ಕವನ ಈಗ ಕವಿಯಿಂದ ಬಿಡಿಸಿಕೊಂಡು ಓದುಗನ ಹೆಗಲೇರಿದೆ. ಈಗ ಅವರದನ್ನು ಮುದ್ದಿಸಲಿ ಅಥವಾ ಕಾಲಡಿಗೆ ಹಾಕಿ ಹೊಸಕಿ ಬಿಡಲಿ ಇಲ್ಲವೇ ಸಾರು ಮಾಡಿಕೊಂಡು ತಿನ್ನಲಿ. ಕವಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಆದರೆ ಬುಕ್ ಬ್ರಹ್ಮ ತಲೆಕೆಡಿಸಿಕೊಳ್ಳಬೇಕಿತ್ತು. ಕವಯತ್ರಿಯರ ಕವನಗಳನ್ನು ಪ್ರಸಾರ ಮಾಡಿದ ಬುಕ್ ಬ್ರಹ್ಮ ಮಾಧ್ಯಮ ಈಗ ಯಾಕೆ ಮೌನವಾಗಿ ಕೂತಿದೆ? ಫೇಸ್ಬುಕ್ ನಲ್ಲಿ ಕವಯತ್ರಿಯರ/ಹೆಣ್ಣುಮಕ್ಕಳ ಮಾನ ಹರಾಜಾಗುತ್ತಿರುವಾಗ ಒಂದು ಪ್ರತಿಕ್ರಿಯೆಯನ್ನಾದರೂ ನೀಡಬೇಕಿತ್ತಲ್ಲವೇ? ವ್ಯೂವ್ಸ್ ಬೇಕು ಹೊಣೆಗಾರಿಕೆ ಬೇಡ ಅಂದ್ರೆ ಹೇಗೆ? – ಉಷಾ ಕಟ್ಟೆಮನೆ, ಬಂಡಿಹೊಳೆ.
ನನಗೆ ಈ ಲೇಖನವನ್ನು ಬರೆಯುವ ಉದ್ದೇಶ ಖಂಡಿತಾ ಇರಲಿಲ್ಲ. ನಾನು ಏಕಾಂಗಿಯಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವಳು. ಬರವಣಿಗೆ ಈಗ ನನ್ನ ಆದ್ಯತೆ ಅಲ್ಲ. ಬರೆಯುವಷ್ಟು ಪುರುಸೊತ್ತು ಕೂಡಾ ನನ್ನಲ್ಲಿ ಇಲ್ಲ.
ಮತ್ತೇಕೆ ಬರೆಯುತ್ತಿಯಾ? ಎಂದು ನೀವು ಕೇಳಬಹುದು.ಇದಕ್ಕೆ ಎರಡು ಕಾರಣ. ಒಂದು, ಮಮತಾ ಸಾಗರ ಕವನ ವಾಚಿಸಿದ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ನಾನೂ ಶೋತೃವಾಗಿ ಭಾಗವಹಿಸಿದ್ದು. ಅವರ ಕವನದ ಓದಿಗೆ ಕಣ್ಣು ಮತ್ತು ಕಿವಿಯಾಗಿದ್ದು. ಇನ್ನೊಂದು ಬಹುಮುಖ್ಯ ಕಾರಣ …ಅದನ್ನು ಆಮೇಲೆ ಹೇಳುವೆ. ಹಾಗಾಗಿ ಪ್ರತಿಕ್ರಿಯಿಸುವುದು ನನ್ನ ನೈತಿಕ ಜವಾಬ್ದಾರಿ ಎಂದು ಭಾವಿಸಿ ರಾತ್ರಿಯ ಏಕಾಂತದಲ್ಲಿ ಕೂತು ಇದನ್ನು ಬರೆಯುತ್ತಿದ್ದೇನೆ.
ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸುತ್ತಿರುವ ಹೆಚ್ಚಿನ ಎಲ್ಲರೂ ’ನಾನು’ ಕವನವನ್ನು ಓದಿ ತಿಳಿದುಕೊಂಡವರಲ್ಲ. ಬೇರೊಂದು ಮಾಧ್ಯಮದ ಮೂಲಕ ಪ್ರಸಾರವಾದುದನ್ನು ’ನೋಡಿ’ ’ಕೇಳಿ’ ದ ಕವನ! ಮಮತಾರವರ ’ಪದ ಸಂಚಾರ’ ಎಂಬ ಪುಸ್ತಕದಲ್ಲಿ ಈ ಮೊದಲೇ ಅದು ಪ್ರಕಟವಾಗಿದೆ. ಅದು ಮಾರುಕಟ್ಟೆಯಲ್ಲಿದೆ. ಅ ಕವನದ ಪೂರ್ಣ ಪಾಠ ಹೀಗಿದೆ.
ಕವನದ ಶೀರ್ಷಿಕೆ ’ ನಾನು’
ಒಂದು ಜೊತೆ ಮೆತ್ತಗಿನ ಮೊಲೆ,
ತೊಡೆ ಸಂದಲ್ಲಿ ಅಡಗಿದ ಕತ್ತಲ ಕೋಶ
ನಾನು ಅಂದರೆ..
ನಾನು ಅಂದರೆ-ನಾನು
ಕೇವಲ ಆರು ಸಾಲಿನ ಹದಿನೇಳು ಪದಗಳ ಪುಟ್ಟ ಕವನ ಅದು. ಈ ಹದಿನೇಳು ಪದಗಳಲ್ಲಿ ಐದು ಪದಗಳು ’ನಾನು’ ಉಳಿದ ಪದಗಳು ಹನ್ನೆರಡು. ಇದನ್ನು ಮಮತಾ ಮುಕ್ಕಾಲು ನಿಮಿಷದಲ್ಲಿ ಓದಿದ್ದಾರೆ. ಯಾವ ಭಂಗಿಯಲ್ಲಿ ನಿಂತು ಯಾವ ಸ್ವರಗಳ ಏರಿಳಿತದಲ್ಲಿ ಅದನ್ನು ಓದಿದ್ದಾರೆ? ಅದು ಕೂಡ ಬಹುಮುಖ್ಯ. ಕವಿತೆಯಷ್ಟೇ ಸೂಚ್ಯ.
ಈ ಹನ್ನೆರಡು ಪದಗಳ ಪುಟ್ಟ ಕವನವನ್ನು ಸಮ್ಮೇಳನದ ವೇದಿಕೆಯಲ್ಲಿ ಕವಯತ್ರಿಯೇ ವಾಚಿಸಿದಾಗ ಸಭಾಂಗಣದಲ್ಲಿ ಯಾವ ಋಣಾತ್ಮಕವಾದ ಸಂಚಲನೆಯನ್ನೂ ಅದು ಉಂಟು ಮಾಡದಾದಾಗ ಫೇಸ್‌ಬುಕ್ ನಲ್ಲಿ ಯಾಕೆ ಅಷ್ಟು ಅಲ್ಲೋಲ ಕಲ್ಲೋಲ ಎಬ್ಬಿಸಿತು? ಇದು ಯೋಚಿಸಬೇಕಾದ ವಿಷಯ.
ಒಂದು ಕವನವನ್ನು ಅರ್ಥ ಮಾಡಿಕೊಳ್ಳಲು ಮುಖ್ಯವಾಗಿ ಮೂರು ವಿಧಗಳಿವೆ. ಒಂದನೆಯದಾಗಿ ಸ್ವತಃ ಓದುವುದು ಎರಡನೆಯದಾಗಿ ಹಾಡುಗಾರನೊಬ್ಬ ಅದನ್ನು ಹಾಡುವುದನ್ನು ಆಲಿಸುವುದು.. ಮೂರನೆಯದು ಕವಿಯೇ ತನ್ನ ಕವನವನ್ನು ವಾಚಿಸುವುದು. ಮೊದಲ ಎರಡು ವಿಧಗಳಲ್ಲಿ ಓದುಗರ ಅಥವಾ ಶೋತೃಗಳ ಮನೋಭೂಮಿಕೆಯಲ್ಲಿ ಕವನ ಬೆಳೆಯುತ್ತಾ ಬಣ್ಣಗಳನ್ನು ಪಡೆಯುತ್ತದೆ. ಆದರೆ ಮೂರನೆಯ ವಿಧದಲ್ಲಿ ಕವಿಯೇ ತನ್ನ ಕವನವನ್ನು ವಾಚನ ಮಾಡಿದಾಗ ಸ್ವತಃ ಕವಿಯೇ ಕವನದ ಭಾಗವಾಗುತ್ತಾನೆ/ ಳೆ. ನಾವು ಕವಿಯ ಜೊತೆ ಜೊತೆಯೇ ಕವನವನ್ನೂ ಕವಿಯನ್ನೂ ಓದಬೇಕು.
ಬರಹದ ಕವನ ಮತ್ತು ಓದಿನ ಕವನ ಎರಡೂ ಬೇರೆ ಬೇರೆ. ಒಂದು ಕವನ ಚೌಕಟ್ಟಿನಾಚೆಯೂ ಬೆಳೆಯುತ್ತದೆ. ಆ ಹಿನ್ನೆಲೆಯಲ್ಲಿ ’ನಾನು ’ ಕವನವನ್ನು ನಾನು ನೋಡುತ್ತೇನೆ. ನಾನು ಅರ್ಥ ಮಾಡಿಕೊಂಡ ಹಾಗೆ ಹೇಳಲು ಪ್ರಯತ್ನಿಸುವೆ. ಮಮತಾ ಡಯಾಸ್ ಮುಂದೆ ನಿಂತು ಸಭಿಕರಿಗೆ ನಮಸ್ಕಾರ ಹೇಳಿ ಮೆಲುಧ್ವನಿಯಲ್ಲಿ ’ನಾನು’ ಕವನವನ್ನು ವಾಚಿಸತೊಡಗಿದರು. ಹನ್ನೆರಡು ಪದಗಳ ಕವನ ಹದಿನೇಳು ಪದಗಳಾದವು. ಐದು ’ನಾನು’ಗಳು ಸೇರಿಕೊಂಡವು. ಮತ್ತು ಅವುಗಳ ಮೇಲೆ ಕವಯತ್ರಿಯ ಸ್ವರಭಾರ ಬಿದ್ದವು. ಕವನ ಸಭಿಕರಿಗೆ ಇನ್ನೇನೋ ದಾಟಿಸಿದವು. ಏನು ದಾಟಿಸಿದವು?
ಕವನದ ಮೊದಲ ಮೂರು ಸಾಲು:
ನಾನು ಎಂದರೆ
ಒಂದು ಜೊತೆ ಮೆತ್ತಗಿನ ಮೊಲೆ,
ತೊಡೆ ಸಂದಲ್ಲಿ ಅಡಗಿದ ಕತ್ತಲ ಕೋಶ – ಅದು ’ನಮಗೆ’ ಹೇಳಿದ್ದು. ನೀವು ’ನನ್ನನ್ನು’ ಅರ್ಥ ಮಾಡಿಕೊಂಡದ್ದು ಅಷ್ಟೇ ತಾನೆ? ಎಂದು ಪ್ರಶ್ನಿಸಿದ್ದು.
ಈಗ ಫೇಸ್ಬುಕ್ ನಲ್ಲಿ ಆಗುತ್ತಿರುವುದು ಅದೇ ತಾನೇ?
ಕವನದ ನಂತರದ ಮೂರು ಸಾಲು:
ನಾನು..
ನಾನು ಅಂದರೆ..
ನಾನು ಅಂದರೆ-ನಾನು- ಇದು ಕವಯತ್ರಿಯ ನಿಲುವು.
ಕೊನೆಯ ’ನಾನು ’ ಹೇಳಿದಾಗ ಆ ಪದದ ಮೇಲೆ ಬಿದ್ದ ಸ್ವರದ ಒತ್ತಡ ಅಧಿಕಾರಯುತವಾಗಿತ್ತು. ಸ್ವಾಭಿಮಾನದಿಂದ ಕೂಡಿತ್ತು. ಅದು ’ಡೊಂಟ್ ಕೇರ್ ’ ಮನಸ್ಥಿತಿ.
ಅವಳ ’ನಾನು’ ಇವರ ’ನಾನು’ ಅನ್ನು ಕೆರಳಿಸಿತು. ಅವಳ ನಾನು ವಿಜೃಂಭಿಸಿದ್ದಕ್ಕೆ ಇವರ ನಾನು ಕೆರಳಿ ಫೇಸ್ಬುಕ್ ನಲ್ಲಿ ಹರಡಿಕೊಂಡು ಹೊರಳಾಡುತ್ತಿದೆ.
ಕವನ ಈಗ ಸಂಕಲನದಾಚೆ ಬೆಳೆಯುತ್ತಿದೆ. ಹರಡಿಕೊಳ್ಳುತ್ತಿದೆ..
ಕವನ ಈಗ ಕವಿಯಿಂದ ಬಿಡಿಸಿಕೊಂಡು ಓದುಗನ ಹೆಗಲೇರಿದೆ. ಈಗ ಅವರದನ್ನು ಮುದ್ದಿಸಲಿ ಅಥವಾ ಕಾಲಡಿಗೆ ಹಾಕಿ ಹೊಸಕಿ ಬಿಡಲಿ ಇಲ್ಲವೇ ಸಾರು ಮಾಡಿಕೊಂಡು ತಿನ್ನಲಿ. ಕವಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.
ಆದರೆ ಬುಕ್ ಬ್ರಹ್ಮ ತಲೆಕೆಡಿಸಿಕೊಳ್ಳಬೇಕಿತ್ತು. ಯಾಕೆಂದರೆ-
ಮಾರ್ಚ್22 ಮತ್ತು 23 ರಂದು ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ನಡೆಯಿತು. ಅದರ ಎಲ್ಲಾ ಗೋಷ್ಠಿಗಳ ನೇರ ಪ್ರಸಾರವನ್ನು ಬುಕ್ ಬ್ರಹ್ಮ ಎಂಬ ಆನ್ಲೈನ್ ಮಾಧ್ಯಮ ಮಾಡಿತ್ತು. ಆಗ ಈ ಕವನವನ್ನು ಎಷ್ಟು ಜನ ಲೈವ್ ನೋಡಿದ್ದಾರೋ ಗೊತ್ತಿಲ್ಲ. ಆದರೆ ಅನಂತರದಲ್ಲಿ ಅದು ಕವಯತ್ರಿಯರ ಕವನಗಳನ್ನು ಬಿಡಿ ಬಿಡಿಯಾಗಿ ತನ್ನ ವಿಡಿಯೋ ಚಾನಲ್ ನಲ್ಲಿ ಪ್ರಸಾರ ಮಾಡಿದೆ.
ಓದುವ ಕವನ ಅಕ್ಷರಸ್ಥರನ್ನು ವಿಶಾಲಾರ್ಥದಲ್ಲಿ ವಿದ್ಯಾವಂತರನ್ನು ಮಾತ್ರ ತಲುಪುತ್ತೆ. ಆದರೆ ಆಲಿಸುವ ಕವನ ಅವಿದ್ಯಾವಂತರನ್ನೂ ತಲುಪುತ್ತದೆ. ಅಂದರೆ ಕವನದ ಬಗ್ಗೆ ಏನೇನೂ ಗೊತ್ತಿಲ್ಲದವರಿಗೂ ತಲಪುತ್ತದೆ. ಅದು ಈಗ ಫೇಸ್ಬುಕ್ ನಲ್ಲಿ ಕಾಣಿಸಿಕೊಳ್ಳುತ್ತಿದೆ.
ಉಷಾ ಕಟ್ಟೆಮನೆ, ಬಂಡಿಹೊಳೆ.
ಇದನ್ನೂ ಓದಿ- ಪುರುಷಹಂಕಾರಕ್ಕೆ ಪೆಟ್ಟು ಕೊಟ್ಟ ಪುಟ್ಟ ಪದ್ಯ