ದೌರ್ಜನ್ಯ: ದಯಾಮರಣ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಶ್ರೀನಿವಾಸಪುರ ತಾ. ಬಸನಪಲ್ಲಿಯ ನರಸಿಂಹಪ್ಪ ಕುಟುಂಬ

Most read

ಬೆಂಗಳೂರು: ದಲಿತ ವರ್ಗಕ್ಕೆ ಸೇರಿದ ನನ್ನ ಕುಟುಂಬದ ಮೇಲೆ ಸವರ್ಣೀಯರು ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದು, ತಮಗೆ ಮತ್ತು ತಮ್ಮ ಕುಟುಂಬದವರಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಡು ಗ್ರಾಮ ಪಂಚಾಯಿತಿಯ ಬಸನಪಲ್ಲಿ ಗ್ರಾಮದ ನರಸಿಂಹಪ್ಪ(53) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ನನಗೆ, ನನ್ನ ಪತ್ನಿ ಕೆ.ಸಿ.ಲಕ್ಷ್ಮಿ 32 ವರ್ಷ ವಯಸ್ಸು, ಮಕ್ಕಳಾದ ಬಿ.ಎನ್.ರಾಹುಲ್(13 ವರ್ಷ),  ಬಿ.ಎನ್. ಕಾರ್ತಿಕ್ (10 ವರ್ಷ) ಮತ್ತು ಮಗಳು ಬಿ.ಎನ್.ವೀಣಾ( 8 ವರ್ಷ)  ಇವರಿಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

ಮೇಲ್ಜಾತಿಗೆ ಸೇರಿದ ತಮ್ಮ ಮನೆಯಲ್ಲಿ ಜೀತ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಗ್ರಾಮದ ಕೆಲವು ಸವರ್ಣೀಯರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ದೌರ್ಜನ್ಯ ಎಸಗುತ್ತಾ ಬರುತ್ತಿದ್ದಾರೆ.  

ನಾನು ಮತ್ತು ನನ್ನ ಹೆಂಡತಿ ಮೇಲ್ಜಾತಿಯವರ ಮನೆಗೆ ಕೆಲಸಕ್ಕೆ ಹೋಗುವುದಿಲ್ಲ ಎಂಬ ಕಾರಣಕ್ಕೆ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತ ಬರುತ್ತಿದ್ದಾರೆ. ಏಪ್ರಿಲ್‌ 25 ರಂದು ಸಂಜೆ ನಮ್ಮ ಕುಟುಂಬದ ಮೇಲೆ ಸರ್ವಣೀಯರಾದ ರಾಜಾರೆಡ್ಡಿ, ಪೆಂಕಟರಾಮಣ್ಣ ಅವರ ಪತ್ನಿ ರಾಮಲಕ್ಷ್ಮಮ್ಮ ಪುತ್ರ ಸುರೇಂದ್ರ ರೆಡ್ಡಿ ರವರು ನನಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧ, ಹುಣಸೆ,ಮಾವು,ಜೇನು ಕೃಷಿ ಇತ್ಯಾದಿ ಬೆಳೆಗಳನ್ನು ಸಂಪೂರ್ಣವಾಗಿ ನಾಶಮಾಡಿರುತ್ತಾರೆ. ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿರುತ್ತಾರೆ.

ಮಾರಕಾಸ್ತ್ರಗಳಿಂದ ನನ್ನ ಮತ್ತು ಪತ್ನಿ ಮಕ್ಕಳನ್ನು ಕೊಂದು ಹಾಕಲು ಮುಂದಾದಾಗ ತಪ್ಪಿಸಿಕೊಂಡು ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದೇವೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದ ಕಾರಣಕ್ಕೆ ಅವರು ಮತ್ತೆ ಮತ್ತೆ ನಮಗೆ ಬೆದರಿಕೆ ಹಾಕುತ್ತಲೇ ಬರುತ್ತಿದ್ದಾರೆ. ರಾಜ್ಯ ಸರ್ಕಾರದ ಹಲವು ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ.

ಜಾತಿ ನಿಂದನೆ ದೂರನ್ನು ಹಿಂಪಡೆಯದಿದ್ದರೆ ಊರು ಬಿಟ್ಟು ಹೋಗುವಂತೆಯೂ ಬೆದರಿಕೆ ಹಾಕುತ್ತಿದ್ದಾರೆ ಆದ್ದರಿಂದ ನಾವು ಬದುಕುವುದೇ ಕಷ್ಟವಾಗಿದೆ. ವಾಸಕ್ಕೆ ಮನೆ ಇಲ್ಲದೆ ಬೀದಿ ಬೀದಿ ಅಲೆಯಬೇಕಾಗಿದೆ.

ಸವರ್ಣೀಯರ ಕೈಗಿ ಸಿಕ್ಕಿ ಅತ್ಯಾಚಾರ ಹಲ್ಲೆಗೊಳಗಾಗಿ ಅಸು ನೀಗುವುದಕ್ಕೂ ಮುನ್ನ ತಾವು  ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

More articles

Latest article