ನವದೆಹಲಿ: ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ನೀತಿಯನ್ನು ಜಾರಿಗೊಳಿಸಬೇಕು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟ ಪ್ರತಿಭಟನೆಗೆ ಮುಂದಾಗಿದೆ. ದೇಶಾದ್ಯಂತ ಬ್ಯಾಂಕ್ ಉದ್ಯೋಗಿಗಳು ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡುವ ನೀತಿಯನ್ನು ಜಾರಿಗೊಳಿಸಬೇಕು ಎಂದು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿವೆ. ಈ ವರ್ಷದ ಅಂತ್ಯದೊಳಗೆ ಈ ನೀತಿಯನ್ನು ಜಾರಿಗೆ ತರಬೇಕು ಎಂದು ಅಂತಿಮ ಗಡುವು ನೀಡಿದ್ದೆವು. ಆದರೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟ ಮುಷ್ಕರಕ್ಕೆ ಮುಂದಾಗಿದೆ.
ದೇಶವ್ಯಾಪಿ ಪ್ರತಿಭಟನೆ ಆರಂಭಿಸಲು ಯೋಜನೆ ರೂಪಿಸುತ್ತಿದ್ದೇವೆ. ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆಯ (ಯುಎಫ್ಬಿಯು) ಎಲ್ಲಾ ಒಕ್ಕೂಟಗಳನ್ನು ಪೂರ್ವಭಾವಿ ಚರ್ಚೆಗೆ ಆಹ್ವಾನಿಸಿದ್ದೇವೆ ಎಂದು ಎಐಬಿಒಸಿ ಪ್ರಧಾನ ಕಾರ್ಯದರ್ಶಿ ರೂಪಮ್ ರಾಯ್ ತಿಳಿಸಿದ್ದಾರೆ.
ಭಾರತೀಯ ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ಓಲಾ ಸಿಇಒ ಭವೀಶ್ ಅಗರ್ವಾಲ್ ಮೊದಲಾದವರು ಸಲಹೆ ನೀಡುತ್ತಿರುವ ಬೆನ್ನಲ್ಲೇ ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಬ್ಯಾಂಕುಗಳಲ್ಲಿ ಸದ್ಯ ಪ್ರತೀ ಭಾನುವಾರ ನಿಯಮಿತ ರಜೆ ಇದೆ. ಜೊತೆಗೆ ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಒಳಗೊಂಡು ಎರಡು ರಜೆಗಳಿವೆ. ಈಗ ಪ್ರತಿ ಶನಿವಾರವನ್ನೂ ಖಾಯಂ ರಜಾ ದಿನವಾಗಿ ಘೋಷಣೆ ಮಾಡಬೇಕು ಎನ್ನುವುದು ಬ್ಯಾಂಕ್ ಉದ್ಯೋಗಿಗಳ ಒತ್ತಾಯವಾಗಿದೆ.