ಬೆಂಗಳೂರು: ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಆರೋಪದಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಪಿ.ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್ ಐ ಆರ್ ದಾಖಲಾಗಿದೆ. ಕಿಶೋರ್ ಅವರ ಪತ್ನಿ, ನಾಗರಬಾವಿ ಟೀಚರ್ಸ್ ಕಾಲೊನಿ ನಿವಾಸಿ ಆರ್.ವರ್ಷಾ ಅವರು ನೀಡಿದ ದೂರಿನ ಮೇರೆಗೆ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಶೋರ್ ಅವರ ತಂದೆ ಪುಟ್ಟಚನ್ನಪ್ಪ, ತಾಯಿ ಸರಸ್ವತಮ್ಮ, ಸಹೋದರ ಪಿ.ಚಂದನ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳು. ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ, ವರ್ಷಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಧ್ಯವರ್ತಿಯೊಬ್ಬರು ಕಿಶೋರ್ ನನ್ನು ತೋರಿಸಿದ್ದರು. ಎರಡು ಕುಟುಂಬಗಳು ಒಪ್ಪಿ ಮದುವೆಗೆ ನಿರ್ಧಾರವಾಗಿತ್ತು. ಮಾತುಕತೆ ವೇಳೆ ಮದುವೆ ಖರ್ಚಿಗೆಂದು ರೂ. 25 ಲಕ್ಷ ಕೊಡುವಂತೆ ಪುಟ್ಟಚನ್ನಮ್ಮ ಹಾಗೂ ಕುಟುಂಬಸ್ಥರು ಕೇಳಿದ್ದರು. ಕೊನೆಗೆ ರೂ.10 ಲಕ್ಷಕ್ಕೆ ಮಾತುಕತೆಯಾಗಿತ್ತು. 2023ರ ನವೆಂಬರ್ 24ರಂದು ನಿಶ್ಚಿತಾರ್ಥ ನಡೆದಿತ್ತು. ಆಗ, 18 ಗ್ರಾಂ ಚಿನ್ನದ ಉಂಗುರವನ್ನು ಕಿಶೋರ್ ಗೆ ತೊಡಿಸಿದ್ದರು. ಕೆಲವು ದಿನಗಳ ಬಳಿಕ ಕಾರು ಕೊಡಿಸುವಂತೆ ಕಿಶೋರ್ ಕೇಳಿದ್ದರು. ಕಾರು ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ತಂದೆಯವರಿಗೆ ವಿಷಯ ಗೊತ್ತಾಗಿ, ಕಾರು ಕೊಡಿಸುವುದಾಗಿ ಹೇಳಿದ್ದರು. ಬೆಂಗಳೂರಿನ ರಾಜಾಜಿನಗರದ ಹುಂಡೈ ಶೋರೂಂನಲ್ಲಿ ರೂ.23 ಲಕ್ಷ ಮೌಲ್ಯದ ಕಾರು ಕೊಡಿಸಿದ್ದೆವು ಎಂದು ವಿವರಿಸಿದ್ದಾರೆ.
2024ರ ಫೆ.21ರಂದು ಮದುವೆ ನಡೆದಿತ್ತು. ಮದುವೆ ಸಂದರ್ಭದಲ್ಲಿ ರೂ.10 ಲಕ್ಷ ನಗದು, ಹುಡುಗನಿಗೆ 135 ಗ್ರಾಂ ಚಿನ್ನದ ಆಭರಣ, ವಧುವಿಗೆ 850 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಆಭರಣ ನೀಡಿದ್ದರು. ಅದ್ದೂರಿಯಿಂದ ಮದುವೆ ಮಾಡಿಕೊಡಲು ಪೋಷಕರು ರೂ.60 ಲಕ್ಷ ಖರ್ಚು ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮದುವೆಯಾದ ಸಂದರ್ಭದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪಿ.ಕಿಶೋರ್ ಕೆಲಸ ಮಾಡುತ್ತಿದ್ದರು. ಬೇರೆ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಲು ರೂ.10 ಲಕ್ಷ ತೆಗೆದುಕೊಂಡು ಬರುವಂತೆ ತಾಕೀತು ಮಾಡಿದ್ದರು. ಈಗಾಗಲೇ ಮದುವೆಗೆ ರೂ.1 ಕೋಟಿ ಖರ್ಚಾಗಿದೆ. ಮತ್ತೆ ಹಣ ಕೇಳಿದರೆ, ತಂದೆ ಎಲ್ಲಿಂದ ಹಣ ತಂದು ಕೊಡುತ್ತಾರೆಂದು ಪ್ರಶ್ನಿಸಿದ್ದೆ. ಗನ್ ತೆಗೆದುಕೊಂಡು ಶೂಟ್ ಮಾಡಲು ಮುಂದಾಗಿದ್ದರು. ಧರ್ಮಸ್ಥಳಕ್ಕೆ ವರ್ಗಾವಣೆಯಾದ ಮೇಲೆ ಪೀಠೋಪಕರಣ ಖರೀದಿಗೆ ರೂ. 2 ಲಕ್ಷ ಕೇಳಲು ಹೇಳಿದ್ದರು. ಒಪ್ಪದಿದ್ದಾಗ ವರದಕ್ಷಿಣೆ ವಿಚಾರವಾಗಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿದ್ದ ಲಟ್ಟಣಿಗೆಯಿಂದ ಹಲ್ಲೆ ಮಾಡಿದ್ದರು. ಇದೇ ತಿಂಗಳ 21ರಂದು ಕಿಶೋರ್ ಅವರು ರಾತ್ರಿ 9ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ನಿಂದಿಸಿ ಪೊಲೀಸ್ ಬೆಲ್ಟ್ನಿಂದ ಹಲ್ಲೆ ನಡೆಸಿದ್ದಾರೆ. ಪೋಷಕರೊಂದಿಗೆ ಬೆಂಗಳೂರಿಗೆ ಬಂದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ ಎಂಬುದಾಗಿ ದೂರಿನಲ್ಲಿ ವರ್ಷಾ ಉಲ್ಲೇಖಿಸಿದ್ದಾರೆ.