ಬಳ್ಳಾರಿ: ಯಮಹಾ ಕಂಪನಿಯ ಬೈಕ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬೈಕ್ ಗಳು ಸುಟ್ಟು ಕರಲಾದ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ಈ ಅಗ್ನಿ ದುರಂತದಲ್ಲಿ ಸುಮಾರು 40 ಬೈಕ್ ಗಳು ಸುಟ್ಟು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಅನಂತಪುರ ರಸ್ತೆಯಲ್ಲಿ ರಸ್ತೆ ಬದಿ ಈ ಲಾರಿ ನಿಂತಿತ್ತು. ಆಗ ಲಾರಿಯಿಂದ ಏಕಾಏಕಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಲಾರಿಯನ್ನು ಆವರಿಸಿಕೊಂಡಿದೆ. ಆಗ ಲಾರಿಯಲ್ಲಿದ್ದ ಎಲ್ಲ ಬೈಕ್ ಗಳೂ ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚೆನ್ನೈಯಿಂದ ಬಳ್ಳಾರಿಗೆ ಬೈಕ್ ಗಳನ್ನು ಸಾಗಿಸಲಾಗುತ್ತಿತ್ತು. ಈ ಬೈಕ್ ಗಳ ಮೌಲ್ಯ ಅಂದಾಜು 45 ಲಕ್ಷ ರೂ. ಎಂದು ಹೇಳಲಾಗುತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ನಡೆಯುವುದನ್ನು ತಪ್ಪಿಸಿದ್ದಾರೆ. ಘಟನೆಯಿಂದ ಈ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣಗಳೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

