ಹೊಸದಿಲ್ಲಿ: ಬಾಂಗ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಅನುಸರಿಸಬೇಕಾದ ನೀತಿಯ ಕುರಿತಂತೆ ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನರೇಂದ್ರ ಮೋದಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ರಾಜಕೀಯ ಪಕ್ಷಗಳ ಈ ಸರ್ವಾನುಮತದ ಬೆಂಬಲವನ್ನು ವಿದೇಶಾಂಗ ಸಚಿವ ಜೈಶಂಕರ್ ಶ್ಲಾಘಿಸಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಮೂರು ಮುಖ್ಯ ಪ್ರಶ್ನೆಗಳನ್ನು ಜೈಶಂಕರ್ ಅವರ ಮುಂದಿಟ್ಟರು.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಮತ್ತು ಅಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೈಗೊಳ್ಳಲಿರುವ ರಾಜತಾಂತ್ರಿಕ ಕ್ರಮಗಳಿಗೆ ಸಂಬಂಧಿಸಿದಂತೆ ಅಲ್ಪಾವಧಿಯ ಯೋಜನೆಯೇನು ಮತ್ತು ದೀರ್ಘಾವಧಿಯ ನೀತಿಯೇನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವ ಜೈ ಶಂಕರ್, ಸರ್ಕಾರ ಬಾಂಗ್ಲಾ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದೆ. ಭಾರತ ಸರ್ಕಾರದ ಎಚ್ಚರಿಕೆಯ ನಡೆಗಳನ್ನು ಇಡಲಿದೆ ಎಂದರು.
ಬಾಂಗ್ಲಾದಲ್ಲಿ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾವುದಾದರೂ ವಿದೇಶೀ ಶಕ್ತಿಯ ಕೈವಾಡ ಇರಬಹುದೇ? ವಿಶೇವಾಗಿ ಪಾಕಿಸ್ತಾನದ ಸಂಚು ಇರಬಹುದೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಪಾಕಿಸ್ತಾನಿ ರಾಜತಾಂತ್ರಿಕರೊಬ್ಬರು ತಮ್ಮ ಸಾಮಾಜಿಕ ಜಾಲತಾಣದ ಡಿಸ್ಪ್ಲೇ ಚಿತ್ರವನ್ನು ಬಾಂಗ್ಲಾ ಹಿಂಸಾಚಾರದ ಘಟನಾವಳಿಗಳಿಗೆ ಅನುಗುಣವಾಗಿ ಬದಲಾಯಿಸುತ್ತ ಬಂದಿರುವುದು ನಮ್ಮ ಗಮನಕ್ಕೆ ಬಂದಿದೆ. ಏನಾದರೂ ದೊಡ್ಡ ಸಂಚು ನಡೆದಿರುವ ಸಾಧ್ಯತೆ ಇದೆಯೇ ಎಂದು ಭಾರತ ಸರ್ಕಾರ ಪರಿಶೀಲಿಸುತ್ತಿದೆ ಎಂದರು.
ಬಾಂಗ್ಲಾದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಭಾರತ ಸರ್ಕಾರ ಮೊದಲೇ ಊಹಿಸಿತ್ತೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದಾಗ, ಭಾರತ ಪರಿಸ್ಥಿತಿಯನ್ನು ಗಂಭೀರವಾಗಿ ಗಮನಿಸುತ್ತ ಬಂದಿದೆ ಎಂದಷ್ಟೇ ಉತ್ತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲ ವಿರೋಧಪಕ್ಷಗಳು ಬಾಂಗ್ಲಾ ಬಿಕ್ಕಟ್ಟಿನ ವಿಷಯದಲ್ಲಿ ಮೋದಿ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದವು.
ಸಭೆಯ ನಂತರ ವಿರೋಧಪಕ್ಷಗಳ ಬೆಂಬಲದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಜೈಶಂಕರ್, ವಿರೋಧಪಕ್ಷಗಳು ನೀಡಿದ ಬೆಂಬಲವನ್ನು ಶ್ಲಾಘಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಪಕ್ಷಗಳ ಮುಖಂಡರಿಗೆ ಬಾಂಗ್ಲಾ ದೇಶದ ಬೆಳವಣಿಗೆಗಳ ಕುರಿತು ಮಾಹಿತ ನೀಡಲಾಯಿತು. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸಿ ಭಾರತಕ್ಕೆ ಕರೆತರಬೇಕಾದ ಸಂದರ್ಭ ಸೃಷ್ಟಿಯಾದ ಕುರಿತೂ ವಿವರಿಸಲಾಯಿತು.
ಸದ್ಯಕ್ಕೆ ಭಾರತದಲ್ಲಿರುವ ಶೇಖ್ ಹಸೀನಾ, ಕೆಲವು ದಿನಗಳಲ್ಲಿ ಇಂಗ್ಲೆಂಡ್ ಗೆ ತೆರಳಲಿದ್ದು, ಅಲ್ಲಿ ರಾಜಕೀಯ ಆಶ್ರಯ ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.