ಬೆಂಗಳೂರು: ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರು ದಿನಾಂಕ 12/06/2024ರ ಆದೇಶದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಅತಿಥಿ ಉಪನ್ಯಾಸಕರು ಕಡ್ಡಾಯವಾಗಿ ಬಿಎಡ್ ಪದವಿಯನ್ನು ಹೊಂದಿರಬೇಕು ಎಂದು ತಿಳಿಸಿದ್ದು, ಇದರಿಂದ ಅನೇಕ ಉಪನ್ಯಾಸಕರಿಗೆ ತೊಂದರೆ ಆಗಲಿದೆ ಎಂದು ಅತಿಥಿ ಉಪನ್ಯಾಸಕರು ಹೇಳಿದ್ದಾರೆ.
ಹೆಚ್ಚಿನ ಪದವಿ ಪೂರ್ವ ಕಾಲೇಜುಗಳಲ್ಲಿ ಎಷ್ಟೋ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನೇಕ ಅತಿಥಿ ಉಪನ್ಯಾಸಕರು ಬಿ. ಎಡ್ ಪದವಿಯನ್ನು ಹೊಂದಿರುವುದಿಲ್ಲ. ವಾಣಿಜ್ಯಶಾಸ್ತ್ರ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, ಇಂಗ್ಲೀಷ್- ಮುಂತಾದ ವಿಷಯಗಳಿಗೆ ಬಿ ಎಡ್ ಪದವಿ ಪಡೆದಂತಹ ಅಭ್ಯರ್ಥಿಗಳು (ರೂ.12000/- ಮಾಸಿಕ ಸಂಭಾವನೆಯಲ್ಲಿ ಕರ್ತವ್ಯ ನಿರ್ವಹಿಸಲಿಕ್ಕೆ) ಲಭ್ಯವಿರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಂತೂ ಈ ಸಮಸ್ಯೆ ಅಗಾಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸುವಾಗ ವೃಂದ ಮತ್ತು ನೇಮಕಾತಿ ನಿಯಮಗಳು ಪೂರ್ಣವಾಗಿ ಅನ್ವಯಿಸದಿರುವಾಗ ಪದವಿ ಪೂರ್ವ ಕಾಲೇಜುಗಳಿಗೆ ಯಾಕೆ ಅನ್ವಯಿಸಲಾಗುತ್ತಿದೆ? ಎಂದು ಪ್ರಶ್ನಿಸಿರುವ ಅವರು ಅಲ್ಲಿ ಪಿ ಎಚ್ ಡಿ / ಎನ್ಇಟಿ / ಕೆ ಸೆಟ್ ಪಾಸು ಆದವರಿಗೆ ಮತ್ತು ಆಗದವರಿಗೆ ಪ್ರತ್ಯೇಕ ಸಂಭಾವನೆ ನಿಗದಿಪಡಿಸಲಾಗಿದೆ. ಹಾಗೆಯೇ ಪದವಿ ಪೂರ್ವ ಕಾಲೇಜುಗಳಲ್ಲಿ ಕೂಡ ಬಿ.ಎಡ್ ಆದವರಿಗೆ ಮತ್ತು ಬಿ.ಎಡ್ ಆಗದವರಿಗೆ ಏಕೆ ಪ್ರತ್ಯೇಕ ಸಂಭಾವನೆಯನ್ನು ನಿಗದಿಗೊಳಿಸಲು ಸಾಧ್ಯವಾಗುವುದಿಲ್ಲ?. ಇದರಿಂದ ಎಷ್ಟೋ ವರ್ಷಗಳಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ತಮ್ಮ ಕುಟುಂಬವನ್ನು ಪೋಷಿಸುತ್ತಿರುವವರಿಗೆ ಬಾಳು ಕೊಟ್ಟಂತಾಗುತ್ತದೆ. ಅಲ್ಲದೆ ಬಿಎಡ್ ಪದವಿ ಪಡೆದಿರುವಂತಹ ಅತಿಥಿ ಉಪನ್ಯಾಸಕರನ್ನು ಹುಡುಕಿ ತರುವ ಸಂಕಟವು ಪ್ರಾಂಶುಪಾಲರಿಗೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ 11 ವರ್ಷಗಳಿಂದ ಪದವಿ ಪೂರ್ವ ಕಾಲೇಜುಗಳಿಗೆ ಉಪನ್ಯಾಸಕರ ನೇಮಕವಾಗಿಲ್ಲ. ಇದರಿಂದ ಉಪನ್ಯಾಸಕರ ಹುದ್ದೆಗಳು ಖಾಲಿ ಉಳಿದಿದೆ. ಸರ್ಕಾರವು ಪ್ರತಿ ವರ್ಷವೂ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳುತ್ತಿದ್ದು, ಇದರಿಂದ ಸರಕಾರಿ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಾತ್ಮಕ ಶಿಕ್ಷಣವು ಸಾಧ್ಯವಾಗಿದೆ. ಇಲಾಖೆಯ ಮೇಲಿನ ಆದೇಶದಿಂದ ಕಾಲೇಜಿಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಸಾಧ್ಯವಾಗದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣವು ಗಗನ ಕುಸುಮವಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಹೆಚ್ಚುವರಿ ಆದೇಶದಿಂದ ಅತಿಥಿ ಉಪನ್ಯಾಸಕರುಗಳಿಗೆ ತೊಂದರೆಯಾಗುತ್ತದೆ. ಎಷ್ಟೋ ವರ್ಷಗಳಿಂದ ಅತಿಥಿ ಉಪನ್ಯಾಸಕರು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಪ್ರವಚನ ನೀಡುತ್ತಿದ್ದಾರೆ. ಈ ಆದೇಶ ಅವರೆಲ್ಲರೂ ಹೊಟ್ಟೆಗೆ ಹೊಡೆತ ಸರ್ಕಾರಿ ಕಾಲೇಜುಗಳನ್ನು ಉಪನ್ಯಾಸಕರ ಕೊರತೆ ಎಂದು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜುಗಳನ್ನು ಮುಚ್ಚುವ ಹುನ್ನಾರದಂತೆ ಕಾಣಿಸುತ್ತಿದೆ ಎಂದು ಉಪನ್ಯಾಸಕರುಗಳು ಆತಂಕ ವ್ಯಕ್ತಪಡಿಸಿದ್ದಾರೆ.