ಕೋಲಾರ: ವಾಹನಗಳಲ್ಲಿನ ಬ್ಯಾಟರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಐನಾತಿ ಕಳ್ಳರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ
ಕದ್ದ ಬ್ಯಾಟರಿಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿರುವುದಾಗಿ ಬಂಧಿತರು ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗುತ್ತಿದ್ದ ವಾಹನಗಳಲ್ಲಿ ಬ್ಯಾಟರಿಗಳನ್ನು ಕದ್ದು ಈ ಕಳ್ಳರ ತಂಡ ಗುಜರಿ ಅಂಗಡಿಗಳವರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಲ್ ಇನ್ಸ್ ಫೆಕ್ಟರ್ ಲೋಕೇಶ್ ಮತ್ತು ತಂಡ ಬ್ಯಾಟರಿ ಕಳ್ಳರಿಗೆ ಬಲೆ ಬೀಸಿ ಬಂಧಿಸಿದ್ದು ಬಂಧಿತರನ್ನು ಕೋಲಾರದ ಮಹಾಲಕ್ಷ್ಮೀ ಬಡಾವಣೆಯ ನವೀದ್ ಅಲಿ ಖಾನ್ ˌ ರಾಜಾ ನಗರ ನಿವಾಸಿ ಶಹಭಾಸ್ ಪಾಷಾ, ದರ್ಗಾ ಮೊಹಲ್ಲಾದ ನಿವಾಸಿ ಸೈಯದ್ ಆಫ್ರಿತ್ ಎಂದು ಗುರುತಿಸಲಾಗಿದೆ. ಇವರಿಂದ ಸುಮಾರು ಮೂರು ಲಕ್ಷ ಬೆಲೆ ಬಾಳುವ 40 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ 29 ರಂದು ಸರ್ಕಲ್ ಇನ್ಸ್ ಫೆಕ್ಟರ್ ಲೋಕೇಶ್ ಮತ್ತವರ ತಂಡ ರಾತ್ರಿ ಗಸ್ತಿನಲ್ಲಿದ್ದಾಗ ಅರಹಳ್ಳಿ ಮಾರ್ಗದಲ್ಲಿ ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ವಾಹನದಲ್ಲಿ ಮೂರು ಮಂದಿ ಆಸಾಮಿಗಳು ಬ್ಯಾಟರಿಗಳನ್ನು ಹೊತ್ತೊಯ್ಯುತ್ತಿದ್ದನ್ನು ಕಂಡು ಪ್ರಶ್ನಿಸಿ ತನಿಖೆ ನಡೆಸಿದಾಗ ಇವರು ಬ್ಯಾಟರಿ ಕಳ್ಳತನ ಮಾಡಿ ನಗರದ ಗುಜರಿ ಅಂಗಡಿಯೊಂದಕ್ಕೆ ನೀಡುತ್ತಿರುವ ಕುರಿತು ಮಾಹಿತಿ ದೊರೆತಿದೆ.
ಇದೇ ತಂಡವು ಮತ್ತೊಂದು ಪ್ರಕರಣದಲ್ಲಿ ಶಹಿನ್ ಷಾ ನಗರದ ಇರ್ಫಾನ್ ಶಹೀಂ ರವರಿಂದ ಸುಮಾರು ಒಂದೂವರೆ ಲಕ್ಷ ಮೌಲ್ಯದ 10 ಮೊಬೈಲ್ ಗಳನ್ನು ಕಳ್ಳತನ ಮಾಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ.
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್, ಪೋಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.