂದು ತಿಳಿಸಿದರು.
ಕರ್ನಾಟಕ ತೆರೆದ ಸ್ಥಳಗಳು ಕಾಯಿದೆ(ಕೆಒಪಿಡಿ) ಜೊತೆಗೆ ಇತರೆ ಕಾಯಿದೆ ಅಡಿಯಲ್ಲಿಯೂ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಗಳನ್ನು ಅಳವಡಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಅನಧಿಕೃತ ಜಾಹೀರಾತುಗಳಿಗೆ ಕಡಿವಾಣ ಹಾಕಲು ಪಾಲಿಕೆ ಜೊತೆ ಕೈ ಜೋಡಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಮಾತನಾಡಿ, ನಗರದಲ್ಲಿ 1ನೇ ಜುಲೈ 2024 ರಿಂದ ನಗರದಲ್ಲಿ ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್/ಬ್ಯಾನರ್ ಗಳ ಮೇಲೆ ನಿಗಾವಹಿಸಲಾಗುತ್ತಿದ್ದು, 8500ಕ್ಕೂ ಹೆಚ್ಚು ಫ್ಲೆಕ್ಸ್/ಬ್ಯಾನರ್ ಗಳನ್ನು ತೆರವುಗೊಳಿಸಿ 180ಕ್ಕೂ ಹೆಚ್ಚು ಎಫ್.ಐ.ಆರ್ ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಬಹುತೇಕವಾಗಿ ಅಳವಡಿಸಲಾಗುವ ಫೆಕ್ಸ್/ಬ್ಯಾನರ್ ಗಳು ಪರಿಸರ ಸಂರಕ್ಷಣಾ ಕಾಯಿದೆ 1986 ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳ ವಿರುದ್ಧವಿದ್ದು, ಇದು ಕಾನೂನು ಉಲ್ಲಂಘನೆಯಾಗಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಜಾಹೀರಾತು ಅಳವಡಿಸಲು ಪಾಲಿಕೆ ಕಾಯಿದೆ ಕಲಂ 158ರ ಅಡಿ ಪಾಲಿಕೆ ಅನುಮತಿಯು ಕಡ್ಡಾಯವಾಗಿದ್ದರೂ ಸಹ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳು, ಮೈದಾನ, ಪಾರ್ಕ್ಸ್, ರಸ್ತೆ ಮೀಡಿಯನ್ಸ್, ಪಾದಚಾರಿ ಮಾರ್ಗ, ಮೇಲುಸೇತುವೆ, ವಿದ್ಯುತ್ ಕಂಬಗಳ ಮೇಲೆ ಯಾವುದೇ ಅನುಮತಿಯಿಲ್ಲದೆ ಪ್ರದರ್ಶಿಸುತ್ತಿರುವುದರಿಂದ ಪಾಲಿಕೆ ಆದೇಶವನ್ನು ಉಲ್ಲಂಘನೆಯೆಂದು ಪರಿಗಣಿಸಿ ಪಾಲಿಕೆ ಕಾಯಿದೆ 326ರಡಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ವಲಯ ಆಯುಕ್ತರುಗಳಾದ ಡಾ. ಆರ್.ಎಲ್ ದೀಪಕ್, ರಮೇಶ್, ಶಿವಾನಂದ್ ಕಪಾಶಿ, ರಮ್ಯಾ, ಸ್ನೇಹಲ್, ವಿನೋತ್ ಪ್ರಿಯಾ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ರಮನ್ ಗುಪ್ತಾ, ಎಸಿಪಿಗಳು, ಡಿಸಿಪಿಗಳು, ಜಾಹೀರಾತು ವಿಭಾಗದ ಉಪ ಆಯುಕ್ತರು, ಸಹಾಯಕ ಆಯುಕ್ತರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.