ನಾಳೆಗೆ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿ ಅಂತ್ಯ: ದರ್ಶನ್ ಗೆ ಜಾಮೀನು ಬಲುಕಷ್ಟ, ಯಾಕೆ ಗೊತ್ತೇ?

Most read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದ್ದು, ನಾಳೆ ಕಾಮಾಕ್ಷಿಪಾಳ್ಯ ಪೊಲೀಸರು ಕಸ್ಟಡಿಯಲ್ಲಿರುವ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ, ಸ್ಥಳ ಮಹಜರು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಇಲ್ಲವಾದ ಕಾರಣ ನಾಳೆಯೇ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ನಾಳೆ ದರ್ಶನ್ ಮತ್ತು ಸಹಚರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಿದೆ. ಆನಂತರ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇರುತ್ತದೆ.

ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣವಾದ್ದರಿಂದ ಕೆಳ ನ್ಯಾಯಾಲಯದಲ್ಲಿ ದರ್ಶನ್ ಮತ್ತು ತಂಡಕ್ಕೆ ಜಾಮೀನು ದೊರೆಯುವುದು ಅನುಮಾನ. ಆದರೆ ಕಾನೂನು ಪ್ರಕ್ರಿಯೆಯ ಪ್ರಕಾರ ದರ್ಶನ್ ಪರ ವಕೀಲರು ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ನ್ಯಾಯಾಲಯ ಜಾಮೀನು ನಿರಾಕರಿಸಿದ ನಂತರ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ.

ಸಾಧಾರಣವಾಗಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಹೈಕೋರ್ಟ್ ನಲ್ಲೂ ಬೇಗ ಜಾಮೀನು ಸಿಗುವುದು ಕಷ್ಟವಾಗುತ್ತದೆ. ಸಾಕ್ಷಿಗಳನ್ನು ಬೆದರಿಸುವ, ಸಾಕ್ಷ್ಯ ನಾಶಪಡಿಸುವ ಸಂಭವವಿರುವುದರಿಂದ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯವನ್ನು ವಿನಂತಿಸಿಕೊಳ್ಳುತ್ತಾರೆ. ಆರೋಪಿಗಳು ಪ್ರಭಾವಿಗಳಾದ್ದರಿಂದ ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚು ಎಂದು ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರು ವಾದಿಸುವುದು ನಿಶ್ಚಿತ. ಹೀಗಾಗಿ ಜಾಮೀನು ಅಷ್ಟು ಸುಲಭವಲ್ಲ.

ರೇಣುಕಾಸ್ವಾಮಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ದರ್ಶನ್ ಮತ್ತು ತಂಡಕ್ಕೆ ಜಾಮೀನು ಪಡೆಯುವ ಮಾರ್ಗಗಳು ತೆರೆದುಕೊಳ್ಳಲಿವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕನಿಷ್ಠ ಮೂರರಿಂದ ಆರು ತಿಂಗಳ ಮಟ್ಟಿಗೆ ದರ್ಶನ್ ಜೈಲಿನಲ್ಲೇ ಇರುವುದು ಮಾತ್ರ ಬಹುತೇಕ ಖಚಿತ.

More articles

Latest article