ಕ್ಷಮೆಯಾಚಿಸಿದ ಅರವಿಂದ್ ಬೆಲ್ಲದ್​ ನಡೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ

Most read

ಸಿಎಂ ವಿರುದ್ಧ ‘ಅಪ್ಪನ ಮನೆ ಆಸ್ತಿನಾ’ ಎಂಬ ಪದ ಪ್ರಯೋಗ ಸಂಬಂಧ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರು ಸಿದ್ದರಾಮಯ್ಯನವರ ಬಳಿ ಕ್ಷಮೆಯಾಚಿಸಿದ್ದಾರೆ. ಇನ್ನು ಬಳಸಿದ್ದ ಪದಕ್ಕೆ ಬೆಲ್ಲದ್​ ಕ್ಷಮೆಯಾಚಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ‌ ಅರವಿಂದ್ ಬೆಲ್ಲದ್​ ನಡೆಯನ್ನು ಶ್ಲಾಘಿಸಿದ್ದಾರೆ.

ಇನ್ನು ಬಳಸಿದ್ದ ಪದಕ್ಕೆ ಬೆಲ್ಲದ್​ ಕ್ಷಮೆಯಾಚಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಕೆಲವೊಮ್ಮೆ ಉದ್ವೇಗದಲ್ಲಿ ಮತ್ತೊಬ್ಬರ ಘನತೆಗೆ ಚ್ಯುತಿ ತರುವ ಹೇಳಿಕೆ, ಅರಿವಿಗೆ ಬಾರದೆ ಘನತೆಗೆ ಚ್ಯುತಿ ತರುವ ಹೇಳಿಕೆ ಬಂದು ಬಿಡುತ್ತದೆ . ಜಿಂದಾಲ್​ ಕಂಪನಿಗೆ ಸರ್ಕಾರ ಭೂಮಿ ನೀಡುವ ತೀರ್ಮಾನ ಮಾಡಿತ್ತು. ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಶಾಸಕ ಬೆಲ್ಲದ್ ಮಾತಾಡಿದ್ದರು. ಶಾಸಕ ಅರವಿಂದ ಬೆಲ್ಲದ್‌ ವೈಯಕ್ತಿಕವಾಗಿ ನನ್ನನ್ನು ನಿಂದನೆ ಮಾಡಿದ್ದರು. ತಮ್ಮ ತಪ್ಪಿನ ಅರಿವಾಗಿ ಬೆಲ್ಲದ್​ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ ಬೆಲ್ಲದ್​ ಅವರ ಈ ನಡೆಯನ್ನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ. ಜೊತೆಗೆ ಅರವಿಂದ ಬೆಲ್ಲದ್​ ಬಗ್ಗೆ ನನ್ನ ಮನಸ್ಸಿನಲ್ಲಿ ದ್ವೇಷವಾಗಲಿ. ಬೇಸರವಾಗಲಿ ಯಾವುದು ಇಲ್ಲವೆಂಬುದನ್ನು ಈ ಮೂಲಕ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಯ್ತಪ್ಪಿನಿಂದ ಏಕವಚನ ಬಳಸಿ ನಂತರ ವಿಷಾದ ವ್ಯಕ್ತಪಡಿಸಿದ್ದೇನೆ. ಆ ತಪ್ಪು ಮರುಕಳಿಸದಂತೆ ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ, ನನ್ನ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ವಿಪಕ್ಷಗಳ ಹಲವು ಕಿರಿಯ, ಹಿರಿಯ ನಾಯಕರಿಂದ ವೈಯಕ್ತಿಕ ನಿಂದನೆ, ಚಾರಿತ್ರ್ಯಹನನ ಮಾಡುವಂತಹ ಪದಬಳಕೆ ಕೇಳಿದ್ದೇನೆ, ಎದುರಿಸಿದ್ದೇನೆ. ಮೊದಲ ಬಾರಿ ಶಾಸಕ ಬೆಲ್ಲದ್ ಬೇಸರ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದಾರೆ. ಸ್ವತಃ ಅವರೇ ಬೇಸರ ವ್ಯಕ್ತಪಡಿಸಿ ಪತ್ರದ ಮೂಲಕ ಕ್ಷಮೆ ಕೇಳಿದ್ದಾರೆ. ಈ ಮೂಲಕ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಬೆಲ್ಲದ್ ನಡೆಯನ್ನು ಶ್ಲಾಘಿಸಿದರು.

ಅರವಿಂದ ತಂದೆ ಚಂದ್ರಕಾಂತ ಬೆಲ್ಲದ್ ನನ್ನ ದೀರ್ಘಕಾಲದ ಸ್ನೇಹಿತರು. ಚಂದ್ರಕಾಂತ ಬೆಲ್ಲದ್ ಸಜ್ಜನ ರಾಜಕಾರಣಿ. ಅವರ ಸಜ್ಜನಿಕೆಯ ಪರಂಪರೆ ಮುಂದುವರಿಸಲಿ ಎಂದು ಹಾರೈಸುತ್ತೇನೆ. ಬೆಲ್ಲದ್‌ ನಡೆ ಮೌಲ್ಯಯುತ ರಾಜಕಾರಣದ ಜೀವಂತಿಕೆಯ ಸಂಕೇತ. ‘ಪಶ್ಚಾತ್ತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ’ ಎಂಬ ಮಾತು. ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತಿದೆ ಎಂದಿದ್ದಾರೆ.

More articles

Latest article