ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಸಾವು: ಹೈಪ್ರೊಫೈಲ್ ಆರೋಪಿಗೆ ಠಾಣೆಯಲ್ಲೇ ಜಾಮೀನು

Most read

ಚೆನ್ನೈ: ರಾಜ್ಯಸಭಾ ಸದಸ್ಯ ಬೀಡಾ ಮಸ್ತಾನ್ ರಾವ್ ಎಂಬುವವರ ಪುತ್ರಿ ಮಾಧುರಿ ಐಶಾರಾಮಿ ಬಿಎಂಡಬ್ಲ್ಯು ಕಾರನ್ನು ಪಾದಾಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿಸಿದ ಪರಿಣಾಮವಾಗಿ ಆತ ಸಾವನ್ನಪ್ಪಿದ್ದಾನೆ. ಆದರೆ ಪ್ರಭಾವಿ ವ್ಯಕ್ತಿಯ ಪುತ್ರಿಗೆ ಪೊಲೀಸ್ ಠಾಣೆಯಲ್ಲೇ ಜಾಮೀನು ಕೊಟ್ಟು ಕಳುಹಿಸಲಾಗಿರುವುದು ಈಗ ಜನಾಕ್ರೋಶಕ್ಕೆ ಕಾರಣವಾಗಿದೆ.

ಪುಣೆಯಲ್ಲಿ ಪೋರ್ಷೆ ಕಾರು ಹರಿಸಿ ಉದ್ಯಮಿಯೊಬ್ಬನ ಪುತ್ರ ಕುಡಿತ ಮತ್ತಿನಲ್ಲಿ ಇಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಗಳನ್ನು ಬಲಿ ತೆಗೆದುಕೊಂಡ ಘಟನೆ ಹಸಿರಾಗಿರುವಂತೆಯೇ ಮತ್ತೊಂದು ದುಡ್ಡಿನ ಮದದಲ್ಲಿ ನಡೆದ ಅಪಘಾತ ಬೆಳಕಿಗೆ ಬಂದಿದೆ.

ಸೋಮವಾರ ರಾತ್ರಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ರಾಜ್ಯಸಭಾ ಸಂಸದ ಬೀಡಾ ಮಸ್ತಾನ್‌ ರಾವ್‌ ಅವರ ಪುತ್ರಿ ಮಾಧುರಿ ಬಿಎಂಡಬ್ಲ್ಯು ಕಾರನ್ನು ತಮ್ಮ ಸ್ನೇಹಿತೆಯ ಜತೆಯಲ್ಲಿ ಓಡಿಸುತ್ತಿದ್ದರು. ವಾಹನ ಚಲಾಯಿಸುವಾಗ ಮಾಧುರಿ ಮದ್ಯದ ಮತ್ತಿನಲ್ಲಿದ್ದರು ಎಂದು ಗೊತ್ತಾಗಿದೆ. ಅಡ್ಡಾದಿಡ್ಡಿ ಓಡುತ್ತಿದ್ದ ಕಾರು ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಮೇಲೆ ಕಾರು ಹರಿದು ಹೋದ ಪರಿಣಾಮ ಆತ ಮೃತಪಟ್ಟಿದ್ದಾನೆ.

ಕಾರು ಚಲಾಯಿಸುತ್ತಿದ್ದ ಮಾಧುರಿ ಭಯದಿಂದ ತಕ್ಷಣವೇ ಸ್ಥಳದಿಂದ ಓಡಿಹೋಗಿದ್ದಾಳೆ. ಆಕೆಯ ಸ್ನೇಹಿತೆ ಕಾರಿನಿಂದ ಇಳಿದು ಅಲ್ಲಿ ಜಮಾಯಿಸಿದ ಜನರೊಂದಿಗೆ ಜಗಳವಾಡಿದ್ದಾರೆ. ಸ್ವಲ್ಪ ಸಮಯದ ನಂತರ ಆಕೆಯೂ ಅಲ್ಲಿಂದ ಹೊರಟು ಹೋಗಿದ್ದಾಳೆ.

YSRCP ಪಕ್ಷದ ಮುಖಂಡ ಜಗನ್ ಮೋಹನ್ ರೆಡ್ಡಿಯೊಮದಿಗೆ ಬೀಡಾ ಮಸ್ತಾನ್ ರಾವ್

ಸ್ಥಳೀಯರು ಸೂರ್ಯನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.

ಮೃತಪಟ್ಟ ಸೂರ್ಯ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಆತನ ಸಂಬಂಧಿಕರು ಮತ್ತು ಅವರ ಕಾಲೋನಿಯ ಜನರು ಜ-5 ಶಾಸ್ತ್ರಿನಗರ ಪೊಲೀಸ್ ಠಾಣೆಗೆ ಜಮಾಯಿಸಿ ಮಾಧುರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರು ಬಿಎಂಆರ್ (ಬೀಡಾ ಮಸ್ತಾನ್ ರಾವ್) ಗ್ರೂಪ್‌ಗೆ ಸೇರಿದ್ದು ಮತ್ತು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿತ್ತು.

ಮಾಧುರಿಯನ್ನು ಬಂಧಿಸಲಾಯಿತಾದರೂ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು.

ಮಾಧುರಿಯ ತಂದೆ ಬೀಡಾ ಮಸ್ತಾನ್ ರಾವ್ ಮೀನು ವ್ಯಾಪಾರದಲ್ಲಿ ಪಳಗಿದ ಉದ್ಯಮಿಯಾಗಿದ್ದು ಸೀಫುಡ್ ಕ್ಷೇತ್ರದಲ್ಲಿ ಪ್ರಖ್ಯಾತಿ ಗಳಿಸಿರುವ ಬಿಎಂಆರ್ ಗ್ರೂಪ್ ನ ಮಾಲೀಕರಾಗಿದ್ದಾರೆ. ಒಮ್ಮೆ ಶಾಸಕರಾಗಿಯೂ ಆಯ್ಕೆಯಾಗಿದ್ದ ರಾವ್ ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.

More articles

Latest article