ಆಗಸ್ಟ್ 8 ರಂದು ಲೋಕಸಭೆಯಲ್ಲಿ ಮಂಡಿಸಲಾದ ವಕ್ಫ್ (ತಿದ್ದುಪಡಿ) ಮಸೂದೆ, 2024, ಇದೀಗ ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದೆ. ವಕ್ಫ್ ಆಸ್ತಿಯ ವಿಚಾರದಲ್ಲಿ ಬಹಳಷ್ಟು ತಪ್ಪು ಅಭಿಪ್ರಾಯಗಳು ಕೇಳಿಬರುತ್ತಿದ್ದು ಪ್ರಗತಿಪರ ಲೇಖಕ ಮುಷ್ತಾಕ್ ಹೆನ್ನಾಬೈಲ್ ಅವರು ಬರೆದ ವಕ್ಫ್ ಆಸ್ತಿಯ ಕುರಿತ ವಾಸ್ತವ ವಿಚಾರಗಳು ಇಲ್ಲಿವೆ.
ʼಮುಸ್ಲಿಮರು ಕಂಡ ಕಂಡ ಆಸ್ತಿಯನ್ನೆಲ್ಲ ವಕ್ಫ್ ಆಸ್ತಿ ಅನ್ನುತ್ತಾರೆʼ ಎಂಬ ಆರೋಪ ರಾಜಕೀಯ ಪ್ರೇರಿತವಾಗಿ ಕೇಳಿಬರುತ್ತಿದೆ. ಈಗಿನ ರಾಜಕೀಯ ವಾತಾವರಣದಲ್ಲಿ ಮುಸ್ಲಿಮರು ಕುಂತರೂ ತಪ್ಪು ನಿಂತರೂ ತಪ್ಪು ಎಂಬ ವಾತಾವರಣವಿರುವಾಗ ಮುಸ್ಲಿಮರಿಗೆ ಸಂಬಂಧಪಟ್ಟ ಎಲ್ಲ ವಿಚಾರಗಳು ಅಸಂಬದ್ದ ವಿಶ್ಲೇಷಣೆಗಳಿಗೆ ಒಳಗಾಗುತ್ತಿವೆ. ಈಗೀಗ ಮುಸ್ಲಿಮರ ಬಹುತೇಕ ಎಲ್ಲ ವಿಚಾರಗಳ ಸುತ್ತಲಿನ ವಿಕೃತಿಯಿಂದ ಕೂಡಿದ ವಿಶ್ಲೇಷಣೆಯ ಒಳಮರ್ಮ ಎಲ್ಲರಿಗೂ ಅರ್ಥವಾಗುತ್ತಿದೆ. ವಕ್ಫ್ ಆಸ್ತಿಯ ವಿಚಾರದಲ್ಲಿಯೂ ವಾಸ್ತವ ಬೇರೆಯೇ ಇದೆ..
ಒಂದು ಅಂದಾಜಿನ ಪ್ರಕಾರ ಅಧಿಕೃತ ದಾಖಲೆಗಳಿರುವ ಭಾರತದ ವಕ್ಫ್ ಆಸ್ತಿಯ ಪ್ರಮಾಣ 10 ಲಕ್ಷ ಎಕರೆಗಳಿಗಿಂತಲೂ ಹೆಚ್ಚಿದೆ. ನಿಮಗೆ ಕೇಳಿದರೆ ಆಶ್ಚರ್ಯವಾಗಬಹುದು, ನಿಜಕ್ಕೂ ಇದು ಇರಬೇಕಾದ ಪ್ರಮಾಣಕ್ಕಿಂತ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಅಂದರೆ ವಕ್ಫ್ ಆಸ್ತಿ ಕನಿಷ್ಠವೆಂದರೂ 25 ಲಕ್ಷ ಎಕರೆಯಾದರೂ ಇರಬೇಕಿತ್ತು. ಇಷ್ಟು ಇರಬೇಕಾಗಿದ್ದ ಭೂಮಿಯನ್ನು ಬಹುತೇಕ ನುಂಗಿದ್ದು ಮುಸ್ಲಿಮರೇ ಹೊರತು ಹಿಂದೂಗಳಲ್ಲ. ಬ್ರಿಟಿಷರೂ ಕೂಡ ವಕ್ಫ್ ಆಸ್ತಿ ಸಂರಕ್ಷಣೆಗೆ 1925 ರಲ್ಲಿ ಕಾನೂನಾತ್ಮಕ ಸ್ವರೂಪದ ಬೋರ್ಡ್ ರೂಪಿಸಿದರೆ ಹೊರತು ಎಲ್ಲಿಯೂ ಕೂಡ ಕಬಳಿಸಿದ ಅಥವಾ ಇತರ ಉದ್ದೇಶಗಳಿಗೆ ಬಳಸಿದ ಉದಾಹರಣೆ ಅಷ್ಟಾಗಿ ಕಂಡು ಬರುತ್ತಿಲ್ಲ..
ವಕ್ಫ್ ಆಸ್ತಿಯ ಕಬಳಿಕೆ, ಕಳಪೆ ನಿರ್ವಹಣೆ ಮತ್ತು ಅಸಡ್ಡೆಗೆ ಮುಸ್ಲಿಂ ಸಮುದಾಯವೇ ಹೊಣೆ. ಆದರೆ ಬಹಳಷ್ಟು ಜನ ತಿಳಿದಿರುವಂತೆ ಮತ್ತು ಈ ವಿಚಾರದಲ್ಲಿ ಮಂಗಚೇಷ್ಟೆಯಾಡುವ ಟಿವಿ ಮಾಧ್ಯಮಗಳು ವಿಶ್ಲೇಷಿಸುವಂತೆ, ವಕ್ಫ್ ಆಸ್ತಿಯು ವ್ಯಾಪಕವಾಗಿ ಅಕ್ರಮ ನೊಂದಾವಣೆಯಾಗಿಲ್ಲ. ಇಸ್ಲಾಮಿಕ್ ಶರಿಯಾದ ನಿಯಮದ ಪ್ರಕಾರ ಆಸ್ತಿಯ ಮೇಲೆ ಮಾಲಕತ್ವ ಹೊಂದದಿದ್ದಲ್ಲಿ ಆಸ್ತಿಯನ್ನು ಮಸೀದಿ ಅಥವಾ ಮದ್ರಸಗಳಿಗೆ ವಕ್ಫ್ ಮಾಡುವುದು ಶಿಕ್ಷಾರ್ಹ ಅಪರಾಧ..
ಭಾರತದಲ್ಲಿ ಇಂದಿರಾಗಾಂಧಿಯವರ ಭೂಸುಧಾರಣೆ ಕಾನೂನು ಜಾರಿಯಾಗುವವರೆಗೆ ಈ ದೇಶದ 90% ಕ್ಕಿಂತಲೂ ಹೆಚ್ಚು ಪ್ರಮಾಣದ ಭೂಮಿಯು ರಾಜಮನೆತನದವರು, ಮಂತ್ರಿಗಳು ಮತ್ತು ಮೇಲ್ವರ್ಗದ ಭೂಮಾಲೀಕರ ಕೈಯಲ್ಲೇ ಇತ್ತು. ಭೂಸುಧಾರಣೆ ಕಾನೂನು ಜಾರಿಯಾದ ನಂತರ ದೊಡ್ಡ ಪ್ರಮಾಣದ ಭೂಮಾಲಕರಿಂದ ಒಕ್ಕಲುಗಳಿಗೆ ವಿಂಗಡಿತವಾದ ಭೂಮಿಯು ದಾಖಲೀಕರಣಗೊಳ್ಳತೊಡಗಿತು. ಹೀಗೆ ದಾಖಲೀಕರಣ ಆಗುವವರೆಗೆ ಭಾರತದಲ್ಲಿ ಬಹುತೇಕ ಭೂಮಿಯ ಒಡೆತನಕ್ಕೆ ಬೇಲಿ ಹಾಕಿಕೊಳ್ಳುವುದು, ಅಗಳು ತೋಡುವುದರ ಮೂಲಕ ವ್ಯಾಪ್ತಿಯನ್ನು ಗುರುತಿಸಿಕೊಳ್ಳುವುದರ ಹೊರತಾಗಿ ಬೇರೆ ಯಾವ ಪರ್ಯಾಯ ವ್ಯವಸ್ಥೆಯೂ ಇರಲಿಲ್ಲ. ಹೀಗಿದ್ದ ಕಾಲಗಳಲ್ಲಿ ಮುಸ್ಲಿಂ ಕುಟುಂಬಗಳು ಮಸೀದಿ ಮದ್ರಸಗಳಿಗೆ ಭೂಮಿಯನ್ನು ಬರಿಯ ಬಾಯಿ ಮಾತಿನ ಮೂಲಕ ಅಥವಾ ಮೌಖಿಕ ದಾನದ ಮೂಲಕ ಬಿಡುತ್ತಿದ್ದರು..
ಮುಸ್ಲಿಮರಲ್ಲಿ ಭೂಮಿಯನ್ನು ದಾನ ಮಾಡುವುದು ಧಾರ್ಮಿಕ ಶ್ರದ್ಧೆಯ ಪ್ರಧಾನ ಭಾಗ. ಜಗತ್ತಿನ ಇತರ ಎಲ್ಲ ಸಮುದಾಯ ಮತ್ತು ಧರ್ಮದವರಿಗಿಂತ ಮುಸ್ಲಿಮರಲ್ಲಿ ಭೂಮಿಯನ್ನು ದಾನ ನೀಡುವವರ ಪ್ರಮಾಣ ವ್ಯಾಪಕವಾಗಿತ್ತು. ಹಾಗಂತ, ಮಸೀದಿ ಮದ್ರಸಗಳಿಗೆ ಬರೀ ಮುಸ್ಲಿಮರು ಮಾತ್ರ ಭೂದಾನ ಮಾಡಿದ್ದಲ್ಲ, ಬಹಳಷ್ಟು ಹಿಂದೂಗಳು ಮತ್ತು ಹಿಂದೂ ರಾಜರೂ ಕೂಡ ದೊಡ್ಡಮಟ್ಟದಲ್ಲಿ ಭೂಮಿಯನ್ನು ಕೊಟ್ಟಿದ್ದಾರೆ. ಕಟ್ಟರ್ ಮುಸ್ಲಿಂ ವಿರೋಧಿಗಳಾಗಿದ್ದರೆಂದು ಆಧುನಿಕ ರಾಜಕೀಯ ಪರಿಭಾಷೆಯಲ್ಲಿ ಹೆಚ್ಚು ವರ್ಣಿಸಲ್ಪಡುವ ಶಿವಾಜಿ ಸೇರಿದಂತೆ ಮರಾಠ ಚಕ್ರವರ್ತಿಗಳು, ವಿಜಯನಗರದ ಅರಸರು, ರಜಪೂತ ಅರಸರೂ ಕೂಡ ಮುಸ್ಲಿಮರಿಗೆ ವಕ್ಫ್ ಭೂದಾನ ಮಾಡಿದ ನಿದರ್ಶನಗಳಿವೆ. ಮಂದಿರ ಮಸೀದಿ ಮಠಗಳಿಗೆ ಪರಸ್ಪರ ಭೂಮಿಯನ್ನು ನೀಡುವುದು ಭಾರತೀಯ ಇತಿಹಾಸದ ಚರಿತ್ರೆಯಲ್ಲಿ ದೀರ್ಘಕಾಲದಿಂದ ಕಂಡುಬರುತ್ತದೆ. ಸಾಮ್ರಾಜ್ಯಗಳ ನಡುವಿನ ಸುದೀರ್ಘ ಕಾಲಗಳ ವೈಮನಸ್ಸು ಮತ್ತು ಸಂಘರ್ಷಗಳ ಹೊರತಾಗಿಯೂ ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿತ್ತು.
ಆದರೆ ಹೀಗೆ ದಾನ ನೀಡಿದ ಬಹುತೇಕ ಭೂಮಿಯು ಯಾವುದೇ ದಾಖಲೆಗಳನ್ನು ಹೊಂದುತ್ತಿರಲಿಲ್ಲ. ಹೀಗಿರುವ ಕಾರಣಕ್ಕೆ ಭೂಮಿಯ ಒತ್ತುವರಿ ಮತ್ತು ಅತಿಕ್ರಮಣಗಳು ಸುಲಭವಾಗಿ ಸಾಮಾನ್ಯವಾಗಿದ್ದವು. ಸಾಮಾನ್ಯವಾಗಿ ಮುಸ್ಲಿಮರು ತಾವು ವಾಸವಿದ್ದ ಕಡೆಗಳಲ್ಲೆಲ್ಲ ತಮ್ಮ ಸ್ವಾಧೀನದಲ್ಲಿದ್ದ ಆಸ್ತಿಯ ಒಂದು ಪ್ರಮಾಣವನ್ನು ವಕ್ಫ್ ಮಾಡುತ್ತಿದ್ದರು. ಹೀಗೆ ಬೇರೆ ಬೇರೆ ಕಡೆಗಳಲ್ಲಿ ದಾಖಲೆಗಳಿಲ್ಲದೆ ಆಸ್ತಿಯನ್ನು ಬಿಡುತ್ತಿದ್ದರಿಂದ ಮತ್ತು ನೇರ ನಿರ್ವಹಣೆ ಇಲ್ಲದ ಕಾರಣಕ್ಕೆ ದಾನ ನೀಡಿದ ಆಸ್ತಿ ಯಾವುದು ಎಂದು ಕಾಲಗಳ ನಂತರ ಗುರುತಿಸುವುದು ಕಷ್ಟವಾಗುತಿತ್ತು. ಹೀಗೆ ಎಲ್ಲೆಂದರಲ್ಲಿ ಬಿಡುತ್ತಿದ್ದ ಭೂಮಿಯನ್ನು ಮಸೀದಿ ಮದ್ರಸಗಳ ಆಡಳಿತಗಳು ಕೂಡ ಅಗತ್ಯ ಉದ್ದೇಶಗಳಿಗೆ ವಿನಿಯೋಗಿಸುವುದು ಕೂಡ ಕಷ್ಟವಾಗುತಿತ್ತು. ಮಸೀದಿಗೆ ಭೂಮಿಯನ್ನು ಬಿಟ್ಟ ಕುಟುಂಬಗಳು ಅಥವಾ ವ್ಯಕ್ತಿಗಳು, ಭೂಮಿಯನ್ನು ಬಿಟ್ಟ ನಂತರ ತಮ್ಮ ಇಹಲೋಕದ ಕರ್ತವ್ಯ ಮುಗಿಯಿತು ಎಂದು ಬಿಟ್ಟ ಭೂಮಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ..
ಮುಸ್ಲಿಮರಲ್ಲಿ ಮತ್ತು ಹಿಂದೂಗಳಲ್ಲಿ ಆಸ್ತಿಯನ್ನು ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಬಿಡುವಾಗ ಹಲವು ವ್ಯತ್ಯಾಸಗಳಿವೆ. ಮುಸ್ಲಿಮರಲ್ಲಿ ಮಸೀದಿ ಮದ್ರಸಕ್ಕೆ ಸಂಬಂಧಪಟ್ಟ ಆಸ್ತಿಯನ್ನು ಎಲ್ಲೆಂದರಲ್ಲಿ ಬಿಡಬಹುದಿತ್ತು. ಆದರೆ ಹಿಂದೂಗಳಲ್ಲಿ ಆಸ್ತಿಯು ಪ್ರಮುಖ ದೇವಸ್ಥಾನ ಮತ್ತು ಮಠಗಳ ಸುತ್ತಮುತ್ತಲಿನಲ್ಲೇ ಹೆಚ್ಚು ಪಡೆಯಲಾಗುತ್ತಿತ್ತು. ಹೀಗೆ ಶ್ರದ್ಧಾ ಕೇಂದ್ರದ ಸುತ್ತಮುತ್ತಲಿನಲ್ಲಿ ಆಸ್ತಿಗಳಿರುವಾಗ ಅವುಗಳು ಒತ್ತುವರಿಯಾಗುವುದು ಅಥವಾ ಅತಿಕ್ರಮಣಕ್ಕೆ ಒಳಗಾಗುವುದು ಕಷ್ಟ. ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಅಥವಾ ಸಿಬ್ಬಂದಿಗಳ ನಿಗಾದಲ್ಲಿ ಆಸ್ತಿಗಳು ಇರುತ್ತಿದ್ದವು. ಸಾಮಾನ್ಯವಾಗಿ ಗತಕಾಲದ ಮುಸ್ಲಿಮರಲ್ಲಿ ಮಸೀದಿ ಮದರಸಗಳಿಗೆ ಚರಾಸ್ತಿ ಅಂದರೆ, ಚಿನ್ನ ಬೆಳ್ಳಿ ಹಣ ನೀಡುವ ಪರಿಪಾಠವಿರಲಿಲ್ಲ. ಮದರಸ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಅನಾಥಾಶ್ರಮಗಳು, ವಿಧವಾ ಕಲ್ಯಾಣ ಕಾರ್ಯಕ್ರಮಗಳು ಮತ್ತು ಮಸೀದಿಯ ನಿರ್ಮಾಣಗಳಿಗೆ ಭೂಮಿಯನ್ನು ನೀಡುವುದು, ಹೀಗೆ ಜಾಗವನ್ನು ವಕ್ಫ್ ಮಾಡುವುದರ ಹಿಂದಿರುವ ಉದ್ದೇಶ..
ಇಸ್ಲಾಮಿಕ್ ಆಶಯಗಳ ಪ್ರಕಾರ, ಭೂಮಿಯನ್ನು ದೀರ್ಘ ಕಾಲದವರೆಗೆ ಹಡಿಲು ಬಿಡುವುದು, ಉಪಯೋಗಿಸದೆ ಇರುವುದು ಸಮ್ಮತಾರ್ಹವಲ್ಲ. ಆದರೆ ಭಾರತದಲ್ಲಿ ಬಹುತೇಕ ಮುಸ್ಲಿಮರು ಸಣ್ಣ ಸಣ್ಣ ಜಮೀನುಗಳು ಹೊಂದಿರುವ ಕಾರಣಕ್ಕೆ, ಅಲ್ಲಲ್ಲಿ ಬಿಡುವ ಜಮೀನುಗಳು ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಮತ್ತು ಸಮಾಜಕ್ಕೆ ಪೂರಕವಾಗುವ ರೀತಿಯಲ್ಲಿ ವಿನಿಯೋಗಿಸುವುದು ಮಸೀದಿಯ ಆಡಳಿತ ಮಂಡಳಿಗಳಿಗೂ ಬಹಳ ಕಷ್ಟ. ಹೀಗಿರುವ ಕಾರಣಕ್ಕೆ ಬಹಳಷ್ಟು ಜಮೀನುಗಳನ್ನು ಕಂದಾಯ ಇಲಾಖೆಗಳಿಗೆ ಮತ್ತು ವಕ್ಫ್ ಬೋರ್ಡುಗಳಿಗೆ ಗುರುತಿಸುವುದು ಕಷ್ಟವಾಗಿದೆ. ಈಗ ಗುರುತಿಸಲ್ಪಟ್ಟಿರುವ ಮತ್ತು ನೊಂದಾಯಿಸಲ್ಪಟ್ಟಿರುವ ಭೂಮಿ ನಿಜವಾಗಿ ವಕ್ಫ್ ಮಾಡಲ್ಪಟ್ಟಿರುವ ಭೂಮಿಗಿಂತ ಅದೆಷ್ಟೋ ಪಟ್ಟು ಕಡಿಮೆ ಇದೆ. ಸಹಜವಾಗಿಯೇ ವಕ್ಫ್ ನಲ್ಲಿ ನೊಂದಾಯಿಸಲ್ಪಟ್ಟಿರುವ ಭೂಮಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಕ್ಫ್ ಅಲ್ಲದ ಭೂಮಿಗಳು ಕೂಡ ಸೇರಿಕೊಂಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದು ಹೀಗೆ ನೊಂದಾಯಿಸಿದ ಕಂದಾಯ ಇಲಾಖೆಯ ಸಮಸ್ಯೆಯೇ ಹೊರತು ಮುಸ್ಲಿಂ ಸಮುದಾಯದ್ದಲ್ಲ. ಬರೀ ವಕ್ಫ್ ಭೂಮಿ ಮಾತ್ರವಲ್ಲ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಗಳೂ ಕೂಡ ಅಕ್ರಮವಾಗಿ ಹೀಗೆ ಅನ್ಯರ ಪಾಲಿಗೆ ನೋಂದಾಯಿಸಲ್ಪಟ್ಟಿರುವುದು ನಿತ್ಯ ನಿರಂತರ ಕಾಣಬಹುದು..
ಮುಸ್ಲಿಮರ ಧಾರ್ಮಿಕ ಕೇಂದ್ರಗಳಿಗೆ ಸ್ಥಿರಾಸ್ತಿಗಳು ಹೆಚ್ಚು ದಾನದ ರೂಪದಲ್ಲಿ ಬಂದರೆ, ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಚರಾಸ್ತಿಗಳು ಹೆಚ್ಚು ದಾನದ ರೂಪದಲ್ಲಿ ಬರುತ್ತವೆ. ಮುಸ್ಲಿಂ ಮಸೀದಿಗಳಲ್ಲಿ ಸಾಮಾನ್ಯವಾಗಿ ಒಂದು ತಿಂಗಳ ರಂಜಾನ್ ಉಪವಾಸದ ಸಂದರ್ಭದ ಹೊರತುಪಡಿಸಿ ಉಳಿದ ದಿನಗಳಲ್ಲಿ ಆಹಾರಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದಿಲ್ಲ. ಮಸೀದಿಗಳಲ್ಲಿ ಯಾವುದೇ ಪ್ರಾರ್ಥನಾ ವಿಧಿಗಳಿಗೆ ಮತ್ತು ಧಾರ್ಮಿಕ ಪ್ರಕ್ರಿಯೆ ನಡೆಸುವವರಿಗೆ ಹಣ ಅಥವಾ ಕಾಣಿಕೆ ನೀಡುವ ಪರಿಪಾಠವೂ ಇಲ್ಲ. ಮಸೀದಿಗಳಲ್ಲಿ ಬರುವ ವೆಚ್ಚವೆಂದರೆ ಧರ್ಮಗುರುಗಳ ತಿಂಗಳ ವಂತಿಗೆ ಮತ್ತು ಮಸೀದಿ ನಿರ್ವಹಣೆಯ ವೆಚ್ಚಗಳಷ್ಟೇ. ಆದರೆ ಹಿಂದೂ ಮಂದಿರಗಳಲ್ಲಿ ಹೆಚ್ಚುಕಡಿಮೆ ಧಾರ್ಮಿಕವಾದ ಎಲ್ಲ ಪ್ರಕ್ರಿಯೆಗಳು ದಕ್ಷಿಣೆ, ಕಾಣಿಕೆ, ಪೂಜಾ ವೆಚ್ಚಗಳ ರೂಪದಲ್ಲಿ ಹಣದ ಮೂಲಕವೇ ನಡೆಯುತ್ತದೆ. ನಿರಂತರ ಅನ್ನದಾನವಿರುತ್ತದೆ. ಹೆಚ್ಚು ಕಡಿಮೆ ಮಠ ಮಂದಿರಗಳ ಪರಿಸರಗಳು ದಿನದ 24 ಗಂಟೆಯೂ ಚಟುವಟಿಕೆಗಳಿಂದ ಕೂಡಿರುತ್ತವೆ. ಆದರೆ ಮುಸ್ಲಿಮರ ಮಸೀದಿಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಮಂದಿರಗಳ ಚಟುವಟಿಕೆಗಳಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುತ್ತದೆ. ಹೀಗಿರುವಾಗ ಹಿಂದೂ ಮಂದಿರಗಳ ಆದಾಯ- ವೆಚ್ಚಗಳು ಇತರ ಧರ್ಮೀಯರಿಗಿಂತ ಹೆಚ್ಚಿರುತ್ತದೆ…
ತುಲನಾತ್ಮಕವಾಗಿ ಭಾರತದಲ್ಲಿರುವ ಮುಸ್ಲಿಮರ ಸ್ಥಿರಾಸ್ತಿಯ ರೂಪದ ವಕ್ಫ್ ಆಸ್ತಿಗಳ ಮೌಲ್ಯ ಮತ್ತು ಹಿಂದೂಗಳ ಚಿನ್ನ ಬೆಳ್ಳಿ ಹಣದ ರೂಪದ ಚರಾಸ್ತಿಗಳನ್ನು ಮೌಲ್ಯವಾಗಿಸಿ ಹೋಲಿಸಿದರೆ, ಹಿಂದೂ ಧಾರ್ಮಿಕ ಕೇಂದ್ರಗಳ ಚರಾಸ್ತಿಯ ಮೌಲ್ಯವೇ ಮುಸ್ಲಿಮರ ವಕ್ಫ್ ಭೂಮಿಗಿಂತ ಅದೆಷ್ಟೋ ಪಟ್ಟು ಹೆಚ್ಚಿದೆ. ಬರೀ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ದೊಡ್ಡ ಸಮುದಾಯಗಳಾದ ಮುಸ್ಲಿಂ, ಕ್ರೈಸ್ತ, ಯಹೂದಿ ಬೌದ್ಧ ಸಮುದಾಯಗಳ ಧಾರ್ಮಿಕ ಕೇಂದ್ರಗಳಲ್ಲಿರುವ ಒಟ್ಟು ಆಸ್ತಿಗಳನ್ನು ತುಲನೆ ಮಾಡಿದರೂ ಕೂಡ, ಭಾರತದ ಹಿಂದೂ ಪ್ರಾರ್ಥನಾ ಮಂದಿರಗಳ ಆಸ್ತಿಯ ಮೌಲ್ಯವೇ ಅಧಿಕವಾಗಿರುತ್ತದೆ. ಮುಸ್ಲಿಮರು ಮತ್ತು ಕ್ರೈಸ್ತರು ಹಿಂದೂಗಳಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ಜಾಗತಿಕ ಸಮುದಾಯಗಳಾದರೂ ಕೂಡ, ಜಗತ್ತಿನಲ್ಲಿ ಅತಿಹೆಚ್ಚು ಪ್ರಾರ್ಥನಾ ಮಂದಿರಗಳಿರುವುದು ಹಿಂದೂಗಳದ್ದೇ ಆಗಿದೆ..
ಧಾರ್ಮಿಕ ಕೇಂದ್ರಗಳ ಆಸ್ತಿಗಳು ಮುಸ್ಲಿಮರದ್ದಾಗಲಿ ಅಥವಾ ಹಿಂದುಗಳದ್ದಾಗಲಿ ಸಂರಕ್ಷಣೆಯ ಉದ್ದೇಶದ ಶಾಸನಾತ್ಮಕ ಹಕ್ಕುಗಳಿಂದ ಹೊರತಾಗಿ ಅದಕ್ಕೆ ಸರ್ಕಾರದ ಮೇಲೆ ಉಳಿದ ಯಾವ ಹಕ್ಕೂ ಇರುವುದಿಲ್ಲ. ಅದು ಸರ್ಕಾರಗಳು ಕೊಟ್ಟಿದ್ದೂ ಅಲ್ಲ. ಒಂದೊಮ್ಮೆ ಹಿಂದಿನ ಕಾಲದ ರಾಜರುಗಳು ಕೊಟ್ಟಿದ್ದಿದ್ದರೂ ಕೂಡ ದಾನ ಸ್ವರೂಪದಲ್ಲಿ ಕೊಟ್ಟಿರುತ್ತಾರೆ. ಕೊಟ್ಟ ದಾನವನ್ನು ಬೇರೆಯವರು ಕಾನೂನು ರೂಪಿಸಿ ಹಿಂಪಡೆಯುವುದು ಒಂದು ಕಾನೂನಾತ್ಮಕ ದರೋಡೆಯಾಗುತ್ತದೆಯೇ ಹೊರತು ಅದನ್ನು ನ್ಯಾಯವೆನ್ನುವುದಿಲ್ಲ. ಕೇಂದ್ರ ಸರ್ಕಾರ ಸದ್ಯಕ್ಕೆ ಮುಸ್ಲಿಮರ ವಿಚಾರದಲ್ಲಿ ಕಾನೂನು ರೂಪಿಸಿ ಹೀಗೆ ವಕ್ಫ್ ಆಸ್ತಿಯನ್ನು ಕೊಳ್ಳೆ ಹೊಡೆಯಲು ಹವಣಿಸುತ್ತಿದೆ. ಭಾರತದಲ್ಲಿ ಹೆಚ್ಚುಕಡಿಮೆ ಎಲ್ಲ ಧರ್ಮದವರ ಧಾರ್ಮಿಕ ಕೇಂದ್ರಗಳಿಗೆ ಹೇರಳವಾದ ಆಸ್ತಿಗಳಿವೆ. ಹೀಗಿರುವಾಗ ಬರೀ ಮುಸ್ಲಿಮರ ಆಸ್ತಿಯನ್ನು ಮಾತ್ರ ಲಪಟಾಯಿಸುವ ಪ್ರಯತ್ನ ಅತ್ಯಂತ ಹೇಯ ಮತ್ತು ಖಂಡನೀಯ..
ಈಗ ಕೇಂದ್ರ ಸರ್ಕಾರ ಅನುಷ್ಟಾನಿಸಲು ಉದ್ದೇಶಿಸಿರುವ ಕಾನೂನಿನಲ್ಲಿ, ಒಂದೊಮ್ಮೆ ಒಬ್ಬ ವ್ಯಕ್ತಿ 12 ವರ್ಷದಿಂದ ವಕ್ಫ್ ಭೂಮಿಯ ಮೇಲೆ ವಾಸವಾಗಿದ್ದರೆ ಆ ಭೂಮಿಯು ಅವನದ್ದೇ ಆಗುತ್ತದೆ. ಅಂದರೆ ನಿಮ್ಮ ಮನೆಯಲ್ಲಿ ದರೋಡೆ ಮಾಡಿಕೊಂಡು ಹೋದ ವಸ್ತು ಯಾರಾದರೂ 12 ವರ್ಷ ಉಪಯೋಗಿಸಿ ಸಿಕ್ಕಿಬಿದ್ದರೆ ಆತ ಕಳ್ಳ ಆಗುವುದಿಲ್ಲ ಬದಲಾಗಿ ಸಜ್ಜನನಾಗಿ ಬದಲಾಗಿ ಕಳ್ಳತನದ ವಸ್ತುಗಳ ಮಾಲೀಕನಾಗುತ್ತಾನೆ. ಈ ಹಿಂದಿನ ವಕ್ಫ್ ಕಾಯ್ದೆಗೆ ಸರ್ಕಾರ ಸೂಚಿಸಿರುವ 40ಕ್ಕೂ ಹೆಚ್ಚಿನ ತಿದ್ದುಪಡಿಗಳಲ್ಲಿ ಇಂತಹ ಹಾಸ್ಯಾಸ್ಪದ ಮತ್ತು ಅತಿರೇಕದ ನಿಯಮಗಳು ಮತ್ತಷ್ಟು ಇವೆ. ಇದು ಯಾವುದನ್ನೂ ಅರಿಯದ ಟಿವಿ ಚಾನಲ್ಲುಗಳ ಬುದ್ಧಿಮಾಂದ್ಯ ಪಾಪುಗಳು ಅಂಗನವಾಡಿ ಮಕ್ಕಳ ತರಹ ಕಾಲು ಕೆರೆದುಕೊಂಡು ಗೋಳು ತೋಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಟಿವಿ ಚಾನಲ್ ಗಳ ನಿರೂಪಕರುಗಳಿಗೆ ಲೀಗಲ್ ಸೆನ್ಸ್ ಮತ್ತೆ ಮೆಚುರಿಟಿ ಬಹಳವೇ ಕಡಿಮೆ ಇರುತ್ತದೆ..
ಮುಷ್ತಾಕ್ ಹೆನ್ನಾಬೈಲ್
ಲೇಖಕರು, ಕಲಾವಿದರು
ಇದನ್ನೂ ಓದಿ- ದಲಿತರ ಓಟುಗಳಿಗೆ ಮಾತು ಕಲಿಸಿದ, ಭಾರತದ ರಾಜಕಾರಣದ ದಂತಕಥೆ ದಾದಾಸಾಹೇಬ್ ಕಾನ್ಶಿರಾಂ