ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಸಭೆ ನಡೆಸಿದ್ದಾರೆ. ನಿನ್ನೆ ಸಂಜೆ ಅವರ ನಿವಾಸಕ್ಕೆ ತೆರಳಿ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ದಿ ಕುರಿತು ಮಾಹಿತಿ ತಂತ್ರಜ್ಞಾನದ ಉದ್ದಿಮೆದಾರರೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕ್ರಿಸ್ ಗೋಪಾಲಕೃಷ್ಣನ್, ಪ್ರಶಾಂತ್ ಪ್ರಕಾಶ್, ಆರ್. ಕೆ . ಮಿಶ್ರಾ, ನರೇಶ್ ನರಸಿಂಹನ್ರಾಘವೇಂದ್ರ ಶಾಸ್ತ್ರಿ, ಶಾಸಕ ಎನ್. ಎ. ಹ್ಯಾರಿಸ್ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಬೆಂಗಳೂರಿನ ರಸ್ತೆಗಳ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿಗೆ (ಇಎಲ್ ಸಿ ಐಟಿಎ) ನೀಡಿ ಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಸಲಹೆ ನೀಡಿದ್ದರು. ರಸ್ತೆಗಳ ನಿರ್ವಹಣೆ ಬಿಬಿಎಂಪಿ ಗುತ್ತಿಗೆದಾರರಿಂದ ಸಾಧ್ಯವಿಲ್ಲ ಎಂದು ಅವರು ಕಿಡಿ ಕಾರಿದ್ದರು.
ಕಳೆದ ವಾರ ಸುರಿದ ಭಾರಿ ಮಳೆಗೆ ಬೊಮ್ಮನಹಳ್ಳಿ ಮತ್ತು ಐಟಿ ಕಾರಿಡಾರ್ ಅನೇಕ ಪ್ರದೇಶಗಳು ಜಲಾವೃತವಾಗಿದ್ದವು. ಆಗ ಷಾ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದ ಅವರ ಈ ಅಭಿಪ್ರಾಯ ಸಾಕಷ್ಟು ವೈರಲ್ ಆಗಿತ್ತು.
ಎಕ್ಸ್ ಮೂಲಕ ಅವರು ಈ ಅಭಿಪ್ರಾಯವನ್ನು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿ ಸಲಹೆ ನೀಡಿದ್ದರು.
ಸ್ವಾಯತ್ತ ಸಂಸ್ಥೆಯಾಗಿರುವ ಇಎಲ್ ಸಿಟಿಐಎ ಬೆಂಗಳೂರಿನ ಹೊರವಲಯದ 300ಕ್ಕೂ ಹೆಚ್ಚು ಕಂಪನಿಗಳಿಗೆ ಸ್ಥಳಾವಕಾಶ ನೀಡಿರುವ 902 ಎಕರೆಯಲ್ಲಿ ಸ್ಥಾಪಿಸಲ್ಪಟ್ಟಿರುವ ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಪ್ರದೇಶದ ನಿರ್ವಹಣೆ ಮಾಡುತ್ತಿದೆ. ರೋಡ್ ಮೆಟ್ರಿಕ್ಸ್ ಅಳವಡಿಸಿಕೊಂಡು ಇಎಲ್ ಸಿಟಿಐಎ ವ್ಯವಸ್ಥಿತವಾಗಿ ಮತ್ತು ವೈಜ್ಞಾಕವಾಗಿ ರಸ್ತೆಗಳನ್ನು ನಿರ್ವಹಿಸುತ್ತಿದೆ. ಕೃತಕ ಬುದ್ದಿಮತ್ತೆ (ಎಐ) ಅಳವಡಿಸಿಕೊಂಡಿದ್ದು ಈ ಎಐ ಪ್ರತಿ 15 ದಿನಗಳಿಗೊಮ್ಮೆ ರಸ್ತೆಗಳನ್ನು ಸ್ಕ್ಯಾನ್ ಮಾಡಿ, ಟ್ರಾಫಿಕ್ ಚಿನ್ಹೆಗಳು ಮತ್ತು ರಸ್ತೆ ಹಾಳಾಗಿರುವುದನ್ನು ಗುರುತಿಸುತ್ತದೆ. ಇದರಿಂದ ಒಂದು ಸಣ್ಣ ಸಮಸ್ಯೆಯನ್ನೂ ತ್ವರಿತವಾಗಿ ಗುರುತಿಸಿ ಸರಿಪಡಿಸಲು ಸಹಕಾರಿಯಾಗಿದೆ ಎಂದೂ ಷಾ ವಿವರಿಸಿದ್ದರು.