ಕಲಬುರಗಿಯಲ್ಲಿ ಅ.27 ರಂದು ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿಯಲ್ಲಿ “ಒಳಗೆ ಸುಳಿವ ಆತ್ಮ” ಕುರಿತ ವಿಷಯ ಮಂಡನೆ ಮಾಡುವ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಹಲವಾರು ಸಂದೇಹಗಳನ್ನು ಸ್ತ್ರೀವಾದಿ ನೆಲೆಯಲ್ಲಿ ನಿಂತು ವಿನಯಾ ಒಕ್ಕುಂದರವರು ವ್ಯಕ್ತಪಡಿಸಿರುವುದು ವರದಿಯಾಗಿದೆ. ಇವರ ಮಾತಿನ ಕ್ರಿಯೆಗೆ ಪ್ರತಿಕ್ರಿಯಿಸಲು, ಚರ್ಚೆ ನಡೆಸಲು ಕನ್ನಡ ಪ್ಲಾನೆಟ್ ವೇದಿಕೆ ನೀಡುತ್ತಿದೆ. ಈ ಆರೋಗ್ಯಕರ ಚರ್ಚೆಯಲ್ಲಿ ನೀವೂ ಭಾಗವಹಿಸಿ. ಮೊದಲಿಗೆ ರಾಜಕೀಯ ವಿಶ್ಲೇಷಕ ಶಶಿಕಾಂತ ಯಡಹಳ್ಳಿಯವರು ಬರೆದಿದ್ದಾರೆ.
ಒಂದಂತೂ ಸತ್ಯ. ಮನುಕುಲದ ಚರಿತ್ರೆಯಲ್ಲಿ ಲಿಂಗ ಸಮಾನತೆಯ ಕುರಿತು ಬಸವಾದಿ ಶರಣರ ನೀತಿ ನಿರ್ಧಾರಗಳು ಅದ್ಭುತ ಅನನ್ಯವಾದರೂ ಪ್ರಶ್ನಾತೀತವೇನಲ್ಲ. ಆದರೆ ಪ್ರಶ್ನಿಸುವ ಕಾಲ ಇದಲ್ಲ.
ಮಾನವತಾವಾದಿ ಬಸವಣ್ಣನಂತಹ ಬಸವಣ್ಣನವರಿಗೂ ಪುರುಷ ಅಹಂಕಾರವನ್ನು ಇಳಿಸಿಕೊಳ್ಳಲು ಅಸಾಧ್ಯವಾಗಿತ್ತಾ? ಅಷ್ಟು ಗಟ್ಟಿಯಾಗಿ ಗಂಡಸುತನದ ಗರ್ವವನ್ನು ಕಳೆದುಕೊಳ್ಳುವುದು ಬಸವಣ್ಣನವರಿಗೂ ಸುಲಭವಾಗಿರಲಿಲ್ವಾ? ಬಸವಣ್ಣನವರು ಹೆಣ್ಣನ್ನು ದೇಹವಾಗಿ ನೋಡುವ ಶಾಪದಿಂದ ಮುಕ್ತರಾಗಿರಲಿಲ್ವಾ? ಸ್ತ್ರೀಪರ ನಿಲುವನ್ನು ಹೊಂದಿರುವ ಅವರಿಗೂ ಪರಂಪರಾಗತವಾದ ರೋಗಗ್ರಸ್ತ ಚಿಂತನೆಯಿಂದ ಹೊರ ಬರುವುದು ಬಹಳ ಕಠಿಣವಾಗಿತ್ತಾ? ಶರಣ ಸಂಸ್ಕೃತಿಯಲ್ಲಿ ಹೊರಗಿನ ಆವರಣ ಬದಲಾದಂತೆ ಕಾಣುತ್ತಿದ್ದರೂ ಒಳಗಿನ ಅಂತರಂಗದಲ್ಲಿ ಹೆಣ್ಣಿನ ಬಗ್ಗೆ ದೊಡ್ಡ ಬದಲಾವಣೆ ಘಟಿಸದೇ ಹೋಯ್ತಾ? ವಚನ ಚಳುವಳಿಯಲ್ಲಿ ಹೆಣ್ಣಿನ ಕುರಿತ ಆದರ್ಶ ಮತ್ತು ಮಾನವೀಯತೆಯ ಮಾತುಗಳು ಬದುಕಿನಲ್ಲಿ ಅನುಸಂಧಾನ ಮಾಡಲು ಬಸವಣ್ಣನೂ ಸೇರಿ ವಚನಕಾರರಿಗೆ ಕಷ್ಟವಾಗಿತ್ತಾ?
ಹೀಗೆ ಬಸವಣ್ಣನವರ ಕುರಿತು ಹಲವಾರು ಸಂದೇಹಗಳನ್ನು ಸ್ತ್ರೀವಾದಿ ನೆಲೆಯಲ್ಲಿ ನಿಂತು ವಿನಯಾ ಒಕ್ಕುಂದರವರು ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಅ.27 ರಂದು ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿಯಲ್ಲಿ “ಒಳಗೆ ಸುಳಿವ ಆತ್ಮ” ಕುರಿತ ವಿಷಯ ಮಂಡನೆ ಮಾಡುವ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಪ್ರಜಾವಾಣಿಯಲ್ಲಿ ವರದಿ ಪ್ರಕಟಗೊಂಡಿದೆ. ಸಾಹಿತಿ ವಿನಯಾ ಒಕ್ಕುಂದರವರ ಮಾತಿನ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡವು. ಹಲವರಲ್ಲಿದ್ದ ಬಸವಣ್ಣನವರ ಪರವಾದ ಅಭಿಮಾನ, ಆರಾಧನಾ ಭಾವ ಹಾಗೂ ಪುರುಷಹಂಕಾರಗಳೂ ಜಾಗೃತವಾದವು.
ಹೀಗೆ ಬಸವಣ್ಣನವರು ತರ್ಕಕ್ಕೆ ಒಳಗಾದಷ್ಟೂ ಗಟ್ಟಿಗೊಳ್ಳುತ್ತಾ ಹೋಗುತ್ತಾರೆ. ಸಂವಾದಗಳು ಹೆಚ್ಚಾದಷ್ಟೂ ವಚನಕಾರರು ಜನರಿಗೆ ಹತ್ತಿರವಾಗುತ್ತಾರೆ. ಪ್ರಶ್ನೆಗಳು ವೈಚಾರಿಕ ಚಲನಶೀಲತೆಯನ್ನುಂಟು ಮಾಡುತ್ತವೆ. ಇಲ್ಲದೇ ಹೋದರೆ ಬಸವಣ್ಣ ಕೂಡಾ ಪ್ರಶ್ನಾತೀತ ಆರಾಧನೀಯ ದೇವರಾಗಿ ಸ್ಥಾಪಿತವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ವಚನಕಾರರ ಬಗ್ಗೆ ವಿಮರ್ಶೆಗಳು ಇರಲಿ. ಅವರ ಒಲವು ನಿಲುವುಗಳ ಬಗ್ಗೆ ವಸ್ತುನಿಷ್ಠ ವಿಶ್ಲೇಷಣೆಗಳು ಬರಲಿ. ಸಂದೇಹಗಳೇ ಇಲ್ಲದಿದ್ದರೆ ಸಂವಾದ ಆಗುವುದಾದರೂ ಹೇಗೆ? ಪ್ರಶ್ನಿಸದೇ ಇದ್ದರೆ ವೈಚಾರಿಕ ಪ್ರಜ್ಞೆ ಬೆಳೆಯುವುದಾದರೂ ಹೇಗೆ? ವಿನಯಾ ಒಕ್ಕುಂದರವರು ಪುರುಷ ವಚನಕಾರರ ಪುರುಷಹಂಕಾರದ ಕುರಿತು ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದರಲ್ಲಿ ತಪ್ಪೇನೂ ಇಲ್ಲ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ. ಅವರ ವಾದಕ್ಕೆ ಪ್ರತಿಯಾಗಿ ತಾರ್ಕಿಕವಾಗಿ ಪ್ರತಿವಾದವನ್ನು ಮಂಡಿಸಬಹುದಾಗಿದೆ.
12 ನೇ ಶತಮಾನದ ವಚನ ಚಳುವಳಿಯ ಸಂದರ್ಭವನ್ನು 21 ನೇ ಶತಮಾನದ ದೃಷ್ಟಿ ಕೋನದಲ್ಲಿ ವಿಶ್ಲೇಷಿಸುವುದು ಅಷ್ಟೊಂದು ಸಮಂಜಸವಾಗದು. ಯಾಕೆಂದರೆ ಪುರೋಹಿತಶಾಹಿಗಳ ಹಿಡಿತದಲ್ಲಿ ನಲುಗಿಹೋದ ಆ ಕಾಲದ ಸಾಮಾಜಿಕ ಪರಿಸ್ಥಿತಿಯೇ ಬೇರೆ, ಲಿಂಗ ಸಮಾನತೆಯನ್ನು ಸಂವಿಧಾನಾತ್ಮಕವಾಗಿ ಮಾನ್ಯಮಾಡಿದ ಇವತ್ತಿನ ಸಾಮಾಜಿಕ ಸ್ಥಿತಿಗತಿಯೇ ಬೇರೆ. ಎರಡೂ ಕಾಲಘಟ್ಟಗಳ ಸ್ಥಿತಿಗತಿಗಳನ್ನು ಅವಲೋಕಿಸುತ್ತಲೇ ಪ್ರಶ್ನೆಗಳನ್ನು ಎತ್ತಬೇಕಾಗಿದೆ.
“ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವ ಸನಾತನಿಗಳ ಕಾಲಘಟ್ಟದಲ್ಲಿ ಸ್ತ್ರೀ ಸಮಾನತೆಯತ್ತ ದಿಟ್ಟ ಹೆಜ್ಜೆ ಇಟ್ಟ ಬಸವಾದಿ ಶರಣರನ್ನು ಸ್ತ್ರೀಕುಲ ಎಂದೂ ಮರೆಯಲಾಗದು, ಮರೆಯಬಾರದು. ಶೂದ್ರ ದಲಿತರಂತೆಯೇ ಮಹಿಳೆಯರಿಗೂ ಅಕ್ಷರ ವಿದ್ಯೆ ನಿರ್ಬಂಧಿಸಿದ ಕಾಲಘಟ್ಟದಲ್ಲಿ ದುಡಿಯುವ ವರ್ಗದವರ ಜೊತೆಗೆ ಮಹಿಳೆಯರಿಗೂ ಅಕ್ಷರ ಕಲಿಕೆಗೆ ಅವಕಾಶವನ್ನೂ ಒದಗಿಸಿ ವಚನಗಳನ್ನು ರಚಿಸಿ ವಾಚಿಸುವ ಪರಿಸರವನ್ನು ನಿರ್ಮಿಸಿದ ಬಸವಣ್ಣನವರನ್ನು ಅಭಿನಂದಿಸಲೇಬೇಕಿದೆ. ಲಿಂಗ ಸಮಾನತೆಯನ್ನು ಸಾರುವ ಅನುಭವ ಮಂಟಪದ ಪರಿಕಲ್ಪನೆಯೇ ಅದ್ಭುತವಾದದ್ದು. ಪುರುಷ ಪ್ರಧಾನ ಸಮಾಜದಲ್ಲಿ ಬಳಸಿ ಬಿಸಾಕಿ ನಿಕೃಷ್ಟವಾಗಿ ಪರಿಗಣಿಸುವ ವೇಶ್ಯೆಯರಿಗೂ ಸಹ ಅನುಭವ ಮಂಟಪದಲ್ಲಿ ಪ್ರವೇಶ ದೊರಕಿಸಿದ, ಅವರು ರಚಿಸಿದ ವಚನಗಳನ್ನು ಗೌರವಾದರಗಳಿಂದ ಸ್ವೀಕರಿಸಿದ ಮತ್ತೊಂದು ಉದಾಹರಣೆ ಚರಿತ್ರೆಯಲ್ಲೂ ಇಲ್ಲ, ವರ್ತಮಾನದಲ್ಲೂ ಕಂಡಿಲ್ಲ.
ಮನುಕುಲದ ಚರಿತ್ರೆಯಲ್ಲಿಯೇ ಸ್ತ್ರೀ ಸಮಾನತೆಯನ್ನು ಸಾರಿ ಅನುಷ್ಟಾನಕ್ಕೆ ತಂದ ಬಸವಣ್ಣನವರಿಗೂ ಪುರುಷಹಂಕಾರ ಕಳೆದುಕೊಳ್ಳಲು ಸಾಧ್ಯವಾಗಲಿಲ್ಲವಾ? ಎನ್ನುವುದು ಈಗಿನ ಪ್ರಮುಖ ಪ್ರಶ್ನೆ. ಬಹುಷಃ ತಮ್ಮನ್ನು ತಾವೇ ವಿಮರ್ಶಿಸಿಕೊಳ್ಳುವುದರ ಮೂಲಕವೇ ಬಸವಣ್ಣನವರು ಹೆಚ್ಚು ಪ್ರಸ್ತುತವಾಗುತ್ತಾರೆ. “ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ. ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ. ನುಡಿಗೆ ತಕ್ಕ ನಡೆಯ ಕಂಡರೆ ಕೂಡಲ ಸಂಗಮನೊಳಗಿರ್ಪೆನಯ್ಯಾ” ಎಂದು ವಚನದ ಮೂಲಕವೇ ತಮ್ಮದೇ ನಡೆ ನುಡಿಗಳನ್ನು ಪ್ರಶ್ನಿಸಿಕೊಳ್ಳುವ ಕ್ರಿಯೆ ವೈಚಾರಿಕ ಸೃಷ್ಟಿಗೆ, ಆತ್ಮಾವಲೋಕನದ ದೃಷ್ಟಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಬಸವಣ್ಣನವರನ್ನು ಆರಾಧನಾ ದೃಷ್ಟಿಕೋನದಲ್ಲಿ ನೋಡಿದಾಗ ಅವರು ಪರಿಪೂರ್ಣತೆಯ ಸಂಕೇತವಾಗಿ ಕಾಣಬಹುದು. ಆದರೆ ಬಸವಣ್ಣನವರೂ ಸಹ ಮನುಷ್ಯ ಸಹಜ ಭಾವನೆಗಳಿಗೆ ಹೊರತಲ್ಲ ಎನ್ನುವುದನ್ನು ಅರಿಯಲೇಬೇಕು. ರಾಗ, ದ್ವೇಷ, ಮೋಹಪಾಶ ಗಳೆಲ್ಲವನ್ನೂ ಮೀರಿ ನಿಲ್ಲುವ ಅವರ ಪ್ರಯತ್ನ ಇದೆಯಲ್ಲಾ ಅದು ಮಾದರಿಯಾಗಿದೆ. ಗಂಡಿಗೆ ಹೆಣ್ಣಿನತ್ತ, ಹೆಣ್ಣಿಗೆ ಗಂಡಿನತ್ತ ಇರುವ ಆಕರ್ಷಣೆ ಪ್ರಕೃತಿ ದತ್ತವಾದದ್ದು. ಆದರೆ ಹೆಣ್ಣನ್ನು ಮಾಯೆ ಎಂದೂ, ಅದರಿಂದ ದೂರವೇ ಇರಬೇಕೆಂದೂ ಸನಾತನವಾದಿಗಳು ಆಗಿನಿಂದ ಈಗಿನವರೆಗೂ ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಈ ಮಾಯೆಯ ಪರಿಧಿಯನ್ನೇ ಬಸವಣ್ಣ ಪ್ರಶ್ನಿಸುತ್ತಾರೆ.
“ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವ ಪರಿಯಲ್ಲಿ ಕಾಡಿತ್ತು ಮಾಯೆ, ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ, ನೀವೇ ಬಲ್ಲಿರಿ ಕೂಡಲಸಂಗಮದೇವಾ.”
ಈ ವಚನದಲ್ಲಿ ಯಾವ ಹೆಣ್ಣನ್ನು ಮಾಯೆ ಎಂದು ಜರೆಯಲಾಗುತ್ತಿತ್ತೋ ಅಂತಹ ಮಾಯೆ ತಾಯಿಯಾಗಿ, ಮಗಳಾಗಿ, ಸಂಗಾತಿಯಾಗಿ ಜೊತೆಯಾಗುತ್ತಾಳೆ. ಅಂತಹ ಮಮಕಾರದ ಮಾಯೆಯಿಂದ ದೂರಾಗುವುದು ಸಾಧ್ಯವಿಲ್ಲ. ಹೀಗಾಗಿ ಮಾಯೆ ಎಂದರೆ ವೈದಿಕಶಾಹಿಗಳು ಹೇಳುವಂತೆ ಸಾಧನೆಗೆ ಸಂಚಕಾರ ತರುವುದಲ್ಲ, ಬದುಕಿನ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಮಾಯೆ ಶಬ್ದಕ್ಕೆ ಹೊಸ ಅರ್ಥವನ್ನೂ, ಸ್ತ್ರೀಪರ ನಿಲುವಿಗೆ ಹೊಸ ಭಾಷ್ಯವನ್ನೂ ಬರೆಯುತ್ತಾರೆ. ಪುರುಷಹಂಕಾರ ಇರುವ ಯಾರೂ ಸಹ ಈ ರೀತಿ ವಚನ ಬರೆಯಲು ಸಾಧ್ಯವೂ ಇಲ್ಲ.
ಆದರೂ ಬಸವಣ್ಣನವರಿಗೆ ಗಂಡಸುತನದ ಗರ್ವ ಇತ್ತು ಎನ್ನುವ ಪ್ರಶ್ನೆ ಇದೆ. ಯಾವುದೋ ವಚನದ ಸಾಲುಗಳನ್ನು ಇಟ್ಟುಕೊಂಡು ಬಸವಣ್ಣನವರ ಸ್ರ್ತೀಪರ ನಿಲುವನ್ನು ಪ್ರಶ್ನಿಸುವುದು ಅಷ್ಟೊಂದು ಸಮಂಜಸವಾಗದು. “ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ..” ಎಂಬುದು ಬಸವಣ್ಣ ನವರ ವಚನದ ಸಾಲುಗಳು. ತನ್ನ ಪತ್ನಿಯನ್ನು ಚೆಲುವೆ ಎನ್ನುವುದರಲ್ಲಿ ಅದ್ಯಾವ ಸ್ತ್ರೀ ದೇಹ ಮೋಹವನ್ನು ಹುಡುಕಲು ಸಾಧ್ಯ?. ಚೆಲುವು ಎನ್ನುವುದು ಬರೀ ದೇಹ ಸೌಂದರ್ಯವೇ ಆಗಿರಬೇಕೆಂದೇನಿಲ್ಲ. ಅಂತರಂಗದ ಸೌಂದರ್ಯ, ವೈಚಾರಿಕ ಪ್ರಜ್ಞೆಯೂ ಆಗಿರಬಹುದಾದ ಸಾಧ್ಯತೆಯೂ ಇದೆ. ಸ್ರ್ತೀಯನ್ನು ದೇಹ ಕೇಂದ್ರಿತವಾಗಿ ಬಸವಣ್ಣನವರು ಪರಿಗಣಿಸಿದ್ದರು ಎನ್ನುವುದನ್ನು ಒಪ್ಪುವುದು ಕಷ್ಟಸಾಧ್ಯ. ತನ್ನ ಪತ್ನಿಗೆ ಚಾಂಡಾಲಗಿತ್ತಿ ಎಂದು ವಚನವೊಂದರಲ್ಲಿ ಹೇಳಿದ ಪದವನ್ನೇ ಇಟ್ಟುಕೊಂಡು ಬಸವಣ್ಣ ಸ್ತ್ರೀ ವಿರೋಧಿ ಎಂದು ಹೇಳುವುದು ಅಸಮಂಜಸ. ವಚನವೊಂದರ ಸಾರ ಮತ್ತು ಸಂದರ್ಭ ಹಾಗೂ ಅದು ಧ್ವನಿಸುವ ವಿಷಯವನ್ನು ಗ್ರಹಿಸದೇ ಶಬ್ದಾರ್ಥಕ್ಕೆ ಮಾತ್ರ ಸೀಮಿತವಾದರೆ ತಪ್ಪು ಗ್ರಹಿಕೆಯಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ಅಲ್ಲಮಪ್ರಭುಗಳೂ ಸೇರಿದಂತೆ ಕೆಲವಾರು ವಚನಕಾರರು ಹೊನ್ನು ಮಣ್ಣಿನ ಜೊತೆಗೆ ಹೆಣ್ಣನ್ನೂ ಸೇರಿಸಿ ವಚನಿಸಿದ್ದಾರೆ. “ಹೊನ್ನು ಹೆಣ್ಣು ಮಣ್ಣೆಂಬ ಬಲೆಯಲಿ ಬಿದ್ದವರು ಅತ್ತಲಾರು ಬಲ್ಲರೋ? ಗುಹೇಶ್ವರಾ” ಎಂದು ಅಲ್ಲಮರು ಕೇಳುತ್ತಾರೆ. ಹಾಗಾದಾಗ ಅಲ್ಲಮರನ್ನು ಹೆಣ್ಣನ್ನೂ ಹೊನ್ನು ಮಣ್ಣಿನ ಹಾಗೇ ಬಳಕೆಯ ವಸ್ತುವೇ ಎಂದು ಪ್ರಶ್ನಿಸಬಹುದಾಗಿದೆ. ಆದರೆ “ಹೆಣ್ಣು ಹೊನ್ನು ಮಣ್ಣು ಈ ಮೂರೂ ಮಾಯೆಯಲ್ಲ ಮನದ ಮುಂದಿನ ಆಶಯವೇ ಮಾಯೆ ಕಾಣಾ ಗುಹೇಶ್ವರಾ” ಎಂದು ಶೂನ್ಯಪೀಠಾಧ್ಯಕ್ಷರು ಸಮರ್ಥನೆಯನ್ನೂ ಕೊಡುತ್ತಾರೆ. ಹೀಗಾಗಿ ಯಾವುದೋ ಒಂದು ವಚನವನ್ನು ಇಲ್ಲವೇ ವಚನದ ಸಾಲು ಪದಗಳನ್ನು ಇಟ್ಟುಕೊಂಡು ವಚನಕಾರರನ್ನು ಮೌಲ್ಯಮಾಪನ ಮಾಡುವುದಕ್ಕಿಂತ ಅವರ ಸಮಗ್ರ ವಚನಗಳ ಸಾರವನ್ನು ಹೀರಿ ಶರಣರ ಆಶಯವನ್ನು ಅರ್ಥಮಾಡಿಕೊಳ್ಳುವುದು ಅರಿವಿನ ವಿಸ್ತರಣೆಯ ದೃಷ್ಟಿಯಿಂದ ಆರೋಗ್ಯಕರ.
ತನ್ನ ಅಕ್ಕನಿಗೆ ದಕ್ಕದ ಜನಿವಾರ ತನಗೂ ಬೇಡವೆಂದು ಜನಿವಾರದ ಜೊತೆ ಜಾತಿಯನ್ನೂ ನಿರಾಕರಿಸಿದ ಬಸವಣ್ಣನವರನ್ನೂ ಪುರುಷಹಂಕಾರ ಬಿಡಲಿಲ್ಲ ಎಂಬುದು ಚರ್ಚಾರ್ಹ ಸಂಗತಿ.
12 ನೇ ಶತಮಾನದ ಕಾಲಘಟ್ಟದಂತೆಯೇ ಈಗ ಪುರೋಹಿತಶಾಹಿಗಳು ಹಿಂದುತ್ವದ ಮುಖವಾಡ ತೊಟ್ಟು ಮತ್ತೆ ಪ್ರಭಾವಶಾಲಿಯಾಗುತ್ತಿದ್ದಾರೆ. ಆಗ ಸನಾತನಿಗಳು ಪೌರೋಹಿತ್ಯದ ಮೂಲಕ ಪ್ರಭುತ್ವವನ್ನು ನಿಯಂತ್ರಿಸುತ್ತಿದ್ದರು. ಆದರೆ ಈಗ ಈ ಪುರೋಹಿತಶಾಹಿ ಮನಸ್ಥಿತಿಯವರು ಪ್ರಭುತ್ವವೇ ಆಗಿದ್ದಾರೆ. ವೈದಿಕಶಾಹಿಗೆ ತೀವ್ರ ಪ್ರತಿರೋಧ ಒಡ್ಡಿದ ಬಸವಾದಿ ಶರಣರ ಕುರಿತು ಅಪಪ್ರಚಾರವನ್ನು ಆರಂಭಿಸಿದ್ದಾರೆ. ಕೆಲವು ಸನಾತನಿಗಳು ವಚನ ದರ್ಶನದಂತಹ ವಿಕೃತ ಕೃತಿಗಳನ್ನು ರಚಿಸಿ ಬಸವಣ್ಣನವರನ್ನು ಹಿಂದುತ್ವವಾದಿಯನ್ನಾಗಿ ಬಿಂಬಿಸಲೂ ಪ್ರಯತ್ನಿಸುತ್ತಿದ್ದಾರೆ. ಶರಣರ ವಚನಗಳ ಮೇಲೆ ಅಪನಂಬಿಕೆಗಳನ್ನು ಹುಟ್ಟಿಸುತ್ತಿದ್ದಾರೆ. ಹಿಂದೂ ರಾಷ್ಟ್ರ ಸ್ಥಾಪನೆಯ ಮೂಲಕ ಮನುಸ್ಮೃತಿ ಆಧಾರಿತ ವರ್ಣಾಶ್ರಮ ವ್ಯವಸ್ಥೆಯನ್ನು ಮತ್ತೆ ಮರುಸ್ಥಾಪಿಸಲು ವ್ಯವಸ್ಥಿತ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದಾರೆ. ದುಷ್ಟ ಆಲೋಚನೆಯ ಕ್ಲಿಷ್ಟಕರ ಸಂದರ್ಭದಲ್ಲಿ ಪ್ರಗತಿಪರರು ಎನ್ನಿಸಿಕೊಂಡವರು ಬಸವಾದಿಶರಣರನ್ನು ಪ್ರಶ್ನಿಸಲು ಆರಂಭಿಸಿದರೆ ಅದು ಸನಾತನಿಗಳ ಕೈಗೆ ಅಸ್ತ್ರವನ್ನು ಕೊಟ್ಟಂತಾಗುತ್ತದೆ. ಬಸವಣ್ಣನವರ ಕುರಿತ ವಾದವಿವಾದಗಳನ್ನೇ ಆಧರಿಸಿ ಬಸವ ವಿರೋಧಿ ಸಂಕಥನವನ್ನು ಸನಾತನಿಗಳು ಪ್ರಚಾರ ಪಡಿಸುವ ಸಾಧ್ಯತೆಗಳಿವೆ. “ನೋಡಿ ಬಸವಾದಿ ಶರಣರ ವಚನಗಳಲ್ಲೇ ಪುರುಷಪ್ರಧಾನತೆ ಇದೆ, ಕೇವಲ ಸನಾತನಿಗಳನ್ನು ಮಾತ್ರ ಯಾಕೆ ಆರೋಪಿಸುತ್ತೀರಿ” ಎಂದು ಹಿಂದುತ್ವವಾದಿಗಳು ಪ್ರಶ್ನಿಸದೇ ಇರಲಾರರು. ಇದಕ್ಕೆ ಯಾಕೆ ಅವಕಾಶ ಮಾಡಿಕೊಡಬೇಕು?
ಮತ್ತೆ ಪ್ರಭಾವಶಾಲಿಗಳಾಗುತ್ತಿರುವ ಪ್ರತಿಗಾಮಿ ಶಕ್ತಿಗಳನ್ನು ಎದುರಿಸಲು ಬಸವಾದಿ ಶರಣರ ವಚನಗಳೇ ನಮಗೆ ಪ್ರತ್ಯಾಸ್ತ್ರಗಳಾಗಿವೆ. ಪುರೋಹಿತಶಾಹಿಗಳಿಗೆ ಬಸವಾದಿ ಶರಣರು ಒಡ್ಡಿದ ಪ್ರತಿರೋಧವನ್ನು ಪ್ರಜ್ಞಾವಂತರು ಮುಂದುವರೆಸಿಕೊಂಡು ಹೋಗಬೇಕಿದೆ. ಬಸವಣ್ಣನವರಿಗೆ ಸಿದ್ಧ ಮಾದರಿಗಳಿರದೆ ತಾವೇ ವೈದಿಕಶಾಹಿಗಳನ್ನು ಎದುರಿಸುವ ಮಾರ್ಗಗಳನ್ನು ಹುಡುಕಬೇಕಾಯ್ತು. ವೇದಪುರಾಣಗಳಿಗೆ ಪ್ರತಿಯಾಗಿ ವಚನಗಳ ಅಸ್ತ್ರದ ಮೂಲಕ ಸಮಾನತೆಯ ದಾರಿ ಕಂಡುಕೊಳ್ಳಬೇಕಾಗಿತ್ತು.
ಆದರೆ ಈಗ ಮನುವಾದಿ ಸನಾತನಿಗಳನ್ನು ಎದುರಿಸಲು ವಚನ ಚಳುವಳಿಯ ಮಾದರಿ ಇದೆ. ಒಂದೊಂದು ವಚನಗಳೂ ಪ್ರತಿಗಾಮಿಗಳ ಬುಡಕ್ಕೆ ಬಾಂಬಿಡುವಂತಿವೆ. ವೈದಿಕಶಾಹಿ ವಿಚಾರ ಆಚಾರಗಳನ್ನು ನೇರವಾಗಿ ಪ್ರಶ್ನಿಸುವಂತಿವೆ. ಇಂತಹ ಸಂದರ್ಭದಲ್ಲಿ ನಮಗೆ ಸಿಕ್ಕಿರುವ ವಚನಾಸ್ತ್ರಗಳನ್ನು ಹಿಂದುತ್ವವಾದಿಗಳ ವಿರುದ್ದ ಪುರೋಗಾಮಿ ಶಕ್ತಿಯಾಗಿ ಬಳಸಬೇಕಿದೆ. ವೇದ ಪುರಾಣ ಆಗಮನ ಶಾಸ್ತ್ರಗಳ ಬೂಟಾಟಿಕೆಗಳನ್ನು ವಚನಗಳ ಸಹಾಯದಿಂದ ಬಯಲುಗೊಳಿಸಬೇಕಿದೆ. ನಾವು ನಾವೇ ವಚನಗಳ ಪದದೊಳಗಿನ ಅಪಾರ್ಥಗಳ ಕುರಿತು ಚರ್ಚಿಸುವ ಸಮಯ ಇದಲ್ಲ. ಮತೀಯ ಶಕ್ತಿಗಳು ಮನೆ ಮನಗಳಲ್ಲಿ ಸನಾತನತೆಯ ಬೀಜಗಳನ್ನು ಬಿತ್ತಿ ಪೋಷಿಸುತ್ತಾ ಮತ್ತೆ ದೇವರು ಧರ್ಮಗಳ ಹೆಸರಲ್ಲಿ ಭಾವಪ್ರಚೋದನೆಯ ಮೂಲಕ ಜನರನ್ನು ಮರುಳುಮಾಡುತ್ತಿರುವ ದುರಂತದ ಕಾಲದಲ್ಲಿ ಬಸವಣ್ಣನವರನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ.
ಒಂದಂತೂ ಸತ್ಯ. ಮನುಕುಲದ ಚರಿತ್ರೆಯಲ್ಲಿ ಲಿಂಗ ಸಮಾನತೆಯ ಕುರಿತು ಬಸವಾದಿ ಶರಣರ ನೀತಿ ನಿರ್ಧಾರಗಳು ಅದ್ಭುತ ಅನನ್ಯವಾದರೂ ಪ್ರಶ್ನಾತೀತವೇನಲ್ಲ. ಆದರೆ ಪ್ರಶ್ನಿಸುವ ಕಾಲ ಇದಲ್ಲ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ.
ಇದನ್ನೂ ಓದಿ – ವಿಶೇಷ | ಸೌತಡ್ಕ ಗಣಪತಿ ಗುಡಿ ಕಬಳಿಸಲು ನಡೆಯುತ್ತಿದೆ ಸಂಚು