ಬೆಂಗಳೂರು: ತಮ್ಮ ಮನೆಗೆ ಬಂದಿದ್ದ ಇಬ್ಬರು ಕೊಲೆಗೆ ಪ್ರಯತ್ನ ನಡೆಸಿದ್ದು, ಅವರನ್ನು ಬಂಧಿಸುವಂತೆ ಸಹಕಾರ ಸಚಿವ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಗುರುವಾರ ದೂರು ನೀಡಿದ್ದಾರೆ.
ರಾಜೇಂದ್ರ ಅವರ ಜತೆಗೆ ಚರ್ಚಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಘಟನೆಯು ತುಮಕೂರಿನಲ್ಲಿ ನಡೆದಿದ್ದು, ಅಲ್ಲಿನ ಎಸ್ ಪಿ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ. ನಂತರ ಪ್ರತಿಕ್ರಿಯಿಸಿದ ರಾಜೇಂದ್ರ ಅವರು, ಶುಕ್ರವಾರ ತುಮಕೂರು ಎಸ್ ಪಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಮಿಯಾನ ಹಾಕುವವರ ಸೋಗಿನಲ್ಲಿ ಬಂದಿದ್ದ ಇಬ್ಬರು ಕೊಲೆಗೆ ಯತ್ನಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೆನ್ಡ್ರೈವ್ ಇದ್ದು ಅದನ್ನೂ ಡಿ.ಜಿ ಅವರಿಗೆಹಸ್ತಾಂತರ ಮಾಡಿರುವುದಾಗಿ ತಿಳಿಸಿದರು. ತಮ್ಮ ಕೊಲೆಗೆ ಸುಪಾರಿ ನೀಡಿರುವ ಮಾಹಿತಿ ಇದೆ. ಭರತ್ ಹಾಗೂ ಸೋಮ ಎಂಬುವವರು ರೂ. 5 ಲಕ್ಷ ಪಡೆದು ಕೊಲೆಗೆ ಪ್ರಯತ್ನಿಸಿದ್ದರು ಎನ್ನುವ ಮಾಹಿತಿಯಿದೆ. ನಾಳೆಯೇ ತುಮಕೂರಿನಲ್ಲಿ ಲಿಖಿತ ದೂರು ಸಲ್ಲಿಸುತ್ತೇನೆ ಎಂದು ಹೇಳಿದರು.
ನನ್ನ ಮೇಲೆ ಯಾವುದೇ ಹನಿಟ್ರ್ಯಾಪ್ ನಡೆದಿಲ್ಲ. ತಂದೆಯವರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆರಂಭವಾಗಿದೆ. ಬೆಂಗಳೂರಿನ ಗೆಸ್ಟ್ ಹೌಸ್ ಹಾಗೂ ತುಮಕೂರಿನಲ್ಲಿ ಇರುವ ಮನೆಗೆ ಸಿಐಡಿ ಪೊಲೀಸರು ಗುರುವಾರ ಬೆಳಿಗ್ಗೆ ಬಂದಿದ್ದರು. ಮನೆಯಲ್ಲಿ ಇದ್ದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ರಾಜೇಂದ್ರ ಉತ್ತರಿಸಿದರು.