ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ರಿಂದ ಶೇ.5ಕ್ಕೆ ಇಳಿಸಿರುವುದರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಸೆ.22 ರಿಂದಲೇ ನಂದಿನಿ ಉತ್ಪನ್ನಗಳ ದರ ಶೇ 7ರಷ್ಟು ಕಡಿಮೆಯಾಗಲಿದೆ. ಪರಿಷ್ಕೃತ ದರ ಜಾರಿ ಸಂಬಂಧ ಆದೇಶ ಹೊರಡಿಸಲಾಗುತ್ತದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಜಿಎಸ್‌ಟಿ ಕಡಿಮೆ ಮಾಡಲು ನಿರ್ಧರಿಸಿದ್ದು ಮೊಸರಿನ ದರ ಲೀಟರ್‌ಗೆ ರೂ.4 ಕಡಿಮೆ ಆಗುವ ನಿರೀಕ್ಷೆಯಿದೆ. ಜಿಎಸ್‌ಟಿ ಇಳಿಕೆ ಕುರಿತು ಕೇಂದ್ರದಿಂದ ಸೂಚನೆ ಬಂದಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಆದೇಶ ಜಾರಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಎಂಎಫ್‌ನ ಹಿರಿಯ ಅಧಿಕಾರಿಗಳು ಇಂದು ಸಭೆ ನಡೆಸಲಿದ್ದು, ದರ ಇಳಿಕೆ ಕುರಿತು ಚರ್ಚೆ ನಡೆಸಲಿದ್ದಾರೆ. ಬರುವ ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
2017ರಿಂದಲೇ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿಯನ್ನು ಜಾರಿಗೊಳಿಸಲಾಗಿತ್ತು. ನಂತರ 2022ರಲ್ಲಿ ಜಿಎಸ್‌ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು.
ಜಿಎಸ್ಟಿ ಇಳಿಕೆಯಾದ ನಂತರ ಮದರ್ ಡೈರಿಯ ಉತ್ಪನ್ನಗಳ ಬೆಲೆಯನ್ನು ಇಳಿಸಲಾಗಿದೆ. ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಇತ್ಯಾದಿ ಉತ್ಪನ್ನಗಳ ಬೆಲೆಯನ್ನು ಮದರ್ ಡೈರಿ ಕಡಿಮೆಗೊಳಿಸಿದೆ ಎಂದು ತಿಳಿದುಬಂದಿದೆ.