ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ 5 ವರ್ಷಗಳ ನಂತರ ರಾಜ್ಯ ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣೆ ನಡೆದಿದೆ. ಇದೇ ಮೊದಲ ಬಾರಿಗೆ ಶೇ.64 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹಾಗಾದರೆ ಈ ಪ್ರಮಾಣದಲ್ಲಿ ಮತದಾರರು ಮತ ಚಲಾಯಿಸಲು ಕಾರಣಗಳೇನು ಮತ್ತು ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಕಣಿವೆ ರಾಜ್ಯದಲ್ಲಿ ಆಗಿರುವ ಮತ್ತು ಆಗದೇ ಇರುವ ಬದಲಾವಣೆಗಳಾದರೂ ಏನು ಪ್ರಶ್ನೆಗಳೂ ಸಹಜವಾಗಿಯೇ ಮೂಡುತ್ತವೆ. CSDL ಮತ್ತು ಲೋಕನೀತಿ ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡಲಾಗಿದೆ.
ಶೇ.59ರಷ್ಟು ಮತದಾರರು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮತ ಚಲಾಯಿಸಿದ್ದೇವೆಯೇ ಹೊರತು 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಅಲ್ಲ ಎಂದು ಹೇಳಿದ್ದಾರೆ. ಶೇ.22ರಷ್ಟು ಮತದಾರರು ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಮತ ಹಾಕಿರುವುದಾಗಿ ತಿಳಿಸಿದ್ದಾರೆ. ಶೇ.19ರಷ್ಟು ಮತದಾರರು ಇಂತಹುದೇ ಕಾರಣಕ್ಕೆ ಹಕ್ಕು ಚಲಾಯಿಸಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಕಣಿವೆ ರಾಜ್ಯಕ್ಕೆ ಮತ್ತೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಬೇಕೆಂದೂ ಬಯಸಿದ್ದಾರೆ. ಶೇ. 64 ರಷ್ಟು ಮತದಾರರು ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಬೇಕು ಎಂದು ವಾದಿಸಿದ್ದಾರೆ. ವಿಶೇಷ ಸ್ಥಾನಮಾನ ಬೇಡ ಎಂದು ಶೇ.23 ರಷ್ಟು ಮತದಾರರು ಮಾತ್ರ ಸಮೀಕ್ಷೆಯಲ್ಲಿ ಉತ್ತರಿಸಿದ್ದಾರೆ. ಮತ್ತೆ ಏಕೆ ಈ ವಿಶೇಷ ಸ್ಥಾನಮಾನ ಬೇಕೆಂಬ ಪ್ರಶ್ನೆಗೆ ಜಮ್ಮು ಕಾಶ್ಮೀರದ ಅಭಿವೃದ್ದಿಗೆ ಪೂರಕ ಎಂದು ಶೇ.29, ರಾಜ್ಯದ ಸಾಂಸ್ಕೃತಿಕ ಗುರುತಿನ ಉಳಿವಿಗೆ ಅವಶ್ಯಕ ಎಂದು ಶೇ.28 ಮತ್ತು ಜಮ್ಮು ಮತ್ತು ಕಾಶ್ಮೀರದ ಭೂಮಿ ರಕ್ಷಣೆಗೆ ಅನಿವಾರ್ಯ ಎಂದು ಶೇ.40ರಷ್ಟು ಮತದಾರರು ಪ್ರತಿಪಾದಿಸಿದ್ದಾರೆ.
ಒಟ್ಟಾರೆ 370ನೇ ವಿಧಿ ಇಲ್ಲದೇ ಹೋದಲ್ಲಿ ರಾಜ್ಯದ ಸಾಂಸ್ಕೃತಿಕ ಗುರುತು ಮತ್ತು ಭೂಮಿಯನ್ನು ಕಳೆದುಕೊಳ್ಳುವ ಆತಂಕ ಇಲ್ಲಿನ ಗರಿಷ್ಠ ಮತದಾರರನ್ನು ಕಾಡುತ್ತಿದೆ ಎನ್ನುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಚುನಾವಣೆಯಲ್ಲಿ ಮತದಾನ ಮಾಡಿರುವವರ ಬಲವಾದ ಬಯಕೆಯೂ ವಿಶೇಷ ಸ್ಥಾನಮಾನ ಬೇಕೆನ್ನುವುದೇ ಆಗಿದೆ. ಶೇ.81ರಷ್ಟು ಮತದಾರರು ವಿಶೇಷ ಸ್ಥಾನಮಾನದಿಂದ ಮಾತ್ರ ಉತ್ತಮ ಭವಿಷ್ಯವನ್ನು ಕಾಣಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷ ರಾಜ್ಯದ ಸ್ಥಾನಮಾನದಿಂದ ಮಾತ್ರ ಕಣಿವೆ ರಾಜ್ಯ ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದುತ್ತದೆ ಮತ್ತು ಕಾನೂನು ಸುವ್ಯವಸ್ಥೆ ಸುಧಾರಣೆಗೆ ಅವಶ್ಯಕ ಎಂದು ಬಹುತೇಕ ಮತದಾರರು ಉತ್ತರಿಸಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.40ರಷ್ಟು ಮಂದಿ ಅಭಿವೃದ್ಧಿ ವೇಗವನ್ನು ಪಡೆದುಕೊಂಡಿದೆ ಎಂದರೆ ಶೇ.31ರಷ್ಟು ಮಂದಿ ಮೊದಲಿದ್ದ ಹಾಗೆಯೇ ಇದೆ ಎಂದು ಹೇಳುತ್ತಾರೆ. 370ನೇ ವಿಧಿ ರದ್ದುಗೊಂಡ ನಂತರ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಶೇ.40ರಷ್ಟು ಮಂದಿ ಮತ್ತು ಇಲ್ಲ ಎಂದು ಶೇ.31ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇ.44ರಷ್ಟು ಮಂದಿ ಪ್ರವಾಸೋದ್ಯಮ ಚಿಗುರಿಕೊಂಡಿದೆ ಎಂದು ಹೇಳಿದ್ದರೆ ಶೇ.31ರಷ್ಟು ಮಂದಿ ಯಥಾಸ್ಥಿತಿ ಮುಂದುವರೆದಿದೆ ಎನ್ನುತ್ತಾರೆ.
ಆದರೆ 370ನೇ ವಿಧಿ ರದ್ದುಗೊಂಡ ನಂತರವೂ ಒಂದೆರಡು ಸಂಗತಿಗಳಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಶೇ.31ರಷ್ಟು ಮಂದಿ ಹೇಳಿದ್ದರೆ ಶೇ.34ರಷ್ಟು ಮಂದಿ ಯಾವುದೇ ಬದಲಾವಣೆಯಾಗಿಲ್ಲ, ಮೊದಲಿನಂತೆಯೇ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಜನರ ನಡುವೆ ಸಂಬಂಧ ಸುಧಾರಿಸಿದೆಯೇ ಎಂಬ ಬಗ್ಗೆಯೂ ಸಮೀಕ್ಷೆ ನಡೆದಿದೆ. ಶೇ.23ರಷ್ಟು ಮಂದಿ ಸಂಬಂಧ ಸುಧಾರಿಸಿದೆ ಎಂದರೆ ಶೇ.35ರಷ್ಟು ಮಂದಿ ಐದು ವರ್ಷಗಳ ಹಿಂದೆ ಇದ್ದ ಹಾಗೆಯೇ ಇದೆ ಎಂದು ಉತ್ತರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಾಗರೀಕರಿಗೆ ಪ್ರಜಾಪ್ರಭುತ್ವದ ವಿಶ್ವಾಸ ಮೂಡಿರುವುದು ಗೋಚರಿಸುತ್ತಿದೆ. ಹಾಗೆಯೇ 370ನೇ ವಿಧಿ ಮರುಸ್ಥಾಪಿತವಾಗಬೇಕು ಎನ್ನುವುದೂ ಕಣಿವೆಯ ಜನರ ಹೆಬ್ಬಯಕೆಯಾಗಿದೆ. ವಿಶೇಷ ಸ್ಥಾನಮಾನ ನೀಡಿದರೆ ಮಾತ್ರ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯಾಗುತ್ತದೆ. ಇಲ್ಲಿನ ಜನರ ಭೂಮಿ ರಕ್ಷಣೆಯಾಗುತ್ತದೆ ಮತ್ತು ಮುಖ್ಯವಾಗಿ ಸಾಂಸ್ಕೃತಿಕ ಗುರುತು ಉಳಿಯುತ್ತದೆ ಎನ್ನುವುದು ಅವರ ಬಯಕೆಯಾಗಿದೆ.