ಸಾರ್ವಜನಿಕ ಸಮಾರಂಭದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ವಿಜಯಪುರದ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಯತ್ನಾಳ್ ವಿರುದ್ಧ ದೂರು ದಾಖಲಿಸಲಾಗಿದೆ. ಯತ್ನಾಳ್ ವಿರುದ್ಧ ವಿಜಯಪುರ ಪಾಲಿಕೆ ಸದಸ್ಯ ಪರುಶರಾರಂ ದೂರು ನೀಡಿದ್ದಾರೆ.
ಇದೇ 15 ರಂದು ವಿಜಯಪುರದಲ್ಲಿ ವಕ್ಫ್ ಕಾಯಿದೆ ವಿರೋಧಿಸಿ ವಕ್ಫ್ ಹಠಾವೋ ದೇಶ ಬಚಾವೋ ಎಂಬ ಪ್ರತಿಭಟನಾ ಸಮಾವೇಶವನ್ನು ಯತ್ನಾಳ್ ಹಮ್ಮಿಕೊಂಡಿದ್ದರು.ಈ ಪ್ರತಿಭಟನೆಯಲ್ಲಿ ವಿಜಯಪುರ ನಗರ ಶಾಸಕ ಯತ್ನಾಳ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಝಮೀರ್ ಅಹಮದ್ ಖಾನ್ ವಿರುದ್ಧ ಏಕ ವಚನದಲ್ಲಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಟೀಕಿಸಿದ್ದಾರೆ. ಈ ನಾಯಕರ ಕುಟುಂಬದ ಹೆಣ್ಣು ಮಕ್ಕಳ ವಿರುದ್ಧವೂ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇವರು ಮಹಿಳೆಯರನ್ನೂ ನಿಂದಿಸಿದ್ದಾರೆ. ಇವರ ಹೇಳಿಕೆಯಿಂದ ನಗರದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಇತರರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
ಈ ಸಭೆಯಲ್ಲಿ ಶಾಸಕ ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗಿದ್ದರು.
ಯತ್ನಾಳ್ ವಿರುದ್ಧ ದೂರು ದಾಖಲಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಬೆಂಗಳೂರು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ದೂರು ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಸರ್ಕಾರವನ್ನು ಅಸ್ಥಿರಗೊಳಿಸಲು 1000 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧವೂ ದೂರು ದಾಖಲಿಸಲಾಗಿದೆ.