ಮಂಗಳೂರು: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಸನಾತನಿಯ ದುಷ್ಕ್ರತ್ಯವನ್ನು ಖಂಡಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ರಾಜ್ಯದ ವಿವಿಧ ಭಾಗಗಳಲ್ಲೂ ಶೂ ಎಸೆದ ವಕೀಲನ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
ನಗರದಲ್ಲಿಂದು ವಿದ್ಯಾರ್ಥಿ ಯುವಜನ ಮಹಿಳಾ ಆದಿವಾಸಿ ದಲಿತ,ರೈತ ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದ ಅಖಿಲ ಭಾರತ ವಕೀಲರ ಸಂಘಟನೆಯ ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಅವರು, ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ತೂರಿರುವುದು ಆಕ್ರೋಶಿತನೊಬ್ಬನ ತಕ್ಷಣದ ಪ್ರತಿಕ್ರಿಯೆ ಅಲ್ಲ. ಇದರ ಹಿಂದೆ ವ್ಯವಸ್ಥಿತವಾದ ಪಿತೂರಿ ಇದೆ. ಶೂ ಎಸೆದ ವ್ಯಕ್ತಿ ಬಲಪಂಥೀಯ ಸಿದ್ದಾಂತ, ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿದ್ದಾನೆ. ಆರ್ ಎಸ್ ಎಸ್ ಗೆ ನೂರು ವರ್ಷ ತುಂಬಿರುವ ಸಂದರ್ಭದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು, ಹೊರಡುತ್ತಿರುವ ಸಂದೇಶಗಳು, ಮೋದಿ ನೇತೃತ್ವದ ಸರಕಾರ ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿ ನೀಡಿರುವ ಹೇಳಿಕೆಗಳಿಗೂ, ಚಪ್ಪಲಿ ತೂರಿದ ವ್ಯಕ್ತಿ ಘಟನೆಯ ತರುವಾಯ ನೀಡಿದ ಹೇಳಿಕೆಗಳಿಗೂ ಸಂಬಂಧ ಇದೆ. ಭಾರತದ ಪ್ರಜಾಪ್ರಭುತ್ವ, ಜಾತ್ಯಾತೀತತೆ, ಸಂವಿಧಾನದ ಘನತೆಯನ್ನು ಘಾಸಿಗೊಳಿಸುವ ದುರುದ್ದೇಶದ ಭಾಗವಾಗಿಯೆ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಕಡೆಗೆ ಚಪ್ಪಲಿ ತೂರಲಾಗಿದೆ. ಈ ಹುನ್ನಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
AITUC ಜಿಲ್ಲಾ ಮುಖಂಡ ಬಿ. ಶೇಖರ್ ರವರು ಮಾತನಾಡಿ, ಮುಖ್ಯ ನ್ಯಾಯಮೂರ್ತಿಯವರತ್ತ ಚಪ್ಪಲಿ ತೂರಿದ ಘಟನೆಯ ಹಿಂದೆ ಸಂಘ ಪರಿವಾರದ ಶಕ್ತಿಗಳ ಪಿತೂರಿ ಅಡಗಿದೆ. ಘಟನೆಯ ತರುವಾಯ ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರು ನ್ಯಾಯಮೂರ್ತಿಗಳ ವಿರುದ್ದ ಸೃಷ್ಟಿಸಿ ಹರಿಯ ಬಿಡುತ್ತಿರುವ ದ್ವೇಷ ಪೂರಿತ ಕತೆಗಳು ಘಟನೆಯಲ್ಲಿ ಸಂಘ ಪರಿವಾರದ ಪಾತ್ರವನ್ನು ಎತ್ತಿತೋರಿಸುತ್ತದೆ. ದೇಶದ ಸಂವಿಧಾನವನ್ನೇ ಅಪ್ರಸ್ತುತಗೊಳಿಸುವ, ಬಲಪ್ರಯೋಗದ ಮೂಲಕ ಸನಾತನ ಮನುವಾದವನ್ನು ದೇಶದ ಮೇಲೆ ಅಘೋಷಿತವಾಗಿ ಹೇರುವ ಈ ಷಡ್ಯಂತ್ರವನ್ನು ಪ್ರಜಾಪ್ರಭುತ್ವವಾದಿಗಳು ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದು ಹೇಳಿದರು
ದಲಿತ ಚಳವಳಿಯ ಹಿರಿಯ ನಾಯಕ ಎಂ.ದೇವದಾಸ್ ರವರು ಮಾತನಾಡಿ, ಭಾರತದ ಸಂವಿಧಾನ, ಪ್ರಜಾಪ್ರಭುತ್ವವು ದಮನಿತ ಸಮುದಾಯಗಳಿಗೆ ಅವಕಾಶ ಒದಗಿಸುತ್ತಿರುವುದು, ಸರ್ವೋಚ್ಚ ನ್ಯಾಯಾಲಯದ ಉನ್ನತ ಪೀಠಗಳಲ್ಲಿ ವಂಚಿತ ಸಮುದಾಯಗಳು, ದಲಿತ ಜಾತಿಗಳಿಂದ ಬಂದವರು ಕುಳಿತುಕೊಳ್ಳುವುದು ಸನಾತನವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಜೀವ ವಿರೋಧಿ, ಅಸಮಾನತೆ, ಜಾತಿ ತಾರತಮ್ಯ ಪ್ರತಿಪಾದಿಸುವ ಮನುವಾದವನ್ನು ಹಿಂಬಾಗಿಲ ಮೂಲಕ ತರಲು ಈ ಸನಾತನವಾದಿಗಳು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೆ ದಲಿತ ಸಮುದಾಯದಿಂದ ಬಂದಿರುವ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಸನಾತನಿಯೊಬ್ಬ ಚಪ್ಪಲಿ ತೂರಿದ್ದಾನೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
ಸಮುದಾಯ ಸಂಘಟನೆಯ ರಾಜ್ಯ ನಾಯಕರಾದ ವಾಸುದೇವ ಉಚ್ಚಿಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮುಖಂಡ ಶೇಖರ್ ವಾಮಂಜೂರು,DYFI ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.