ಹಾಸನ: ಸಕಲೇಶಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಬಳಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸುತ್ತಿದ್ದ ವೇಳೆ ಸ್ಥಳೀಯ ಕಿಡಿಗೇಡಿಗಳ ಗುಂಪು ಫೋಟೋಗ್ರಾಫರ್ ಗಳ ಮೇಲೆ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ದಾಳಿಯ ವೇಳೆ ಕಿಡಿಗೇಡಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ಉಪಕರಣಗಳನ್ನು ಒಡೆದು ಹಾಕಿದ್ದಲ್ಲದೆ ಚಿನ್ನ ಸೇರಿದಂತೆ ಹಣವನ್ನೂ ದೋಚಿದ್ದಾರೆ ಎಂದು ದಾಳಿಗೆ ಒಳಗಾದ ಫೋಟೋಗ್ರಾಫರ್ ಗಳು ಆರೋಪಿಸಿದ್ದಾರೆ. ಫೋಟೋಗ್ರಾಫರ್ ಗಳ ಮೇಲೆ ದಾಳಿ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.
ದಾಳಿಗೊಳಗಾದ ಹಾಸನದ ಫೋಟೋಗ್ರಾಫರ್ ಕೆ. ಎಸ್. ನವೀಂದನ್, ಚೇತನ್, ಬೆಂಗಳೂರಿನ ಮತ್ತೊಂದು ಫೋಟೋಗ್ರಫಿ ತಂಡದ ಅಭಿಷೇಕ್ ಮತ್ತು ಯಶವಂತ್ ಗಾಯಗೊಂಡಿದ್ದು ಸಕಲೇಶಪುರ ಹಾಗೂ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಸಕಲೇಶಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಎಂಟು ಮಂದಿ ವಿರುದ್ದ ಕ್ರೈಂ ಸಂಖ್ಯೆ 49/2026 ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಸದ್ಯ ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

